ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಕಾನ್‌ಬೈಲ್ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ತಲಾಕಾವೇರಿ ಜ್ಞಾನ ವಿಕಾಸ ತಂಡದ ವತಿಯಿಂದ ಸಾಮಾಜಿಕ ಆರಿವು ಕುರಿತು ಬೀದಿನಾಟಕ ಪ್ರದರ್ಶನ ನಡೆಯಿತು.ಶುಕ್ರವಾರ ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಜಿಕೇರೆ ಸಮುದಾಯ ಭವನದಲ್ಲಿ ತಲಾಕಾವೇರಿ ಜ್ಞಾನವಿಕಾಸ ತಂಡದ ವತಿಯಿಂದ ಬೀದಿನಾಟಕದ ಮೂಲಕ ವೈಯಕ್ತಿಕವಾಗಿ ಆರೋಗ್ಯ ಬಗ್ಗೆ ಕಾಳಜಿ ವಹಿಸುವುದು, ಅಪ್ರಾಪ್ತ ವಯಸ್ಕ ಮಕ್ಕಳಿಗೆ ವಿವಾಹ ನಡೆಸುವುದರಿಂದ ಮುಂದಾಗುವ ದುಷ್ಪಾರಿಣಾಮ, ತಮ್ಮ ಸುತ್ತ ಮುತ್ತಲಿನ ಪರಿಸರ ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆಯಿಂದ ಪರಿಸರದ ಮೇಲೆ ಆಗುತ್ತಿರುವ ಹಾನಿ ಹಾಗೂ ತಮ್ಮ ಸುತ್ತ ಮುತ್ತಲ್ಲಿನಲ್ಲಿ ಹಸಿರು ಪರಿಸರವನ್ನು ಸಂರಕ್ಷಿಸುವ ವಿಚಾರದ ಕುರಿತು ಈ ಭಾಗದ ಜನತೆಯಲ್ಲಿ ಜಾಗೃತಿ ಮೂಡಿಸಿದರು.
ಈ ಸಮಾರಂಭದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚಂದ್ರಶೇಖರ್ ನೇರವೇರಿಸಿದರು.ಸಮಾರಂಭದ ವೇದಿಕೆಯಲ್ಲಿ ಕಾನ್‌ಬೈಲ್ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಮೂರ್ತಿ, ಗ್ರಾ.ಪಂ.ಸದಸ್ಯೆ ಪ್ರೇಮಾ, ಜ್ಞಾನವಿಕಾಸ ಕೇಂದ್ರ ಸಮನ್ವಯ ಅಧಿಕಾರಿ ಮಾಲಿನಿ, ಒಕ್ಕೂಟದ ಅಧ್ಯಕ್ಷೆ ಖತ್ತೀಜ, ಸೇವಾ ಪ್ರತಿನಿಧಿ ಯಶೋಧ ಬಸವರಾಜ್ ಇದ್ದರು.
ಪ್ರೌಢಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಗೂ ಕಾನ್‌ಬೈಲ್ ಜ್ಞಾನವಿಕಾಸ ಕೇಂದ್ರ ಸದಸ್ಯರು ಇದ್ದರು.ಮಡಿಕೇರಿ ಸರ್ಕಾರಿ ಮಾದರಿ ಶಾಲೆ ಪ್ರಾರಂಭೋತ್ಸವ:
ಕನ್ನಡಪ್ರಭ ವಾರ್ತೆ ಮಡಿಕೇರಿನಗರದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಶುಕ್ರವಾರ ನಡೆಯಿತು.ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕಿ ಬಿಂದು, ಮಡಿಕೇರಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಯ ಇ. ಸಿ.ಒ. ಹರೀಶ್, ಎಸ್.ಡಿ.ಎಂ.ಸಿ. ಸದಸ್ಯರಾದ ಜಗದೀಶ್, ಶಾಲಾ ಮುಖ್ಯ ಶಿಕ್ಷಕಿ ಸುಶೀಲ, ಶಾಲಾ ಶಿಕ್ಷಕರು ಶಾಲಾ ಮಕ್ಕಳಿಗೆ ಹೂ ಮತ್ತು ಸಿಹಿ ನೀಡುವುದರ ಮೂಲಕ ಸ್ವಾಗತಿಸಿ ಬರಮಾಡಿಕೊಂಡರು.ನಂತರ ನಡೆದ ಸಭಾ ಕಾರ್ಯಕ್ರಮ ದಲ್ಲಿ ಶಾಲಾ ಶಿಕ್ಷಕಿ ಜಯಮ್ಮ ನಿರೂಪಿಸಿದರು. ಶಾಲಾ ಮುಖ್ಯಶಿಕ್ಷಕರು ಸ್ವಾಗತಿಸಿದರು. ಶಿಕ್ಷಣ ಇಲಾಖೆಯ ಡಿ.ವೈ. ಪಿ. ಸಿ ಕೃಷ್ಣಪ್ಪ ಶುಭಾಶಯ ಕೋರಿದರು. ಅತಿಥಿಗಳು ಶಾಲಾ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ವಿತರಿಸಿದರು. ಶಿಕ್ಷಕಿ ಸಿಸ್ಸಿ ಮ್ಯಾಥಿರ್ ವಂದಿಸಿದರು.