ಸಾರಾಂಶ
ಮಣಿಪಾಲ: ನಮ್ಮ ಜೀವನದಲ್ಲಿರುವ ಎಲ್ಲ ರೀತಿಯ ಆಸೆ, ಆಕಾಂಕ್ಷೆ, ಕನಸುಗಳನ್ನು ಸಿಗುವ ಅವಕಾಶಗಳ ಮೂಲಕ ಈಡೇರಿಸಿಕೊಳ್ಳುವುದರ ಜೊತೆಗೆ, ದೇಶ ಸೇವೆಯ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಶಿಸ್ತು, ಸಂಯಮ ಮತ್ತು ಮನಸ್ಸಿನ ನಿಗ್ರಹವು ಶಿಕ್ಷಣದ ಮೂಲಕವೇ ಸಾಧ್ಯ. ಎನ್‌ಸಿಸಿಯಂತಹ ಅತ್ಯುತ್ತಮ ಸಂಘಟನೆಯನ್ನು ಸೇರುವುದರಿಂದ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಹೆಚ್ಚುತ್ತದೆ ಎಂದು ಕ್ಯಾ.ಗಣೇಶ್ ಕಾರ್ಣಿಕ್ ಹೇಳಿದರು.ಅವರು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನಲ್ಲಿ ಎನ್‌ಸಿಸಿ ನೌಕಾದಳ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಕಮಾಂಡಿಂಗ್ ಆಫೀಸರ್ ಅಶ್ವಿನ್ ಎಂ. ರಾವ್, ಮಾತನಾಡಿ, ಶ್ವೇತ ಸಮವಸ್ತ್ರ ಧರಿಸಿರುವ ಎಲ್ಲ ಕೇಡೆಟ್‌ಗಳು ತಮ್ಮ ವ್ಯಕ್ತಿತ್ವವನ್ನೂ ಅದೇ ರೀತಿಯಲ್ಲಿ ಉಜ್ವಲಗೊಳಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಮಾಜಿ ಸೈನಿಕರ ವೇದಿಕೆಯ ಅಧ್ಯಕ್ಷ ಹಾಗೂ ನಿವೃತ್ತ ಸುಬೇದಾರ್ ಮೇಜರ್ ಗಣಪಯ್ಯ ಶೇರಿಗಾರ್ ಅವರನ್ನು ಸನ್ಮಾನಿಸಲಾಯಿತು.
ನೇವಲ್ ಎಕ್ಸಿಕ್ಯೂಟಿವ್ ಆಫೀಸರ್ ಲೆಫ್ಟಿನೆಂಟ್ ಕಮಾಂಡರ್ ಎಂ.ಎ. ಮುಲ್ತಾನಿ, ಅತಿಥಿಗಳಾಗಿ ಉಪಸ್ಥಿತರಿದ್ದರು.ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ ಅಧ್ಯಕ್ಷತೆವಹಿಸಿದ್ದರು. ಉಪಪ್ರಾಂಶುಪಾಲ ಹೇಮಂತ್ ಹಾಗೂ ರವಿ ಜಿ. ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಆಂಗ್ಲ ಭಾಷಾ ಉಪನ್ಯಾಸಕಿ ಶಮಿತ ನಿರೂಪಿಸಿದರು.