ಸಾರಾಂಶ
ಮಂಜನಾಡು ಗುಡ್ಡ ಕುಸಿತ ದುರಂತದಲ್ಲಿ ತನಿಖೆ ನಡೆಸಲು ನಾಳೆ ಬರುತ್ತೇವೆ ಎಂದು ವ್ಯಾಟ್ಸ್ ಅಪ್ ಮುಖಾಂತರ ತುರ್ತು ನೋಟಿಸ್ ನೀಡಿ ಅಶ್ವಿನಿ ಅವರೇ ʻಗುಡ್ಡ ಹೇಗೆ ಬಿತ್ತುʼ ಎಂದು ಸಾಕ್ಷ್ಯ ಹೇಳಲು ಸೂಚಿಸಿರುವ ಇಲಾಖೆ ಅಧಿಕಾರಿಗಳ ನಡೆ ಕುಟುಂಬಿಕರನ್ನು ಇನ್ನಷ್ಟು ಕೆರಳಿಸಿದೆ.
ಉಳ್ಳಾಲ: ಮಂಜನಾಡಿ ಗುಡ್ಡ ಕುಸಿತ ದುರಂತದಲ್ಲಿ ಸರ್ಕಾರಕ್ಕೆ ಸ್ಥಳೀಯ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ ಬಗ್ಗೆ ಸಂತ್ರಸ್ತೆ ಅಶ್ವಿನಿ ಕುಟುಂಬಿಕರು ಸರ್ಕಾರಕ್ಕೆ ದೂರು ಸಲ್ಲಿಸಿದ ಹಿನ್ನೆಲೆಯಲ್ಲಿ ತನಿಖೆ ನಡೆಸುವಂತೆ, ಜಿಲ್ಲಾಡಳಿತ ತುರ್ತು ನೋಟಿಸ್ ಜಾರಿ ಮಾಡಿತ್ತು. ತನಿಖೆಗೆ ಕಾರ್ಯಪಾಲಕ ಇಂಜಿನಿಯರ್ ನೀರಾವರಿ ಇಲಾಖೆ ಅವರನ್ನು ನೇಮಿಸಿದ್ದಾರೆ. ತನಿಖೆ ನಡೆಸಲು ನಾಳೆ ಬರುತ್ತೇವೆ ಎಂದು ವ್ಯಾಟ್ಸ್ ಅಪ್ ಮುಖಾಂತರ ತುರ್ತು ನೋಟಿಸ್ ನೀಡಿ ಅಶ್ವಿನಿ ಅವರೇ ʻಗುಡ್ಡ ಹೇಗೆ ಬಿತ್ತುʼ ಎಂದು ಸಾಕ್ಷ್ಯ ಹೇಳಲು ಸೂಚಿಸಿರುವ ಇಲಾಖೆ ಅಧಿಕಾರಿಗಳ ನಡೆ ಕುಟುಂಬಿಕರನ್ನು ಇನ್ನಷ್ಟು ಕೆರಳಿಸಿದೆ.
ಅ. 8 ರ 1 ಗಂಟೆಗೆ ಘಟನೆ ನಡೆದ ಮಂಜನಾಡಿಯ ಮೊಂಟೆ ಪದವು ಸ್ಥಳಕ್ಕೆ ಅಶ್ವಿನಿ ಅವರನ್ನು ಹಾಜರಿರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.ಸೆ.30 ರಂದು ಮಾನವ ಹಕ್ಕುಗಳ ಆಯೋಗ ಮಂಗಳೂರು ಪೊಲೀಸ್ ಕಮೀಷನರ್ ಅವರಲ್ಲಿ ನ. 17 ರ ಒಳಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ನೋಟೀಸ್ ಜಾರಿ ಮಾಡಿತ್ತು. ಅಸಹಾಯಕಳಾಗಿರುವ ತಾಯಿ ಅಶ್ವಿನಿ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ನೀಡಿರುವ ದೂರಿನಲ್ಲಿ ಈ ಘಟನೆಗೆ ಕಾರಣರಾದ ರಸ್ತೆ ಮೇಲುಸ್ತುವಾರಿಯ ಇಂಜಿನಿಯರ್ ವಿರುದ್ಧ ಕೋಣಾಜೆ ಪೊಲೀಸರಿಗೆ ಬಿಎನ್‌ಎಸ್ ಕಾಯಿದೆ 105 ಮತ್ತು 106 ರಂತೆ ಘಟನೆ ನಡೆದ ದಿನವೇ ನಮ್ಮ ಮನೆಯವರ ಮೂಲಕ ಎಫ್‌ಐಆರ್ ದಾಖಲಿಸಲು ಲಿಖಿತವಾಗಿ ಕೋರಲಾಗಿತ್ತು. ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸರ್ಕಾರದ ಪ್ರಧಾನ ಕಾರ್ಯದರ್ಶಿ, ಪಂಚಾಯಿತಿ ಮತ್ತು ಗ್ರಾಮಾಭಿವೃದ್ದಿ ಇಲಾಖೆ, ರಾಜ್ಯ ಮಾನವ ಹಕ್ಕುಗಳ ಅಯೋಗ ಹಾಗೂ ಜಿಲ್ಲಾಧಿಕಾರಿಗಳಿಗೆ ,ದ ಕ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ತನಿಖೆಗೆ ಕೋರಲಾಗಿತ್ತು. ಮಾನವ ಹಕ್ಕುಗಳ ಆಯೋಗ ಮತ್ತು ಸರ್ಕಾರದ ಸೂಚನೆಯ ಮೇರೆಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಮೂಲಕ ಜಿಲ್ಲಾಡಳಿತಕ್ಕೆ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಸೂಚನೆ ನೀಡಿದ್ದರು. ಈ ಕ್ರಮವಾಗಿ ರಸ್ತೆ ಕಾಮಗಾರಿ ನಡೆಸಿದ ಇಂಜಿನಿಯರ್ ಗಳ ಬಗ್ಗೆ ಜಿಲ್ಲಾ ಪಂಚಾಯಿತಿ ಕಾರ್ಯವಾಹಕ ಇಂಜಿನಿಯರ್ ಸರ್ಕಾರಕ್ಕೆ ವರದಿ ತಯಾರಿಸಿ ತನ್ನ ಅಧೀನ ಇಂಜಿನಿಯರ್ ಗಳ ಕರ್ತವ್ಯ ಲೋಪಗಳನ್ನು ಮರೆಮಾಚಿ ವರದಿ ಸಲ್ಲಿಸಿದ್ದಾರೆ ಎಂದು ದೂರಲಾಗಿದೆ.ಆದ್ದರಿಂದ ಉನ್ನತ ದರ್ಜೆಯ ಇಂಜಿನಿಯರ್ ಮೂಲಕ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಒಪ್ಪಿಸಿ ತಪ್ಪಿತಸ್ಥ ವಿರುದ್ದ ಕ್ರಮ ಕೈಗೊಂಡು ನ್ಯಾಯ ದೊರಕಿಸಲು ದೂರು ಸಲ್ಲಿಸಿದ್ದರು. ಅದೇ ರೀತಿಯಲ್ಲಿ ಸುಳ್ಳು ವರದಿ ಕುರಿತು ಮಾನವ ಹಕ್ಕುಗಳ ಆಯೋಗಕ್ಕೂ ಎರಡನೇ ಬಾರಿ ದೂರು ಸಲ್ಲಿಸಲಾಗಿತ್ತು. ಅದರಂತೆ ಮತ್ತೊಮ್ಮೆ ಸ್ಪಂದಿಸಿರುವ ಆಯೋಗ ಮಂಗಳೂರು ಪೊಲೀಸ್ ಕಮೀಷನರ್ ಅವರಿಗೆ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ತಿಳಿಸಿತ್ತು. ಇದೀಗ ರಾಜ್ಯಮಟ್ಟದ ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಅವರಲ್ಲಿ ತನಿಖೆಗೆ ಸೂಚಿಸಿದಂತೆ, ಅಧಿಕಾರಿಗಳು ತುರಾತುರಿಯಲ್ಲಿ ಅ.7 ರ ಮಧ್ಯಾಹ್ನ ವೇಳೆಗೆ ದೂರುದಾರರ ಮೊಬೈಲ್ ಸಂಖ್ಯೆಯ ವಾಟ್ಸಪ್ ಗೆ ನೋಟೀಸ್ ನೀಡಿ ಅ.8 ರಂದು ಹಾಜರಿರುವಂತೆ ಕಾಲುಗಳನ್ನು ಕಳೆದುಕೊಂಡ ಅಶ್ವಿನಿ ಅವರಿಗೆ ಸೂಚಿಸಿದ್ದಾರೆ. ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದಲೇ ಆತುರದ ತನಿಖೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.