ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಡಾ. ಮಂಜುನಾಥ್ ಹೆಸರು ಬಹುತೇಕ ಅಂತಿಮಗೊಂಡಿದೆ. ನಮ್ಮ ರಾಷ್ಟ್ರೀಯ ನಾಯಕರು ಅಂತಿಮ ಪಟ್ಟಿ ಅನುಮೋದನೆ ಮಾಡಬೇಕಿದೆ. ಸ್ಥಳೀಯವಾಗಿ ೮ ವಿಧಾನಸಭಾ ಕ್ಷೇತ್ರದ ಮೈತ್ರಿ ಮುಖಂಡರು ಇದಕ್ಕೆ ಒಮ್ಮತ ಸೂಚಿಸಿದ್ದಾರೆ. ಅವರು ಅಭ್ಯರ್ಥಿಯಾಗುವುದು ಸೂಕ್ತವೆಂದು ತೀರ್ಮಾನಿಸಿದ್ದೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ತಿಳಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸಂದೇಶವನ್ನು ಜೆಡಿಎಸ್ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ದೆಹಲಿಗೆ ತೆರಳಿ ವರಿಷ್ಠರಿಗೆ ತಿಳಿಸಲಿದ್ದಾರೆ. ನಾಳೆ ಅಥವಾ ನಾಡಿದ್ದು ಪಟ್ಟಿ ಬಿಡುಗಡೆ ಆಗುತ್ತದೆ. ಮಂಜುನಾಥ್ ರನ್ನು ಸ್ಪರ್ಧೆಗೆ ಒಪ್ಪಿಸುವ ಕೆಲಸವನ್ನು ಕುಮಾರಸ್ವಾಮಿ ಮಾಡುತ್ತಿದ್ದು, ಅವರೂ ಸ್ಪರ್ಧೆಗೆ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.
ಮಂಜುನಾಥ್ ಅವರೊಡನೆ ನಾನೂ ಮಾತನಾಡಿದ್ದೇನೆ. ಇದರಲ್ಲಿ ಯಾವುದೇ ಗೊಂದಲವಿಲ್ಲ.ಪ್ರಾರಂಭದಲ್ಲಿ ಅವರ ಶ್ರೀಮತಿ ಸ್ವಲ್ಪ ಅಳಕು ತೋರಿಸಿದರು. ಬಳಿಕ ಕುಮಾರಸ್ವಾಮಿಯವರು ಒಪ್ಪಿಸುವ ಕೆಲಸ ಮಾಡಿದ್ದಾರೆ. ಜೆಡಿಎಸ್ - ಬಿಜೆಪಿ ಮಿತ್ರ ಪಕ್ಷಗಳು ಸೇರಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ನಾನು ಇಲ್ಲೇ ಇರಲು ಇಷ್ಟಪಡುತ್ತೇನೆ:ನಾನು ಸ್ಥಳೀಯ ಮಟ್ಟದಲ್ಲಿ ರಾಜಕಾರಣ ಮಾಡಬೇಕೆಂದಿರುವವನು. ಹಾಗಾಗಿ ಲೋಕಸಭೆಗೆ ಹೋಗಬಾರದೆಂಬ ನಿಲುವು ಮೊದಲಿನಿಂದಲೂ ಇತ್ತು. ಕಾರ್ಯಕರ್ತರು, ಮುಖಂಡರು ನನ್ನ ಸ್ಪರ್ಧೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ವೈಯಕ್ತಿಕವಾಗಿ ನಾನು ಇಲ್ಲೇ ಇರಲು ಇಷ್ಟಪಡುತ್ತೇನೆ. ಹಾಗಾಗಿ ನಾನೇ ಖುದ್ದು ಮಂಜುನಾಥ್ ಅವರನ್ನು ಒಪ್ಪಿಸಿದ್ದೇನೆ ಎಂದರು.
