ಸಾರಾಂಶ
ಶಿರಸಿ: ಪ್ರತಿವರ್ಷ ಚೈತ್ರ ಶುದ್ಧ ಹುಣ್ಣಿಮೆಯಂದು ನಡೆಯುವ ತಾಲೂಕಿನ ಮಂಜಗುಣಿ ವೆಂಕಟ್ರಮಣ ದೇವರ ವಾರ್ಷಿಕ ಮಹಾರಥೋತ್ಸವವು ಮಂಗಳವಾರ ಸಡಗರದಿಂದ ನಡೆಯಿತು.
ನಿಗದಿತ ಮುಹೂರ್ತದಲ್ಲಿ ಭೂದೇವಿ, ಶ್ರೀದೇವಿಯರೊಡಗೂಡಿ ಸಾಲಂಕೃತನಾಗಿ ಬ್ರಹ್ಮರಥವೇರಿ ಬೆಳ್ಳಿಯ ಮಂಟಪದಲ್ಲಿ ಪ್ರತಿಷ್ಠಾಪಿತನಾದ ವೆಂಕಟ್ರಮಣ ದೇವರ ಪೂಜೆ, ಮಹಾಮಂಗಳಾರತಿಗಳು ನಡೆದವು.ಬೆಳಗಿನ ಮುಹೂರ್ತದಲ್ಲಿ ಉಪಸ್ಥಿತರಿದ್ದ ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ದೇವಸ್ಥಾನದ ಎದುರಿನ ವಿಶಾಲವಾದ ರಥ ಬೀದಿಯಲ್ಲಿ ವೆಂಕಟ್ರಮಣ ದೇವರ ಜಯಘೋಷದೊಡನೆ ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ನೆರವೇರಿತು. ಚೈತ್ರ ಶುದ್ಧ ಹುಣ್ಣಿಮೆಯ ಮುಹೂರ್ತದಲ್ಲಿ ನಡೆಯುವ ವಾರ್ಷಿಕ ಮಹಾರಥೋತ್ಸವದಲ್ಲಿ ಬೆಳಗ್ಗೆ ದೇವರ ರಥಾರೋಹಣದ ನಂತರ ಸಾಂಕೇತಿಕವಾಗಿ ಮಹಾರಥೋತ್ಸವದ ಮುಹೂರ್ತ ನಡೆಸಿ, ರಥಾರೂಢ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ನಂತರ ಮಧ್ಯರಾತ್ರಿಯ ಹೊತ್ತಿಗೆ ರಥಬೀದಿಯಲ್ಲಿ ಮಹಾರಥೋತ್ಸವವು ನಡೆಯುವುದು ಹಿಂದಿನಿಂದ ಬಂದ ವಾಡಿಕೆ. ಆದರೆ ಈಗ ಮೂರು ವರ್ಷಗಳಿಂದ ವಾರ್ಷಿಕ ಮಹಾರಥೋತ್ಸವವನ್ನು ಬೆಳಗಿನ ಮುಹೂರ್ತದಲ್ಲಿಯೇ ನಡೆಸಲಾಗುತ್ತಿದ್ದು, ಈ ವರ್ಷವೂ ಬೆಳಗಿನ ಮುಹೂರ್ತದಲ್ಲಿಯೇ ದೇವಸ್ಥಾನದ ಪ್ರಧಾನ ಅರ್ಚಕರಾದ ವಿ. ಶ್ರೀನಿವಾಸ ಭಟ್ಟರ ಪೌರೋಹಿತ್ವದಲ್ಲಿ ಮಹಾರಥೋತ್ಸವವು ಸಾಂಗವಾಗಿ ನೆರವೇರಿತು.ಭಕ್ತರು ರಥಕ್ಕೆ ಬಾಳೆಹಣ್ಣು, ನೆನೆಸಿದ ಹಸಿಕಡಲೆ ಕಾಳುಗಳನ್ನು ಎರಚಿ ತಮ್ಮ ಹರಕೆ ನೆರವೇರಿಸಿದರು.ರಥಬೀದಿಯಲ್ಲಿ ಸಂಚರಿಸಿ ಮರಳಿ ಸ್ವಸ್ಥಾನಕ್ಕೆ ಬಂದ ರಥಾರೂಢ ವೆಂಕಟ್ರಮಣ ದೇವರ ದರ್ಶನವನ್ನು ಭಕ್ತರು ಸರತಿಯ ಸಾಲಿನಲ್ಲಿ ನಿಂತು ರಥವೇರಿ ಪಡೆದರು. ರಥೋತ್ಸವದ ಸಂದರ್ಭದಲ್ಲಿ ನಡೆಸುವ ಶಿಶುಪೂಜೆ, ಫಲ ಸಮರ್ಪಣೆ, ವಿವಿಧ ಬೆಳೆಗಳ ಸಮರ್ಪಣೆ ಇತ್ಯಾದಿ ವಿವಿಧ ಹರಕೆಗಳನ್ನೂ ಸಹ ಭಕ್ತರು ಸಮರ್ಪಿಸಿದರು.ಸಂಭ್ರಮದ ವೆಂಕಟರಮಣ ದೇವರ ಬ್ರಹ್ಮರಥೋತ್ಸವ
