ಸಾರಾಂಶ
ಶಿವರಾತ್ರಿಯಂದು ರಾತ್ರಿ, ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಹಣೆಯ ಮೇಲೆ ಬಿಳಿ ಮಚ್ಚೆಯನ್ನು ಹೊಂದಿರುವ ಈ ಗಂಡು ಕರು ಪತ್ತೆಯಾದ್ದರಿಂದ ಅದಕ್ಕೆ ಟೈಗರ್ ಶಿವ ಎಂಬ ಹೆಸರಿಡಲಾಯಿತು. ಸಮಾಜಸೇವಕ ನಿತ್ಯಾನಂದ ಒಳಕಾಡು, ಬೀದಿ ಬದಿಯಲ್ಲಿದ್ದ ಕರುವನ್ನು ರಕ್ಷಿಸಿದ್ದು, ಅದಕ್ಕೆ ಬುಧವಾರ ಸಂಜೆ ಗೋಧೂಳಿ ವೇಳೆಯಲ್ಲಿ ಮನುಷ್ಯರಂತೆ ತೊಟ್ಟಿಲು ಶಾಸ್ತ್ರ, ನಾಮಕರಣದ ಶಾಸ್ತ್ರವನ್ನು ನಡೆಸಿದರು.
ಕನ್ನಡಪ್ರಭ ವಾರ್ತೆ ಮಣಿಪಾಲ
ಇಲ್ಲಿನ ಟೈಗರ್ ಸರ್ಕಲ್‌ನಲ್ಲಿ ಅನಾಥವಾಗಿದ್ದ ಗಂಡು ಕರುವನ್ನು ರಕ್ಷಿಸಿ, ಅದಕ್ಕೆ ತೊಟ್ಟಿಲು ಶಾಸ್ತ್ರ, ನಾಮಕರಣ ಮಾಡುವ ವೈಶಿಷ್ಟ್ಯಪೂರ್ಣ ಕಾರ್ಯಕ್ರಮ ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ನಡೆಯಿತು.ಶಿವರಾತ್ರಿಯಂದು ರಾತ್ರಿ, ಮಣಿಪಾಲದ ಟೈಗರ್ ಸರ್ಕಲ್‌ನಲ್ಲಿ ಹಣೆಯ ಮೇಲೆ ಬಿಳಿ ಮಚ್ಚೆಯನ್ನು ಹೊಂದಿರುವ ಈ ಗಂಡು ಕರು ಪತ್ತೆಯಾದ್ದರಿಂದ ಅದಕ್ಕೆ ಟೈಗರ್ ಶಿವ ಎಂಬ ಹೆಸರಿಡಲಾಯಿತು. ಸಮಾಜಸೇವಕ ನಿತ್ಯಾನಂದ ಒಳಕಾಡು, ಬೀದಿ ಬದಿಯಲ್ಲಿದ್ದ ಕರುವನ್ನು ರಕ್ಷಿಸಿದ್ದು, ಅದಕ್ಕೆ ಬುಧವಾರ ಸಂಜೆ ಗೋಧೂಳಿ ವೇಳೆಯಲ್ಲಿ ಮನುಷ್ಯರಂತೆ ತೊಟ್ಟಿಲು ಶಾಸ್ತ್ರ, ನಾಮಕರಣದ ಶಾಸ್ತ್ರವನ್ನು ನಡೆಸಿದರು.
ಮೊದಲಿಗೆ ಕರುವಿಗೆ ಹೂವಿನ ಹಾರ ಹಾಕಿ, ಹೊಸ ಬಟ್ಟೆ ಹೊದಿಸಿ, ಶಾಂತಿನಗರ ಗಣೇಶೋತ್ಸವ ವೇದಿಕೆಯಿಂದ ಮೆರವಣಿಗೆ ಮೂಲಕ ಕರೆತರಲಾಯಿತು. ಮೆರವಣಿಗೆಯಲ್ಲಿ ಭಜನಾ ಮಂಡಳಿಯ ಸದಸ್ಯರು ದೇವರನಾಮಗಳನ್ನು ಹಾಡಿದರು. ನಂತರ ಕರುವನ್ನು ಹಿತ್ತಾಳೆಯ ತೊಟ್ಟಿಲಿನಲ್ಲಿ ಕುಳ್ಳಿರಿಸಿ ತೂಗಿ, ಸೋಭಾನೆ ಹಾಡಿ ನಾಮಕರಣದ ಶಾಸ್ತ್ರವನ್ನು ನೆರವೇರಿಸಿದರು. ಬಳಿಕ ಸಿಹಿತಿಂಡಿ ವಿತರಿಸಲಾಯಿತು.ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಪಶುವೈದ್ಯರಾದ ಡಾ. ಸಂದೀಪ್ ಶೆಟ್ಟಿ ಉದ್ಯಾವರ ಮತ್ತು ಡಾ. ಪ್ರಶಾಂತ ಶೆಟ್ಟಿ ಮಣಿಪಾಲ, ಸಾಹಿತಿ ಹರಿಕೃಷ್ಣ ರಾವ್ ಸಗ್ರಿ, ನಿರ್ಮಲಾ ಹರಿಕೃಷ್ಣ ರಾವ್, ಸ್ಥಳೀಯರಾದ ನಾಗರಾಜ ಶೆಟ್ಟಿ, ಉದಯ ಕುಮಾರ್, ವಿಜಯ ಶೆಟ್ಟಿ ಕೊಂಡಾಡಿ, ವಿನಯಚಂದ್ರ ಸಾಸ್ತಾನ, ರಾಜಶ್ರೀ, ತಾರಾನಾಥ್ ಮೇಸ್ತ ಶಿರೂರು, ಕೆ. ಬಾಲಗಂಗಾಧರ ರಾವ್, ಸತೀಶ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.ಹೆತ್ತ ತಾಯಿಯಿಂದ ದೂರವಾಗಿ ಬೀದಿ ನಾಯಿಗಳ ದಾಳಿಗೆ ಅಥವಾ ವಾಹನಗಳ ಚಕ್ರಕ್ಕೆ ತುತ್ತಾಗಲಿದ್ದ ಈ ತಬ್ಬಲಿ ಕರುವನ್ನು ರಕ್ಷಿಸಿರುವ ನಿತ್ಯಾನಂದ ಒಳಕಾಡು, ಇಲ್ಲಿ ಯಾರೂ ಅನಾಥರಲ್ಲ, ಒಬ್ಬರಿಗೊಬ್ಬರು ಆಸರೆಯಾಗಬೇಕು ಎಂಬುದನ್ನು ಸಾಂಕೇತಿಕವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾಗಿ ತಿಳಿಸಿದರು.