ಸಾರಾಂಶ
ಕನ್ನಡಪ್ರಭ ವಾರ್ತೆ ಮಣಿಪಾಲಧಾರವಾಡದ ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ ಮತ್ತು ಕಿರ್ದಾರ್ ರಂಗಮಂದಿರಗಳ ಆಶ್ರಯದಲ್ಲಿ ಆಧುನಿಕ ಕನ್ನಡ ರಂಗಭೂಮಿ ದಿನವನ್ನು ಇತ್ತೀಚೆಗೆ ಮಣಿಪಾಲ ಮಾಹೆಯ ಗಾಂಧಿಯನ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸೈನ್ಸಸ್ (ಜಿಸಿಪಿಎಎಸ್)ನಲ್ಲಿ ‘ಉಳಿದ ಪುಟಗಳು’ ನಾಟಕದ ಪ್ರದರ್ಶನದೊಂದಿಗೆ ಆಚರಿಸಲಾಯಿತು.ರೇವತಿ ನಾಡಗೀರ್ ನಿರ್ದೇಶನದ ಈ ‘ಉಳಿದ ಪುಟಗಳು’ ಎಂಬ ನಾಟಕವು ರಂಗಭೂಮಿಯ ಮೂಲಕ ಬಲವಾದ ಸಾಮಾಜಿಕ ನಿರೂಪಣೆಗೆ ಜೀವ ತುಂಬಿತು. ಖ್ಯಾತ ನಾಟಕಕಾರ ಮತ್ತು ರಂಗಕರ್ಮಿ ಮಹೇಶ ದತ್ತಾನಿ ಅವರ ಉಪಸ್ಥಿತಿಯಿಂದ ಕಾರ್ಯಕ್ರಮ ಕಳೆಗಟ್ಟಿತು. ಆಧುನಿಕ ರಂಗಭೂಮಿಯ ವಿಕಸನದ ಕುರಿತು ಮತ್ತು ಸಾಂಸ್ಕೃತಿಕ ಮತ್ತು ಸಾಮಾಜಿಕ ವಿಭಜನೆಗಳ ಮಧ್ಯೆ ‘ಸೇತುವೆ’ಗಳನ್ನು ನಿರ್ಮಿಸುವ ಕುರಿತು ಮಾತನಾಡಿದರು.ಜಿಸಿಪಿಎಎಸ್‌ನ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ, ಸಕ್ಕರಿ ಬಾಳಾಚಾರ್ಯರು ರಂಗಭೂಮಿ ಮತ್ತು ಸಾಂಸ್ಕೃತಿಕ ಲೋಕಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾತನಾಡಿದರು.ಜಿಸಿಪಿಎಎಸ್‌ನಲ್ಲಿರುವ ಸರ್ವೋದಯ ಸಭಾಂಗಣದಲ್ಲಿ ಪ್ರದರ್ಶನಗೊಂಡ ಈ ನಾಟಕದಲ್ಲಿ ರಕ್ಷಾ ಪೈ, ಕಾವ್ಯಾ ಪ್ರಭು, ಕ್ಲಿಂಗ್ ಜಾನ್ಸನ್, ಶಶಿಕಲಾ ರಾಜವರ್ಮ, ಡಾ. ರಾಮ್ ಕುಮಾರ್ ಮತ್ತು ಡಾ. ವಾಣಿ ಸೇರಿದಂತೆ ಪ್ರತಿಭಾವಂತ ಕಲಾವಿದರ ಉತ್ಸಾಹಭರಿತ ಅಭಿನಯದಿಂದ ಪ್ರೇಕ್ಷಕರನ್ನು ರಂಜಿಸಿತು.