ಅಂಕೋಲಾ: ತಾಲೂಕಿನ ದೊಡ್ಡ ದೇವರೆಂದೆ ಪ್ರಸಿದ್ಧಿಯಾದ ವೆಂಕಟರಮಣ ದೇವರ ಬ್ರಹ್ಮರಥೋತ್ಸವವು ಮಂಗಳವಾರ ಹನುಮ ಜಯಂತಿಯ ದಿನದಂದು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ಯುಗಾದಿ ಹಬ್ಬದ ಪಾಡ್ಯ ಮಿತಿಯಿಂದಲೇ ರಥೋತ್ಸವದ ಪ್ರಯುಕ್ತ ವೆಂಕಟರಮಣ ದೇವಸ್ಥಾನದಲ್ಲಿ ಅನೇಕ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯುತ್ತದೆ.ಬ್ರಹ್ಮ ರಥೋತ್ಸವದ ಮೊದಲ ದಿನ ಪುಷ್ಪ ರಥೋತ್ಸವ ಸಣ್ಣ ತೇರು ಉತ್ಸವ ನಡೆಯುವುದು ಇಲ್ಲಿಯ ಸಂಪ್ರದಾಯ. ತಾಲೂಕಿನ ಸುತ್ತಲಿನ ಹಳ್ಳಿಹಳ್ಳಿಗಳಿಂದ ಹಾಗೂ ಹೊರ ತಾಲೂಕಿನಿಂದ ಜನರು ಆಗಮಿಸಿ ಹನುಮ ಜಯಂತಿಯಂದು ನಡೆಯುವ ಡೊಡ್ಡ ತೇರು ಬ್ರಹ್ಮರತೋತ್ಸವದಲ್ಲಿ ಪಾಲ್ಗೊಂಡರು.ಮಧ್ಯಾಹ್ನದಿಂದಲೆ ರಥದ ಮೇಲೆ ವಿರಾಜಮನವಾಗಿರುವ ವೆಂಕಟರಮಣ ದೇವರಿಗೆ ಭಕ್ತರು ರಥವನ್ನೇರಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಈ ರಥದ ಸುತ್ತಲು ಸುಂದರವಾದ ಕಲಾಕೃತಿಗಳಿದ್ದು, ಬಾಳೆಹಣ್ಣಿನ ಗೊನೆ ಹೂವು ಮತ್ತು ತೆಂಗಿನಕಾಯಿ ಪತಾಕೆಗಳಿಂದ ಸುಂದರವಾಗಿ ಶೃಂಗರಿಸಿದ ಬ್ರಹ್ಮರಥ ಭಕ್ತರ ಜಯ ಘೋಷದೊಂದಿಗೆ ರಥ ಎಳೆದು ಸಂಭ್ರಮಪಟ್ಟರು.ರಥಬೀದಿಯಿಂದ ಎಳೆದು ತಂದು ಕಾರವಾರ ರಸ್ತೆ ಮೂಲಕ ದುರ್ಗಾದೇವಿಯ ದೇವಸ್ಥಾನದ ಎದುರಿಗೆ ರಥಕ್ಕೆ ಅಗ್ರ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ನೆರೆದ ಸಹಸ್ರಾರು ಭಕ್ತರು ಬಾಳೆಹಣ್ಣು, ಹಸಿಗಡಲೆ ಹಾಗೂ ನಾಣ್ಯಗಳನ್ನು ರಥಕ್ಕೆ ಸಮರ್ಪಿಸಿ ದೇವರ ಕೃಪೆಗೆ ಪಾತ್ರರಾದರು.