ಮಂಜುನಾಥ್ ಮಂತ್ರಿಯಾಗಬೇಕು:ವೈದ್ಯಕೀಯ ಕ್ಷೇತ್ರವೇ ಬೇರೆ, ರಾಜಕೀಯವೇ ಬೇರೆ ಎಂಬ ಕಾಂಗ್ರೆಸ್ ನಾಯಕರ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ರಾಜ್ಯದ ೨೨೪ ಕ್ಷೇತ್ರಗಳ ಶಾಸಕರ ಪೈಕಿ ಹಲವರು ಡಾಕ್ಟರ್‌ಗಳಿದ್ದಾರೆ. ಮಂಜುನಾಥ್ ರ ವೈದ್ಯಕೀಯ ಸೇವೆ ರಾಜಕೀಯದ ಮೂಲಕ ದೊಡ್ಡ ಮಟ್ಟಕ್ಕೆ ಹೋಗುತ್ತದೆ. ಬರೀ ರಾಜ್ಯವಲ್ಲ, ಇಡೀ ದೇಶಕ್ಕೇ ಅವರ ಸೇವೆ ಸಲ್ಲಬೇಕು. ನಾವು ಯೋಚನೆ ಮಾಡಿಯೇ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದೇವೆ ಎಂದರು.
ಮಂಜುನಾಥ್ ಮೇಲೆ ಯಾವುದೇ ಆರೋಪಗಳಿಲ್ಲ. ಅವರ ಸೇವಾ ಕಾರ್ಯ ಎಲ್ಲರಿಗೂ ತಲುಪುವಂತೆ ನಾವು ಮಾಡುತ್ತೇವೆ. ಇಷ್ಟು ವರ್ಷ ಕರ್ನಾಟಕದಲ್ಲಿ ಅವರು ಕೆಲಸ ಮಾಡಿದ್ದಾರೆ. ಮುಂದೆ ಅವರು ಮೋದಿಯವರ ನೇತೃತ್ವದಲ್ಲಿ ಕೆಲಸ ಮಾಡಬೇಕೆನ್ನುವುದು ನಮ್ಮ ಆಶಯ ಎಂದರು.ಶೀಘ್ರದಲ್ಲೇ ಮೈತ್ರಿ ಪಕ್ಷಗಳ ಕಾರ್ಯಕರ್ತರ ಸಮಾವೇಶ ಆಗುತ್ತದೆ. ಕುಮಾರಸ್ವಾಮಿಯವರು ದೆಹಲಿಗೆ ಹೋಗಿ ಬರಲಿದ್ದು, ಅವರು ಬಂದ ಬಳಿಕ ಮೈತ್ರಿ ಪಕ್ಷಗಳ ಬೃಹತ್ ಸಮಾವೇಶ ಮಾಡುತ್ತೇವೆ. ಕ್ಷೇತ್ರದ ಸಂಪೂರ್ಣ ಚುನಾವಣಾ ಜವಾಬ್ದಾರಿ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಬದಲಾವಣೆ ಜಗದ ನಿಯಮ!: ಸಿಪಿವೈಬಿಜೆಪಿ ಅಭ್ಯರ್ಥಿ ಆಯ್ಕೆಗೆ ಹಲವು ಮಾನದಂಡಗಳಿವೆ. ನಮ್ಮಲ್ಲಿ ಹೊಸ ಮುಖಗಳನ್ನು ತಂದು ಬದಲಾವಣೆ ಮಾಡುತ್ತಾರೆ ಎಂದು ಯೋಗೇಶ್ವರ್ ತಿಳಿಸಿದರು.
ಬಿಜೆಪಿಯಲ್ಲಿ ಹಾಲಿ ಸಂಸದರಿಗೆ ಟಿಕೆಟ್ ನೀಡದ ವಿಚಾರಕ್ಕೆ ಮೇಲಿನಂತೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ರಾಜ್ಯದಿಂದ ೨೫ ಸಂಸದರು ಪಕ್ಷದಿಂದ ಜಯಗಳಿಸಿದ್ದಾರೆ. ಆದರೆ, ಈ ಬಾರಿ ಬಹಳಷ್ಟು ಎಂಪಿಗಳು ಸ್ಪರ್ಧೆ ಮಾಡುತ್ತಿಲ್ಲ. ಬದಲಾವಣೆ ಜಗದ ನಿಯಮ, ಹೊಸಹೊಸ ಮುಖಗಳು ರಾಜಕೀಯಕ್ಕೆ ಬರಬೇಕು ಎಂದು ಮಾರ್ಮಿಕವಾಗಿ ನುಡಿದರು.ಡಿ.ಕೆ.ಬ್ರದರ್ಸ್ ವಿರುದ್ಧ ವಾಗ್ದಾಳಿ!
