ಮಂಜುನಾಥ್ ಕಾರ್ಯ ವೈಖರಿ ಶ್ಲಾಘನೀಯ

| Published : Jan 22 2025, 12:31 AM IST

ಸಾರಾಂಶ

ಮನೆ ಬಾಗಿಲಿಗೆ ನಿಮ್ಮ ಸೇವಕ ಅಭಿಯಾನಕ್ಕೆ ಮೇಯರ್ ಕೆ.ಚಮನ್ ಸಾಬ್ ಮೆಚ್ಚುಗೆ

ಮನೆ ಬಾಗಿಲಿಗೆ ನಿಮ್ಮ ಸೇವಕ ಅಭಿಯಾನಕ್ಕೆ ಮೇಯರ್ ಕೆ.ಚಮನ್ ಸಾಬ್ ಮೆಚ್ಚುಗೆಕನ್ನಡಪ್ರಭ ವಾರ್ತೆ ದಾವಣಗೆರೆ

ನಗರದ ಎಂಸಿಸಿ ಬಿ ಬ್ಲಾಕ್‌ನಲ್ಲಿ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರು ಕಳೆದ 5 ವರ್ಷಗಳಿಂದ ಹಮ್ಮಿಕೊಂಡಿದ್ದ ಅಭಿಯಾನವು ಜನಪ್ರತಿನಿಧಿಯೊಬ್ಬರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ವಿಶೇಷ ಕಾರ್ಯಕ್ರಮ. ರಾಜ್ಯದಲ್ಲಿ ಮೊದಲ ಬಾರಿಗೆ ಇಂಥ ವಿಶಿಷ್ಟ ಕಾರ್ಯಕ್ರಮ ನಡೆಸಿದ ಮಂಜುನಾಥ್ ಕಾರ್ಯ ವೈಖರಿ ಶ್ಲಾಘನೀಯ ಎಂದು ಮಹಾನಗರ ಪಾಲಿಕೆ ಮೇಯರ್ ಕೆ.ಚಮನ್ ಸಾಬ್ ಪ್ರಶಂಸೆ ವ್ಯಕ್ತಪಡಿಸಿದರು.

ಎಂಸಿಸಿ ಬಿ ಬ್ಲಾಕ್ ಗೆ ಭೇಟಿ ನೀಡಿದ ಅವರು, ಜನರಿಂದ ಆಯ್ಕೆಯಾದ ಜನಪ್ರತಿನಿಧಿ ಜನರ ಸೇವಕ ಎಂಬುದರಲ್ಲಿ ಎರಡು ಮಾತಿಲ್ಲ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಈ ಕಾರ್ಯಕ್ರಮ ತುಂಬಾನೇ ಪ್ರಯೋಜನಕಾರಿ. ಜನರಿಂದ ಆಯ್ಕೆಯಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ವಾರ್ಡ್ ನಲ್ಲಿ ಜನರ ಪ್ರೀತಿ ಸಂಪಾದನೆ ಮಾಡಿರುವ ಈ ಕಾರ್ಯ ಎಲ್ಲರಿಗೂ ಮಾದರಿ ಎಂದು ಸಂತಸ ವ್ಯಕ್ತಪಡಿಸಿದರು.

ಮನೆ ಬಾಗಿಲಿಗೆ ನಿಮ್ಮ ಸೇವಕ ಕಾರ್ಯಕ್ರಮಕ್ಕೆ ಜನರು ಸ್ಪಂದನೆ ನೀಡಿದ್ದಾರೆ. ಯಾವಾಗಲೂ ವಾರ್ಡ್ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುವ ಮಂಜುನಾಥ್ ಅವರು ಅತ್ಯುತ್ತಮ ಕಾರ್ಯ ನಿರ್ವಹಿಸುವ ಮೂಲಕ ಎಲ್ಲರ ಪ್ರೀತಿ ಸಂಪಾದಿಸಿದ್ದಾರೆ. ಜನರೊಟ್ಟಿಗೆ ಬೆರೆಯಲು, ಕಷ್ಟಗಳಿಗೆ ಸ್ಪಂದಿಸಲು, ಸಮಸ್ಯೆ ಪರಿಹರಿಸಲು ಈ ಅಭಿಯಾನ ಸಹಕಾರಿ ಎಂದು ಚಮನ್ ಸಾಬ್ ಹೇಳಿದರು.

