ಸಾರಾಂಶ
ಉಳ್ಳಾಲ: ಮಂಜನಾಡಿ ಉರುಮಣೆಕೋಡಿ ದುರಂತಕ್ಕೆ ಸಂಬಂಧಿಸಿ ಸಂತ್ರಸ್ತೆ ಅಶ್ವಿನಿಗೆ ನೋಟೀಸ್ ನೀಡಿ ಅ.೮ ರಂದು ಹಾಜರಾಗದ ಅಧಿಕಾರಿಗಳು ಮಾಧ್ಯಮಗಳಲ್ಲಿ ಸುದ್ಧಿಯಾಗುತ್ತಿದ್ದಂತೆ ಅ.೯ ರಂದು ಅಸೌಖ್ಯದಿಂದ ಇದ್ದ ತನಿಖಾಧಿಕಾರಿಯಾಗಿ ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಜಯಪ್ರಕಾಶ್ ನಿಯೋಗ ಭೇಟಿ ನೀಡಿ ಕಾಂಕ್ರೀಟಿಕರಣಗೊಂಡಿರುವ ರಸ್ತೆ , ಮಣ್ಣು ಮತ್ತು ಕುಸಿತಗೊಂಡಿರುವ ಮನೆಯ ಸುತ್ತಲೂ ಅಳತೆ ನಡೆಸಲಾಯಿತು.
ಉಳ್ಳಾಲ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಗುರುದತ್ , ಜಿಲ್ಲಾ ಪಂಚಾಯಿತಿ ನೀರಾವರಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ನಿತೇಶ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಮ್ಯಾ ಸೇರಿದ ನಿಯೋಗ ಗುರುವಾರ ಮಧ್ಯಾಹ್ನ 2 ಗಂಟೆಯ ವೇಳೆ ಭೇಟಿ ನೀಡಿತು.ನೀರಾವರಿ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಜಯಪ್ರಕಾಶ್ ಮಾಧ್ಯಮದೊಂದಿಗೆ ಮಾತನಾಡಿ, ಕಾಂಕ್ರಿಟಿಕರಣಗೊಂಡಿರುವ ರಸ್ತೆಯ ಆರಂಭದಿಂದ ಕೊನೆಯವರೆಗೆ, ರಸ್ತೆಯ ಕೊನೆಯಿಂದ ದುರ್ಘಟನೆ ಸಂಭವಿಸಿದ ಮನೆಯವರೆಗೆ, ಮನೆಯ ಹಿಂಭಾಗದಿಂದ ಗುಡ್ಡದವರೆಗೆ, ಮನೆ ಸಮೀಪದ ಹಳ್ಳದಿಂದ ಮನೆಯ ಹಿಂಭಾಗದ ಗುಡ್ಡದವರೆಗೆ ಅಳತೆ ಮಾಡಲಾಗಿದೆ. ವಸ್ತುನಿಷ್ಠ ವರದಿ ಕೊಡುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ಮನೆಮಂದಿ 2013 ರಲ್ಲಿ ಬಸವ ಕಲ್ಯಾಣ ಯೋಜನೆಯಡಿ ಫಲಾನುಭವಿಗಳಾಗಿದ್ದಾರೆ, ಅದೇ ಸಂದರ್ಭದಲ್ಲಿ ಆರ್ ಸಿಸಿ ಮನೆಯನ್ನು ಕಟ್ಟಿದ್ದಾರೆ. ಅದರ ಹಿಂದೆ ಹಂಚಿನ ಮನೆಯ ಕುರಿತು ಮಾಹಿತಿಯಿಲ್ಲ. ಕಾಂಕ್ರೀಟಿಕರಣಕ್ಕೆ ಯಂತ್ರ ಬಳಸಿರುವುದು ಗುಡ್ಡದಲ್ಲಿ ಕಂಡು ಬಂದ ಕುರುಹುಗಳಿಂದ ಗೋಚರಿಸುತ್ತದೆ. ಈ ಬಾರಿ ಮಳೆಯೂ ಬೇಗ ಆರಂಭವಾಗಿದೆ, ದ.ಕ ಜಿಲ್ಲೆಯಾದ್ಯಂತ ಅಲ್ಲಲ್ಲಿ ಕುಸಿತವುಂಟಾಗಿದೆ. ವರದಿ ಪರಿಶೀಲನೆ ಬಳಿಕ ಸತ್ಯಾಸತ್ಯತೆ ಗೊತ್ತಾಗುವುದು ಎಂದರು.ಮೇ 30 ರಂದು ಉಂಟಾದ ಮನೆ ಕುಸಿತದಿಂದ ಮನೆ ಯಜಮಾನ ಕಾಂತಪ್ಪ ಪೂಜಾರಿ ಒಂದು ಕಾಲು ತುಂಡಾಗಿ, ಪತ್ನಿ ಪ್ರೇಮಾ (60), ಮೊಮ್ಮಕ್ಕಳಾದ ಆರ್ಯನ್ (3), ಆರುಷ್ (2) ಮನೆಯಡಿ ಸಿಲುಕಿ ಮೃತಪಟ್ಟಿದ್ದರು. ಮಕ್ಕಳ ತಾಯಿ ಅಶ್ವಿನಿ ಎರಡು ಕಾಲುಗಳು ತುಂಡಾಗಿವೆ. ಘಟನೆಗೆ ಮಳೆಯೊಂದು ಮಾತ್ರವಲ್ಲ ಮನೆ ಮೇಲಿನ ಗುಡ್ಡ ಕಡಿದು ನಿರ್ಮಿಸಿದ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿಯೂ ಕಾರಣವಾಗಿದೆ ಎಂದು ಅಶ್ವಿನಿ ಮನೆಮಂದಿ ದೂರಿದ್ದರು.