ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಇದರ 8ನೇ ಆವೃತ್ತಿಯ ‘ಮಣಿಪಾಲ ಮ್ಯಾರಥಾನ್’ ಫೆ.8ರಂದು ನಡೆಯಲಿದ್ದು, ದೇಶ ವಿದೇಶಗಳ 20 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗವಹಿಸಲಿದ್ದಾರೆ.

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ಇದರ 8ನೇ ಆವೃತ್ತಿಯ ‘ಮಣಿಪಾಲ ಮ್ಯಾರಥಾನ್’ ಫೆ.8ರಂದು ನಡೆಯಲಿದ್ದು, ದೇಶ ವಿದೇಶಗಳ 20 ಸಾವಿರಕ್ಕೂ ಹೆಚ್ಚು ಓಟಗಾರರು ಭಾಗವಹಿಸಲಿದ್ದಾರೆ.ಈ ಬಗ್ಗೆ ಮಾಹೆಯ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ನೀಡಿದರು. ಅಂದು ಬೆಳಗ್ಗೆ 5 ಗಂಟೆಗೆ ಮಣಿಪಾಲದ ಕೆಎಂಸಿ ಗ್ರೀನ್ಸ್ ಮೈದಾನದಲ್ಲಿ ಈ ಬೃಹತ್ ಓಟದ ಸ್ಪರ್ಧೆಗೆ ಚಾಲನೆ ನೀಡಲಾಗುತ್ತದೆ. ವಿದ್ಯಾರ್ಥಿಗಳಿಂದಲೇ ಆಯೋಜಿತ ದೇಶದ ಅತಿ ದೊಡ್ಡ ಫಿಟ್ನೆಸ್ ಕಾರ್‍ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಮ್ಯಾರಥಾನ್‌ನಲ್ಲಿ 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರೀಡಾಳುಗಳು ಪಾಲ್ಗೊಳ್ಳುತ್ತಿದ್ದಾರೆ. ವಿವಿಧ ವಿಭಾಗಗಳಲ್ಲಿ ಗೆದ್ದವರಿಗೆ 25 ಲಕ್ಷ ರು.ಗಿಂತಲೂ ಹೆಚ್ಚಿನ ಮೊತ್ತದ ಬಹುಮಾನ ನೀಡಲಾಗುತ್ತಿದೆ ಎಂದರು.

ಈ ಬಾರಿ ‘ಹಸಿರು ಹಾಗೂ ಸುಸ್ಥಿರ ಭವಿಷ್ಯಕ್ಕಾಗಿ ಓಟʼ ಎಂಬ ಸಂದೇಶದಡಿ ಈ ವರ್ಷದ ಮಣಿಪಾಲ ಮ್ಯಾರಥಾನ್‌ ನ್ನು ಆಯೋಜಿಸಲಾಗಿದೆ. 42 ಕಿ.ಮೀ. ಪೂರ್ಣ ಮ್ಯಾರಥಾನ್, 21 ಕಿ.ಮೀ. ಅರ್ಧ ಮ್ಯಾರಥಾನ್, 10 ಕಿ.ಮೀ., 5 ಕಿ.ಮೀ. ಹಾಗೂ 3 ಕಿ.ಮೀ. ಫನ್ ರನ್ ಸೇರಿ ಐದು ವಿಭಾಗಗಳಲ್ಲಿ ಓಟವನ್ನು ಆಯೋಜಿಸಲಾಗಿದೆ. ಅಲ್ಲದೆ ವಿಶೇಷಚೇತನರಿಗಾಗಿ ವಿಶೇಷ ಓಟ ಕೂಡ ಇರುತ್ತದೆ. ದುಬೈ, ಇಂಗ್ಲೆಂಡ್, ಇಥಿಯೋಪಿಯಾ, ಜರ್ಮನಿ, ಜಪಾನ್, ಕೀನ್ಯಾ, ಮಲೇಶಿಯಾ, ನೇಪಾಳ, ಶ್ರೀಲಂಕಾ, ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡಾಳುಗಳ ಈಗಾಗಲೇ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.42 ಕಿ.ಮೀ. ಓಟವು ಕಡಲ ತೀರದ ಮಾರ್ಗದಲ್ಲಿ ನಡೆಯಲಿದ್ದು, ಪ್ರಕೃತಿ ಸೌಂದರ್ಯದ ನಡುವೆ ನಡೆಯುವ ಈ ಓಟವು ಓಟಗಾರರಿಗೆ ವಿಶಿಷ್ಟ ಅನುಭವ ನೀಡಲಿದೆ. 10 ಕಿ.ಮೀ. ಓಟದ ಮಾರ್ಗವನ್ನು ಈ ಬಾರಿ ಹೊಸದಾಗಿ ರೂಪಿಸಲಾಗಿದ್ದು, ಮಣಿಪಾಲ ಹಾಸ್ಪಿಸ್ ರೆಸ್ಪೈಟ್ ಸೆಂಟರ್ (ಎಂಎಚ್‌ಆರ್‌ಸಿ), ಸುತ್ತ ಈ ಮಾರ್ಗ ನಡೆಯುತ್ತದೆ.

ಮ್ಯಾರಥಾನ್ ಪೂರ್ಣಗೊಂಡ ನಂತರ ಕೆಎಂಸಿ ಗ್ರೀನ್ಸ್‌ನಲ್ಲಿ ಆಕರ್ಷಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ. ಮನೋರಂಜನಾ ಕಾರ್ಯಕ್ರಮಗಳು, ಆಹಾರ ಮಳಿಗೆಗಳಿದ್ದು. ಓಟಗಾರರು ಮತ್ತು ಅವರ ಕುಟುಂಬ ಸದಸ್ಯರು ಮತ್ತು ಪ್ರೇಕ್ಷಕರು ಒಟ್ಟಾಗಿ ಹಬ್ಬದ ವಾತಾವರಣವನ್ನು ಆನಂದಿಸಬಹುದಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಮಾಹೆಯ ಉಪಕುಲಪತಿ ಲೆಜ ಡಾ. ಎಂ.ಡಿ. ವೆಂಕಟೇಶ್, ಸಹ ಉಪಕುಲಾಧಿಪತಿಗಳಾದ ಡಾ. ನಾರಾಯಣ ಸಭಾಹಿತ್ ಮತ್ತು ಡಾ. ಶರತ್‌ ರಾವ್ ಕೆ., ಕುಲಸಚಿವ ಡಾ. ಗಿರಿಧರ್ ಕಿಣಿ, ಡಿವೈಎಸ್ಪಿ ಪ್ರಭು ಉಪಸ್ಥಿತರಿದ್ದರು.