ಇದೇ ವೇಳೆ ಎಂಸಿಸಿ ಬಿ ಬ್ಲಾಕ್‌ನ ನ್ಯಾಯಬೆಲೆ ಅಂಗಡಿಗೂ ಮೇಯರ್ ಭೇಟಿ ನೀಡಿ ಅಕ್ಕಿ ಗುಣಮಟ್ಟದ ಪರಿಶೀಲನೆ ನಡೆಸಿದರು.

60 ವರ್ಷ ಮೇಲ್ಪಟ್ಟ ವೃದ್ಧರು ಥಂಬ್ ನೀಡಲು ಆಗುತ್ತಿಲ್ಲ. ಬೆರಳು ನೀಡಿದರೂ ಕಂಪ್ಯೂಟರ್‌ನಲ್ಲಿ ತೆಗೆದುಕೊಳ್ಳುತ್ತಿಲ್ಲ. ಇದು ಸಮಸ್ಯೆಗೂ ಕಾರಣವಾಗಿದೆ ಎಂದು ಅಲ್ಲಿಗೆ ಬಂದಿದ್ದ ವೃದ್ದರು ಅಳಲು ತೋಡಿಕೊಂಡರು. ಕೂಡಲೇ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕರಿಗೆ ಫೋನ್ ಮಾಡಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸೂಚನೆ ನೀಡಿದರು.

ಪರಿಶೀಲನೆ ವೇಳೆ ಬೆರಳು ನೀಡುವುದರ ಬದಲು ಕಣ್ಣು ಪರೀಕ್ಷೆ ತೆಗೆದುಕೊಳ್ಳಬಹುದು. ಆದ್ರೆ, ವೃದ್ಧರು ಥಂಬ್ ತೆಗೆದುಕೊಳ್ಳದೇ ಇರುವುದರಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೇ ಕಾಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವಂತೆ ಸಲಹೆ ನೀಡಿದರು.

ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಮಾತನಾಡಿ, ಜನರ ಮನೆ ಬಾಗಿಲಿಗೆ ಹೋದಾಗ ಅವರು ತೋರುತ್ತಿದ್ದ ಪ್ರೀತಿ, ಕೊಟ್ಟಿರುವ ವಿಶ್ವಾಸ ಎಂದಿಗೂ ಮರೆಯುವುದಿಲ್ಲ. ವಾರ್ಡ್ ಜನರು ಎಲ್ಲಾ ರೀತಿಯಲ್ಲಿಯೂ ಪ್ರೋತ್ಸಾಹ ಹಾಗೂ ಸಹಕಾರ ನೀಡಿದ್ದಾರೆ. ಆದ್ದರಿಂದಲೇ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಸಾಧ್ಯವಾಯಿತು. ಜನರೊಟ್ಟಿಗೆ ಯಾವಾಗಲೂ ಇರುತ್ತೇನೆ. ಜನಪ್ರತಿನಿಧಿಯಾಗಿ ವಾರ್ಡ್ನ ಸಮಗ್ರ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇನೆ. ಜನರೂ ಸಹ ಅಷ್ಟೇ ಮನೆ ಮನಮಗನಂತೆ ಕಂಡಿದ್ದಾರೆ. ಜನಪ್ರತಿನಿಧಿಗೆ ಇದಕ್ಕಿಂತ ಬೇರೇನುಬೇಕು ಎಂದು ಹೇಳಿದರು.