ಸಾರಾಂಶ
ಆಪ್ತ ಸಮಾಲೋಚಕಿ ಮತ್ತು ಮಾನಸಿಕ ತಜ್ಞೆ ತನುಜಾ ಮಾಬೆನ್ ಅವರ ‘ಇಮೋಷನಲ್ ಎಕೋಸ್’ ಕೃತಿಯ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮ ಮಣಿಪಾಲದ ಕಂಟ್ರಿ ಇನ್ ಹೋಟೆಲ್‌ನಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಮಣಿಪಾಲ
ಆಪ್ತ ಸಮಾಲೋಚಕಿ ಮತ್ತು ಮಾನಸಿಕ ತಜ್ಞೆ ತನುಜಾ ಮಾಬೆನ್ ಅವರ ‘ಇಮೋಷನಲ್ ಎಕೋಸ್’ ಕೃತಿಯ ವಿಮರ್ಶೆ ಮತ್ತು ಸಂವಾದ ಕಾರ್ಯಕ್ರಮ ಶನಿವಾರ ಮಣಿಪಾಲದ ಕಂಟ್ರಿ ಇನ್ ಹೋಟೆಲ್‌ನಲ್ಲಿ ನಡೆಯಿತು.ಲೇಖಕಿ ತನುಜಾ ಮಾಬೆನ್ ಮಾತನಾಡಿ, ಈ ಕೃತಿಯಲ್ಲಿ ತಾನು ಭಾವನೆಗಳ ಸಂಘರ್ಷಕ್ಕೆ ಒಳಗಾದ ಕುರಿತು, ಆ ಭಾವನೆಗಳಿಂದಲೇ ತಾನು ಇತರರನ್ನು ಕಂಡ ಬಗೆಯನ್ನು ವಿವರಿಸಿದರು. ಜೊತೆಗೆ ಒಬ್ಬ ಮಹಿಳೆಯಾಗಿ, ಪತ್ನಿಯಾಗಿ, ತಾಯಿಯಾಗಿ ಭಾವನೆಗಳ ವಿವಿಧ ಮಜಲುಗಳನ್ನು ದಾಟಿ ಬಂದ ಬಗೆ ಮತ್ತು ಆ ಅನುಭವಗಳಿಂದ ಕಲಿತ ಪಾಠ ಮತ್ತು ಅದರಿಂದ ಸಮಾಜವನ್ನು ಯಾವ ರೀತಿ ನೋಡಲು ಸಾಧ್ಯವಾಯಿತು ಎಂಬುದನ್ನು ಬಿಚ್ಚಿಟ್ಟರು.ಉದ್ಯಮಿ ಅಭಿನಂದನ್ ಎ. ಶೆಟ್ಟಿ, ಕೃತಿಯ ವಿಮರ್ಶೆ ಮಾಡಿ, ಭಾವನೆಗಳು ಬಹುಮುಖ್ಯವಾದದ್ದು. ಆರೋಗ್ಯಕರ ಭಾವನೆ ಬದುಕಿನಲ್ಲಿ ತುಂಬ ಮುಖ್ಯ. ಇಂತಹ ಕೃತಿಗಳು ಆಪ್ತ ಸಮಾಲೋಚಕರಂತೆ, ಶಿಕ್ಷಕರಂತೆ ನಮ್ಮೆಲ್ಲರ ಜೀವನದಲ್ಲಿ ಕೆಲಸ ಮಾಡುತ್ತದೆ ಎಂದರು.ಅತಿಥಿ ಡಾ.ಶೃತಿ ಬಲ್ಲಾಳ್, ಮಾತು, ಮೌನ ಮತ್ತು ಮಾತ್ರೆ ಇವತ್ತಿನ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಈ ಮೂರರಲ್ಲಿ ಯಾವುದನ್ನು ಆಯ್ದುಕೊಳ್ಳುತ್ತೀರಿ ಎಂಬುದು ನಿಮ್ಮ ಮಾನಸಿಕ ಆರೋಗ್ಯವನ್ನು ಅವಲಂಭಿಸಿರುತ್ತದೆ ಎಂದು ಹೇಳಿದರು.ಶಿಕ್ಷಣ ತಜ್ಞ ವಿದ್ಯಾವಂತ ಆಚಾರ್ಯ ಕೃತಿಯ ಬಗ್ಗೆ ಮಾತನಾಡಿದರು. ತನುಜಾ ಮಾಬೆನ್ ಪತಿ ಜಾಕಿ ಮಾಬೆನ್ ಮತ್ತಿತರರು ಉಪಸ್ಥಿತರಿದ್ದರು.