ಮೊಹರೆ ಹಣಮಂತರಾಯ ಪ್ರಶಸ್ತಿಗೆ ಮಂಜುನಾಥ್ ಭಾಜನ

| Published : Oct 26 2024, 12:51 AM IST

ಸಾರಾಂಶ

ಶಿವಮೊಗ್ಗದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕನ್ನಡ ಪತ್ರಿಕೋಧ್ಯಮದ ಮೊಹರೆ ಹಣಮಂತರಾಯ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ಎನ್.ಮಂಜುನಾಥ್ ಮತ್ತು ಕರ್ನಾಟಕದ ನಾಟಕ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದ ಹೊನ್ನಾಳಿ ಚಂದ್ರಶೇಖರ್ ಅವರಿಗೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಅ.27 ರಂದು ಬೆಳಗ್ಗೆ 11ಕ್ಕೆ ಪತ್ರಿಕಾಭವನದಲ್ಲಿ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹಿರಿಯ ಪತ್ರಕರ್ತ ಗೋಪಾಲ್ ಯಡಗೆರೆ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಫ್‌ಡಬ್ಲ್ಯುಜೆ ರಾಷ್ಟ್ರೀಯ ಅಧ್ಯಕ್ಷ, ಕನ್ನಡ ಪ್ರಭ ಸಂಪಾದಕ (ಸಮನ್ವಯ)ಬಿ.ವಿ.ಮಲ್ಲಿಕಾರ್ಜುನಯ್ಯ ಅವರು ಅಭಿನಂದನಾ ಭಾಷಣ ಮಾಡಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆಯ ಉಪಾಧ್ಯಕ್ಷ ಯು.ಎಚ್.ವೈದ್ಯನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು.

ಮೊಹರೆ ಹಣಮಂತರಾಯ ಪ್ರಶಸ್ತಿ ಎನ್ನುವುದು ರಾಜ್ಯ ಸರ್ಕಾರ ಕೊಡಮಾಡುವ ಅತ್ಯಂತ ಪ್ರತಿಷ್ಟಿತ ಪ್ರಶಸ್ತಿ. ಈ ವರೆಗೆ ಬೆಂಗಳೂರು ನಗರ ಕೇಂದ್ರಿತವೇ ಆಗಿ ಉಳಿದಿದ್ದ ಈ ಪ್ರಶಸ್ತಿಯೂ ಮೊದಲ ಬಾರಿಗೆ ಎನ್.ಮಂಜುನಾಥ್ ಅವರ ಮೂಲಕ ಜಿಲ್ಲಾ ಕೇಂದ್ರಕ್ಕೂ ಬಂದಿರುವುದು ಜಿಲ್ಲೆಯ ಪತ್ರಿಕೋದ್ಯಮಕ್ಕೆ ಸಂದ ಗೌರವವಾಗಿದೆ. ಪತ್ರಕರ್ತರಾಗಿ ಸೇವೆ ಸಲ್ಲಿಸುವ ಮೂಲಕ ನಿರಂತರವಾಗಿ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹೊನ್ನಾಳಿ ಚಂದ್ರಶೇಖರ್ ಅವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇದು ಕೂಡ ಪತ್ರಕರ್ತರ ವಲಯಕ್ಕೆ ಸಂತಸ ತಂದಿದೆ. ಇಬ್ಬರಿಗೂ ಒಟ್ಟಾಗಿ ಆಭಿನಂದಿಸುವುದು ನಮ್ಮ ಕರ್ತವ್ಯವಾಗಿದ್ದು, ಜಿಲ್ಲೆಯ ಎಲ್ಲ ಪತ್ರಕರ್ತರು ಕುಟುಂಬ ಸಮೇತರಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ಚಿಗೊಳಿಸಬೇಕು ಎಂದು ಮನವಿ ಮಾಡಿದರು.

ಟ್ರಸ್ಟ್ ಉಪಾಧ್ಯಕ್ಷ ವೈ.ಕೆ.ಸೂರ್ಯನಾರಾಯಣ ಮಾತನಾಡಿ, ಮೊಹರೆ ಹಣಮಂತರಾಯ ಪ್ರಶಸ್ತಿಯೂ ಶಿವಮೊಗ್ಗ ಜಿಲ್ಲೆಗೆ ಮಾತ್ರವಲ್ಲದೆ ಮಧ್ಯ ಕರ್ನಾಟಕಕ್ಕೆ ದೊರೆತ ಮೊದಲ ಪ್ರಶಸ್ತಿ ಎನ್.ಮಂಜುನಾಥ್ ಅವರಿಗೆ ಬಂದಂತಾಗಿದೆ. ಇದು ಕ್ರಾಂತಿದೀಪ ಪತ್ರಿಕೆಗೆ ಸಂದ ಗೌರವ. ಕ್ರಾಂತಿ ದೀಪ ಪತ್ರಿಕೆಯು ಆರಂಭದಿಂದಲೂ ಜನಪರ ಚಳವಳಿಗಳಿಗೆ, ಪ್ರಗತಿಪರ ಹೋರಾಟಗಳಿಗೆ ಬೆಂಬಲವಾಗಿ ನಿಂತ ಪತ್ರಿಕೆ. ಹೊನ್ನಾಳಿ ಚಂದ್ರಶೇಖರ್ ಅವರು ಕೂಡ ಅಪರೂಪದ ವ್ಯಕ್ತಿ. ಪತ್ರಕರ್ತರಾಗಿ ಸೇವೆ ಸಲ್ಲಿಸುವುದರ ಜತೆಗೆಯೇ ರಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಅವರ ಈ ಸೇವೆಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಸಿಕ್ಕಿರುವುದು ಕೂಡ ಜಿಲ್ಲೆಯ ಹೆಮ್ಮೆ ಎಂದು ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್ ಮಾತನಾಡಿ, ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ಪತ್ರಕರ್ತರು ಕುಟುಂಬ ಸಮೇತ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರೆಸ್‌ ಟ್ರಸ್ಟ್‌ ಖಜಾಂಚಿ ಜೇಸುದಾಸ್ ಉಪಸ್ಥಿತರಿದ್ದರು.