ಸಾರಾಂಶ
ಆಸ್ಪತ್ರೆಯ ಶುಶ್ರೂಷಾ ತಂಡವು ಸಮುದಾಯದ ಆರೋಗ್ಯ ಸೇವೆಯ ಬಗ್ಗೆ ಜಾಗೃತಿಯನ್ನು ಮೂಡಿಸುವುದಕ್ಕಾಗಿ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಬೀದಿನಾಟಕವನ್ನು ನಡೆಸಿ, ಉತ್ತಮ ಆರೋಗ್ಯದ ಅರಿವು ಮತ್ತು ರೋಗ ತಡೆಗಟ್ಟುವಿಕೆ ಕುರಿತು ಪ್ರಮುಖ ಸಂದೇಶಗಳನ್ನು ನೀಡಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆ ವಿಶ್ವ ಆರೋಗ್ಯ ದಿನವನ್ನು ಆಚರಿಸಲಾಯಿತು. ಆಸ್ಪತ್ರೆಯ ಶುಶ್ರೂಷಾ ತಂಡವು ಸಮುದಾಯದ ಆರೋಗ್ಯ ಸೇವೆಯ ಬಗ್ಗೆ ಜಾಗೃತಿಯನ್ನು ಮೂಡಿಸುವುದಕ್ಕಾಗಿ ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಬೀದಿನಾಟಕವನ್ನು ನಡೆಸಿ, ಉತ್ತಮ ಆರೋಗ್ಯದ ಅರಿವು ಮತ್ತು ರೋಗ ತಡೆಗಟ್ಟುವಿಕೆ ಕುರಿತು ಪ್ರಮುಖ ಸಂದೇಶಗಳನ್ನು ನೀಡಿತು.ಅಲ್ಲದೇ ಆಸ್ಪತ್ರೆಯ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದ್ದು, ಎಲ್ಲ ವರ್ಗದ ವ್ಯಕ್ತಿಗಳಿಗೆ ಆರೋಗ್ಯ ಸೇವೆ ನೀಡಲಾಯಿತು. ಈ ಉಪಕ್ರಮವು ಆರೋಗ್ಯ ರಕ್ಷಣೆ ಪ್ರತಿಯೊಬ್ಬ ವ್ಯಕ್ತಿಯ ಮೂಲಭೂತ ಹಕ್ಕನ್ನು ಗೌರವಿಸುವ ಆಸ್ಪತ್ರೆಯ ಅಚಲ ಬದ್ಧತೆಯನ್ನು ಒತ್ತಿ ಹೇಳಿತು.
ಈ ಸಂದರ್ಭ ಮಾತನಾಡಿದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಮೊದಲು ಸೋಂಕು ಕಾಯಿಲೆಗಳು ಮತ್ತು ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇತ್ತು. ಆದರೆ ಈಗ ಅಸಾಂಕ್ರಾಮಿಕ ಮತ್ತು ಜೀವನ ಶೈಲಿಯಿಂದ ಬರುವ ಕಾಯಿಲೆಗಳು, ಮಧುಮೇಹ, ಹೃದ್ರೋಗ, ಕಿಡ್ನಿ, ಕ್ಯಾನ್ಸರ್ ಇತ್ಯಾದಿಗಳ ತಡೆಗಟ್ಟುವ ಕುರಿತು ಮಾಹಿತಿ ಮತ್ತು ಅರಿವು ಮೂಡಿಸುವ ಅವಶ್ಯಕತೆ ಇದೆ. ಇಂತಹ ಕಾರ್ಯದಲ್ಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಯಾವಾಗಲೂ ಮುಂಚೂಣಿಯಲ್ಲಿದೆ ಎಂದು ಹೇಳಿದರು.ಆಸ್ಪತ್ರೆಯ ಶುಶ್ರೂಷಾ ತಂಡ, ಆರೋಗ್ಯ ವೃತ್ತಿಪರರು ಮತ್ತು ಸ್ವಯಂಸೇವಕರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು 1000ಕ್ಕೂ ಹೆಚ್ಚು ಜನರು ಸಲಹೆ, ಸೇವೆ, ಪ್ರಯೋಜನ ಪಡೆದರು.
ಪ್ರತಿವರ್ಷ ಏ.7ನ್ನು ವಿಶ್ವಾದ್ಯಂತ ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ. ಉತ್ತಮ ಆರೋಗ್ಯದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮತ್ತು ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ಈ ವರ್ಷದ ಧ್ಯೇಯ ವಾಕ್ಯ ‘ನನ್ನ ಆರೋಗ್ಯ ನನ್ನ ಹಕ್ಕು’. ಆರೋಗ್ಯ ಸೇವೆಯನ್ನು ಒಂದು ಸವಲತ್ತು ಎಂದು ಪರಿಗಣಿಸದೆ, ಮೂಲಭೂತ ಮಾನವ ಹಕ್ಕು ಎಂದು ಪರಿಗಣಿಸಬೇಕು ಎಂಬುದನ್ನು ಈ ಸಾಲಿನ ಧ್ಯೇಯವಾಕ್ಯ ಸಾರುತ್ತಿದೆ.