ಮಣಿಪಾಲ: ಡಿಸಿಯಿಂದ ಇಬ್ಬರು ಮಕ್ಕಳ ದತ್ತು ಹಸ್ತಾಂತರ

| Published : Dec 11 2024, 12:47 AM IST

ಮಣಿಪಾಲ: ಡಿಸಿಯಿಂದ ಇಬ್ಬರು ಮಕ್ಕಳ ದತ್ತು ಹಸ್ತಾಂತರ
Share this Article
  • FB
  • TW
  • Linkdin
  • Email

ಸಾರಾಂಶ

ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಗೋವಾ ಮತ್ತು ಬೆಂಗಳೂರು ಮೂಲದ ಇಬ್ಬರು ದಂಪತಿಗೆ ಮಕ್ಕಳನ್ನು ಕಾನೂನು ಬದ್ಧವಾಗಿ ನೀಡಲಾಯಿತು.

ಉಡುಪಿ ಜಿಲ್ಲೆಯಲ್ಲಿ 2008ರಿಂದ 108 ದೇಶಿ, 6 ವಿದೇಶಿ ಪೊಷಕರಿಗೆ ಮಕ್ಕಳ ದತ್ತು

ಕನ್ನಡಪ್ರಭ ವಾರ್ತೆ ಉಡುಪಿ

ಕೌಟುಂಬಿಕ ವ್ಯವಸ್ಥೆಯಲ್ಲಿ ಬೆಳೆಯುವುದು ಪ್ರತಿಯೊಂದು ಮಗುವಿನ ಹಕ್ಕು. ಮಗುವಿಗೆ ಅವಶ್ಯವಿರುವ ಪ್ರೀತಿ ಮತ್ತು ಆರೈಕೆಯನ್ನು ಕುಟುಂಬದ ವಾತಾವರಣವು ಕಲ್ಪಿಸುತ್ತದೆ. ಆದ್ದರಿಂದ ಅನಾಥ ಮಕ್ಕಳನ್ನು ದತ್ತು ಪಡೆಯಲು ಇಚ್ಛಿಸುವ ದಂಪತಿ ಕಾನೂನುಬದ್ಧ ಪ್ರಕ್ರಿಯೆ ಮೂಲಕ ದತ್ತು ಪಡೆಯಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.ಅವರು ಶುಕ್ರವಾರ ರಜತಾದ್ರಿಯ ತಮ್ಮ ಕಚೇರಿಯಲ್ಲಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ವತಿಯಿಂದ ಗೋವಾ ಮತ್ತು ಬೆಂಗಳೂರು ಮೂಲದ ಇಬ್ಬರು ದಂಪತಿಗೆ ಮಕ್ಕಳನ್ನು ಕಾನೂನು ಬದ್ಧವಾಗಿ ನೀಡುವ ಮೂಲಕ ದತ್ತು ಆದೇಶವನ್ನು ವಿತರಿಸಿ ಮಾತನಾಡಿದರು.ಲಬಾಲನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯ್ದೆ 2021ರ ಸೆಕ್ಷನ್ 56 (1) 58 ಮತ್ತು 61ರ ಅಡಿಯಲ್ಲಿ ಕುಟುಂಬದ ಪ್ರೀತಿ ವಂಚಿತ ಪೋಷಕರನ್ನು ಕಳೆದುಕೊಂಡ ಪಾಲನೆ, ಪೋಷಣೆ ವಂಚಿತ ಪರಿತ್ಯಕ್ತ ಹಾಗೂ ನಿರ್ಗತಿಕ ಮಕ್ಕಳು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ಆದೇಶ ಪಡೆಯಬಹುದಾಗಿದೆ ಎಂದರು.