ಸಾರಾಂಶ
ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನಿಂದ ದೇಶದ 2ನೇ ಅತೀ ದೊಡ್ಡ ಮಣಿಪಾಲ ಹಾಸ್ಪೈಸ್ ಮತ್ತು ರೆಸ್ಟೈಟ್ ಸೆಂಟರ್ (ಎಂಎಚ್‌ಆರ್‌ಸಿ) ಆರಂಭಿಸಲಾಗಿದ್ದು, ಇದನ್ನು ಏ.30ರಂದು 11.15ಕ್ಕೆ ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟೀಸ್ ಅಬ್ದುಲ್ ನಝೀರ್ ಅವರು ಉದ್ಘಾಟಿಸಲಿದ್ದಾರೆ.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನಿಂದ ದೇಶದ 2ನೇ ಅತೀ ದೊಡ್ಡ ಮಣಿಪಾಲ ಹಾಸ್ಪೈಸ್ ಮತ್ತು ರೆಸ್ಟೈಟ್ ಸೆಂಟರ್ (ಎಂಎಚ್‌ಆರ್‌ಸಿ) ಆರಂಭಿಸಲಾಗಿದ್ದು, ಇದನ್ನು ಏ.30ರಂದು 11.15ಕ್ಕೆ ಆಂಧ್ರಪ್ರದೇಶದ ರಾಜ್ಯಪಾಲ ಜಸ್ಟೀಸ್ ಅಬ್ದುಲ್ ನಝೀರ್ ಅವರು ಉದ್ಘಾಟಿಸಲಿದ್ದಾರೆ.ಈ ಬಗ್ಗೆ ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್.ಬಲ್ಲಾಳ್ ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು.ಕ್ಯಾನ್ಸರ್‌ನಂತಹ ಗುಣವಾಗದ ಕಾಯಿಲೆಗಳಿಂದ ಬಹಳ ಕಾಲ ಬದುಕಲಾಗದ ರೋಗಿಗಳಿಗೆ ಸಹಾನುಭೂತಿಯ ಆರೈಕೆ ಮತ್ತು ತೀರಾ ನೋವು ಅನುಭವಿಸುತ್ತಿರುವ ರೋಗಿಗಳಿಗೆ ಆರಾಮ ನೀಡುವ ಈ ಕೇಂದ್ರವು ಮಣಿಪಾಲದ ಹೊರಭಾಗದಲ್ಲಿರುವ ಹಾವಂಜೆಯಲ್ಲಿ ಸುವರ್ಣ ನದಿ ತೀರದಲ್ಲಿ 12 ಎಕ್ರೆ ಹಸಿರು ಪ್ರದೇಶದಲ್ಲಿ ನಿರ್ಮಾಣವಾಗಿದೆ. ಮೊದಲ ಹಂತದಲ್ಲಿ 35 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ನಂತರ ಅದನ್ನು 100 ಹಾಸಿಗೆಗಳಿಗೆ ಏರಿಸಲಾಗುತ್ತದೆ ಎಂದರು.ರೋಗಿಯ ಜೊತೆಗೆ ಕುಟುಂಬದ ಸದಸ್ಯರೂ ಉಳಿದುಕೊಳ್ಳುವುದಕ್ಕೆ ಉಚಿತ ವ್ಯವಸ್ಥೆ ಇಲ್ಲಿದೆ. ರೋಗಿಗಳಿಗೆ ಕೊನೆಗಾಲದ ವರೆಗೆ ನೆಮ್ಮದಿಯನ್ನು ನೀಡುವುದಕ್ಕಾಗಿ ಮಾನಸಿಕ ಆಧ್ಯಾತ್ಮಿಕ ಪರಿಸರವನ್ನೂ ನಿರ್ಮಾಣ ಮಾಡಲಾಗಿದೆ. ರೋಗಿಗಳ ಆರೈಕೆಗೆ ಮನೆಯವರಿಗೆ ತರಬೇತಿಯನ್ನೂ ಕೂಡ ನೀಡಲಾಗುತ್ತದೆ ಎಂದು ಹೇಳಿದರು.
ಮಾಹೆಯ ಉಪಕುಲಪತಿ ಲೆ.ಜ. ಡಾ. ಎಂ.ಡಿ.ವೆಂಕಟೇಶ್ ಮಾತನಾಡಿ, ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸಂಯೋಜಿತವಾಗಿರುವ ದೇಶದ ಏಕೈಕ ರೆಸ್ಟೈಟ್ ಕೇಂದ್ರ ಇದಾಗಿದೆ. ಭವಿಷ್ಯದ ಆರೈಕೆದಾರರ ತರಬೇತಿಗೂ ಪೂರಕವಾಗಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ. ವಿವಿಧ ಸಂಸ್ಥೆಗಳ ಸಿಎಸ್‌ಆರ್ ನಿಧಿಯ ಸಹಾಯದಿಂದ ಈ ಕೇಂದ್ರವು ಉಚಿತವಾಗಿ ಸೇವೆ ನೀಡುತ್ತದೆ ಎಂದರು.ಮಾಹೆಯ ಆರೋಗ್ಯ ವಿಜ್ಞಾನಗಳ ಸಹಉಪಕುಲಪತಿ ಡಾ. ಶರತ್ ಕೆ. ರಾವ್, ತಂತ್ರಜ್ಞಾನ ಮತ್ತು ವಿಜ್ಞಾನಗಳ ಸಹಉಪಕುಲಪತಿ ಡಾ.ನಾರಾಯಣ ಸಭಾಹಿತ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರವಿರಾಜ್ ಎನ್.ಎಸ್., ಕುಲಸಚಿವ ಡಾ. ಗಿರಿಧರ ಕಿಣಿ, ಉಪಶಾಮಕ ಔಷಧ ಮತ್ತು ಆರೈಕೆ ವಿಭಾಗದ ಮುಖ್ಯಸ್ಥ ಡಾ.ನವೀನ್ ಸಾಲಿನ್ಸ್ ಮತ್ತು ಮಣಿಪಾಲ ಹಾಸ್ಪೈಸ್ - ರಿಸ್ಟೈಟ್ ಕೇಂದ್ರದ ನಿರ್ದೇಶಕಿ ಡಾ.ಸೀಮಾ ರಾಜೇಶ್ ರಾವ್ ಉಪಸ್ಥಿತರಿದ್ದರು. ಮಾಹೆಯ ಸಾರ್ವಜನಿಕ ಸಂಪರ್ಕ ನಿರ್ದೇಶಕ ಭರತ್ ಕುಮಾರ್ ಸುದ್ದಿಗೋಷ್ಠಿಯನ್ನು ನಿರ್ವಹಿಸಿದರು.