ಈ ಕುರಿತು ಪೊಲೀಸ್ ಠಾಣೆಯಲ್ಲಿಯೂ ಪ್ರಕರಣ ದಾಖಲಾಗದೇ, ಮಂಜನಾಡಿ ಗ್ರಾಮ ಪಂಚಾಯಿತಿಯಿಂದ ಮಾನವ ನಿರ್ಮಿತ ರಸ್ತೆ, ಹಳೇಯ ಮನೆ ಅನ್ನುವ ಸುಳ್ಳು ವರದಿ ನೀಡಿ ಸರಕಾರದ ಹಾದಿ ತಪ್ಪಿಸಲು ಯತ್ನಿಸಿದ್ದರು ಎಂದು ಅಶ್ವಿನಿ ಮನೆಮಂದಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಮಾನವ ಹಕ್ಕು ಆಯೋಗಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ ಪೊಲೀಸ್ ಇಲಾಖೆಗೆ ನಿಗದಿತ ದಿನಾಂಕದೊಳಕ್ಕೆ ವರದಿ ನೀಡುವಂತೆಯೂ , ಸ್ಥಳಪರಿಶೀಲನೆ ನಡೆಸಲು ನೀರಾವರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಅವರನ್ನು ನಿಯೋಜಿಸಿತ್ತು. ನೀರಾವರಿ ಇಲಾಖೆಯಿಂದ ಅ.7 ರಂದು ಅಶ್ವಿನಿ ತನಿಖೆ ಸಂದರ್ಭ ಘಟನಾ ಸ್ಥಳದಲ್ಲಿ ಹಾಜರಾಗುವಂತೆ ವಾಟ್ಸಾಪ್ ಗೆ ನೋಟೀಸು ನೀಡಿದ್ದ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಮಾಧ್ಯಮಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ನೋಟೀಸು ನೀಡಿದ ಅ.8 ರಂದು ಹಾಜರಾಗದ ಅಧಿಕಾರಿಯ ನಡೆಯನ್ನು ಮತ್ತೆ ಘಟನಾ ಸ್ಥಳದಲ್ಲಿ ಸೇರಿದ್ದ ಮುಖಂಡರು ಹಾಗೂ ಕುಟುಂಬಿಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಎರಡು ಕಾಲುಗಳನ್ನು ಕಳೆದುಕೊಂಡಿರುವ ಅಶ್ವಿನಿಯನ್ನು ಕರೆತರಿಸಿ ಅಧಿಕಾರಿಗಳು ಗೈರಾಗಿ ಅಮಾನವೀಯತೆ ಮೆರೆದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿ ಮಾಡಲಾಗಿತ್ತು. ಅಲ್ಲದೆ ತನಿಖಾಧಿಕಾರಿ ಅಸೌಖ್ಯದಿಂದ ಇರುವುದಾಗಿ ಮೊಬೈಲ್ ಮೂಲಕ ಸಂಭಾಷಣೆ ನಡೆಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದರಿಂದ ಅ.9 ರಂದು ಮಾಧ್ಯಮಗಳ ವರದಿ ಬೆನ್ನಲ್ಲೇ ಅಸೌಖ್ಯದಿಂದ ಇದ್ದ ಅಧಿಕಾರಿ ಸ್ಥಳ ಪರಿಶೀಲನೆಗೆ ಆಗಮಿಸಿ ಅಳತೆ ಮಾಡಿದ್ದಾರೆ.ಅಳತೆ ಸಂದರ್ಭ ಸಹೋದರ ಪವನ್, ಪತಿ ಸೀತಾರಾಮ, ಸಂಬಂಧಿ ಸುಮಲತಾ ಕೊಣಾಜೆ, ಬಿಜೆಪಿ ಮುಖಂಡರಾದ ಜಗದೀಶ್ ಆಳ್ವ ಕುವೆತ್ತಬೈಲ್, ಮುರಳೀಧರ್ ಕೊಣಾಜೆ, ಪುಷ್ಪರಾಜ್ ಹರೇಕಳ ಮತ್ತಿತರರಿದ್ದರು.ಶೀಘ್ರವೇ ತೆರವು: ಕುಸಿದುಬಿದ್ದ ಮನೆಯ ಅವಶೇಷಗಳನ್ನು ಕೂಡಲೇ ತೆರವುಗೊಳಿಸುವಂತೆ ಮನೆಮಂದಿ ಉಳ್ಳಾಲ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾ ಅಧಿಕಾರಿ ಗುರುದತ್ ಅವರಲ್ಲಿ ಒತ್ತಾಯಿಸಿದ್ದರು.