ಈ ಕ್ಷೇತ್ರದ ಸಂಸದರು ಬಹಳ ಮರೆಯುತ್ತಿದ್ದಾರೆ. ನಾನೇ ಸಾರ್ವಭೌಮ ಎಂದು ರೋಡ್ ರೋಡಲ್ಲಿ ಎಣ್ಣೆ ಕುಡಿಸಿ, ಜನರಿಗೆ ಸೀರೆ, ಕುಕ್ಕರ್ ಹಂಚುತ್ತಿದ್ದಾರೆ. ಅವರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದರೆ ಇಷ್ಟೆಲ್ಲಾ ಹಂಚಬೇಕಿತ್ತಾ? ಎಂದು ಸಂಸದ ಡಿ.ಕೆ. ಸುರೇಶ್ ವಿರುದ್ಧ ವಿಧಾನಪರಿಷತ್ ಸದಸ್ಯ ಸಿ.ಪಿ. ಯೋಗೇಶ್ವರ್ ವಾಗ್ದಾಳಿ ನಡೆಸಿದರು.ನಮ್ಮ ತಾಲೂಕಿನಲ್ಲಿ ನೀರಿನ ಕೊರತೆ ತುಂಬಾ ಇದೆ. ಜನ ನಿತ್ಯ ನೂರಾರು ಬೋರ್ ವೆಲ್ ಕೊರೆಸುತ್ತಿದ್ದಾರೆ. ಇದಕ್ಕೆ ಕಾರಣವೇ ಡಿ.ಕೆ. ಬ್ರದರ್ಸ್. ನೀರಾವರಿ ಸಚಿವರಾಗಿ ಡಿ.ಕೆ. ಶಿವಕುಮಾರ್ ಈ ಭಾಗಕ್ಕೆ ಏನೂ ಕೊಟ್ಟಿಲ್ಲ. ನೀರಾವರಿ ಸಚಿವರಾಗಿ ಡಿ.ಕೆ. ಶಿವಕುಮಾರ್ ಕಾವೇರಿ ನೀರನ್ನು ನಮ್ಮ ಭಾಗಕ್ಕೆ ಉಪಯೋಗಿಸದೇ ತಮಿಳುನಾಡಿಗೆ ಹರಿಯಲು ಬಿಟ್ಟು ಭಾಷಣ ಬಿಗಿಯುತ್ತಿದ್ದಾರೆ, ಇದಕ್ಕೆಲ್ಲ ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಉತ್ತರ ನೀಡುತ್ತಾರೆ ಎಂದು ಕಿಡಿಕಾರಿದರು.
ಹತ್ತಾರು ವರ್ಷಗಳಿಂದ ನಮ್ಮ ತಾಲೂಕಿನ ಕೆರೆಗಳು ಬತ್ತಿರಲಿಲ್ಲ. ಆದರೆ. ಈಗ ಬತ್ತಿದೆ ಎಂದರೆ ಅದಕ್ಕೆ ಡಿ.ಕೆ. ಶಿವಕುಮಾರ್ ಕಾರಣ, ಡಿಸಿಎಂ, ಸಂಸದರು ಇದಕ್ಕೆಲ್ಲ ಉತ್ತರ ಕೊಡಬೇಕಾಗುತ್ತದೆ. ಅವರ ದುಡ್ಡು, ದೌರ್ಜನ್ಯ, ದಬ್ಬಾಳಿಕೆಗೆ ಜನ ಉತ್ತರ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.