ಯಾವುದೇ ಕಾರಣಕ್ಕೂ ಮಗು ಬೇಡವಾದಲ್ಲಿ ಕಸದ ತೊಟ್ಟಿ, ಆಸ್ಪತ್ರೆ ಆವರಣ, ಶೌಚಾಲಯ, ರಸ್ತೆ ಬದಿ ಹಾಗೂ ಪೊದೆಗಳಲ್ಲಿ ಎಸೆಯದೇ, ಮಕ್ಕಳ ರಕ್ಷಣೆಗಾಗಿ ಇರುವ ವಿಶೇಷ ಮಮತೆಯ ತೊಟ್ಟಿಲುಗಳಲ್ಲಿ ಮಕ್ಕಳನ್ನು ಬಿಡಬಹುದಾಗಿದೆ. ಜಿಲ್ಲೆಯಲ್ಲಿ ಶ್ರೀ ಕೃಷ್ಣಾನುಗೃಹ ದತ್ತು ಕೇಂದ್ರ, ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ ಹಾಗೂ ಸರ್ಕಾರಿ ಬಾಲಕಿಯರ ಬಾಲ ಮಂದಿರಗಳಲ್ಲಿ ಮಮತೆಯ ತೊಟ್ಟಿಲುಗಳನ್ನು ಇರಿಸಲಾಗಿದೆ ಎಂದು ಹೇಳಿದರು.ಕಾನೂನು ಉಲ್ಲಂಘಿಸಿ ಅಥವಾ ಮಕ್ಕಳ ಮಾರಾಟ ಪ್ರಕರಣಗಳಲ್ಲಿ ಆಸ್ಪತ್ರೆ ಸಿಬ್ಬಂದಿ ಶಾಮೀಲಾಗಿದ್ದಲ್ಲಿ 1 ಲಕ್ಷ ರು. ದಂಡ ಹಾಗೂ 7 ವರ್ಷದ ವರೆಗೆ ಜೈಲು ಶಿಕ್ಷೆ ಹಾಗೂ ಮಕ್ಕಳನ್ನು ಮಾರಾಟ ಮಾಡಿದವರಿಗೆ ಹಾಗೂ ಮಕ್ಕಳನ್ನು ಕೊಂಡುಕೊಂಡವರಿಗೆ 1 ಲಕ್ಷ ರು. ದಂಡ ಹಾಗೂ 5 ವರ್ಷದ ವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದರು.ಈ ಸಂದರ್ಭ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ನಾಗರತ್ನ ನಾಯಕ್, ಕಾನೂನು ಅಧಿಕಾರಿ ಅಪೂರ್ವ ಕೋಟ್ಯಾನ್ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕ್ಲೀಟಾ, ಶ್ರೀ ಕೃಷ್ಣಾನುಗೃಹ ದತ್ತು ಕೇಂದ್ರದ ಸಂಯೋಜಕಿ ಮೇರಿನಾ ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿ ಶ್ರೀ ಕೃಷ್ಣಾನುಗೃಹ ದತ್ತು ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, 2008ರಿಂದ ಈವರೆಗೆ 108 ಸ್ವದೇಶಿ ಹಾಗೂ 6 ವಿದೇಶಿ ಪೊಷಕರಿಗೆ ಮಕ್ಕಳನ್ನು ದತ್ತು ನೀಡಲಾಗಿದೆ. ಜಿಲ್ಲಾಧಿಕಾರಿಗಳಿಂದ 19 ಪೋಷಕರಿಗೆ ದತ್ತು ಆದೇಶ ನೀಡಲಾಗಿದೆ.ದತ್ತು ಪ್ರಕ್ರಿಯೆ ಕುರಿತು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಕಚೇರಿ ದೂ.ಸಂಖ್ಯೆ: 0820-2574964 ಹಾಗೂ ಸಂತೆಕಟ್ಟೆಯ ಆಶೀರ್ವಾದ್‌ ರಸ್ತೆಯಲ್ಲಿರುವ ಶ್ರೀ ಕೃಷ್ಣಾನುಗೃಹ ದತ್ತು ಕೇಂದ್ರವನ್ನು ಸಂಪರ್ಕಿಸಬಹುದಾಗಿದೆ.