ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಶಸ್ವಿಯಾಗಿ ಮುನ್ನಡೆಸಿದ ಮಂಜುನಾಥ್‌: ಡಾ. ಆಳ್ವ

| Published : Jul 15 2024, 01:50 AM IST

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯಶಸ್ವಿಯಾಗಿ ಮುನ್ನಡೆಸಿದ ಮಂಜುನಾಥ್‌: ಡಾ. ಆಳ್ವ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಎಲ್.ಎಚ್. ಮಂಜುನಾಥ್ ಮತ್ತು ನಳಿನಿ ದಂಪತಿಯನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಫಲಪುಷ್ಪ, ನೆನಪಿನ ಕಾಣಿಕೆ, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ವಿದ್ಯಾವಂತರು ಹಾಗೂ ಅವಿದ್ಯಾವಂತರೊಂದಿಗೆ ಯಶಸ್ವಿಯಾಗಿ ವ್ಯವಹಾರ ನಡೆಸಿರುವ ಡಾ.ಎಲ್.ಎಚ್. ಮಂಜುನಾಥ್ ಅವರು ಸಮರ್ಥ ಸೇನಾಧಿಕಾರಿಯ ಕೆಲಸವನ್ನು ನಿರ್ವಹಿಸಿದ್ದಾರೆ. ಅವರು ಸುದೀರ್ಘ ಕಾಲ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ತೊಡಗಿಸಿಕೊಂಡು, ಸುಸ್ತಿರ ತಳಪಾಯದ ಉದ್ದೇಶವನ್ನು ಇಟ್ಟಿಕೊಂಡು ಅದನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಹೇಳಿದರು.

ಅವರು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ದ.ಕ. ಜಿಲ್ಲೆ ಹಾಗೂ ಪುತ್ತೂರು ತಾಲೂಕು ಜನಜಾಗೃತಿ ವೇದಿಕೆ ಜಂಟಿ ಆಶ್ರಯದಲ್ಲಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಕಳೆದ ೨೩ ವರ್ಷಗಳ ಕಾಲ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನಿವೃತ್ತರಾದ ಡಾ. ಎಲ್.ಎಚ್. ಮಂಜುನಾಥ್ ಅವರಿಗೆ ಪುತ್ತೂರು ಕೊಟೇಚಾ ಹಾಲ್‌ನಲ್ಲಿ ಶನಿವಾರ ಹಮ್ಮಿಕೊಳ್ಳಲಾದ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣ ಮಾಡಿದರು.

ಮಹಿಳಾ ಸಬಲೀಕರಣ, ರುಡ್‌ಸೆಟ್‌ನಲ್ಲಿ ಹೊಸರೂಪದ ತರಬೇತಿ, ಜನಜಾಗೃತಿಯನ್ನು ರಾಜ್ಯಕ್ಕೆ ವಿಸ್ತರಣೆ, ಆರೋಗ್ಯ ವಿಮೆ ಸೇರಿದಂತೆ ಡಾ. ವೀರೇಂದ್ರ ಹೆಗ್ಗಡೆಯವರ ಕನಸುಗಳನ್ನು ಅನುಷ್ಠಾನ ಮಾಡುವಲ್ಲಿ ಡಾ. ಮಂಜುನಾಥ್ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ೧ ಕೋಟಿ ರುಪಾಯಿಯಿಂದ ಆರಂಭಗೊಂಡ ವಹಿವಾಟನ್ನು ೨೫ ಸಾವಿರ ಕೋಟಿ ರು.ಗೆ ಏರಿಸುವಲ್ಲಿ, ರಾಜ್ಯದಲ್ಲಿ ೬.೫೦ ಲಕ್ಷ ಸ್ವಸಹಾಯ ಗುಂಪುಗಳ ರಚನೆ ಮಾಡುವಲ್ಲಿ, ೩ ಕೋಟಿ ಜನರನ್ನು ಯೋಜನೆಯ ಫಲಾನುಭವಿಯಾಗಿಸುವಲ್ಲಿ ಡಾ. ಮಂಜುನಾಥ್ ಅವರ ಮುಂಚೂಣಿಯ ಪ್ರಯತ್ನವಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಜನಜಾಗೃತಿ ವೇದಿಕೆಯ ಮೂಲಕ ೧.೨೦ ಲಕ್ಷ ಜನ ಮದ್ಯವ್ಯಸನ ಮುಕ್ತರಾಗಿದ್ದಾರೆ ಎಂಬುದೇ ಯೋಜನೆಯ ವತಿಯಿಂದ ನಡೆದಿರುವ ದೊಡ್ಡ ಮಟ್ಟದ ಕ್ರಾಂತಿಯಾಗಿದೆ. ಗ್ರಾಮಾಭಿವೃದ್ಧಿ ಯೋಜನೆಯನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸಿದ ಡಾ.ಎಲ್. ಎಚ್. ಮಂಜುನಾಥ್ ಅವರು ನಿವೃತ್ತರಾಗಿದ್ದರೂ ಅವರ ಅನುಭವ ಮುಂದೆಯೂ ಸಮಾಜಕ್ಕೆ ಬಳಕೆಯಾಗಬೇಕು ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿಯ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್., ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಡುಪಿ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ, ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಪ್ರಮುಖರಾದ ಸಾಜ ರಾಧಾಕೃಷ್ಣ ಆಳ್ವ, ಎ.ಸಿ. ಭಂಡಾರಿ, ಜನಜಾಗೃತಿ ವೇದಿಕೆಯ ಪುತ್ತೂರು ತಾಲೂಕು ಅಧ್ಯಕ್ಷ ಲೋಕೇಶ್ ಹೆಗ್ಡೆ, ಕಡಬ ತಾಲೂಕು ಅಧ್ಯಕ್ಷ ಮಹೇಶ್ ಸವಣೂರು, ವಿವಿಧ ತಾಲೂಕು ಘಟಕಗಳ ಅಧ್ಯಕ್ಷರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಡಾ.ಎಲ್.ಎಚ್. ಮಂಜುನಾಥ್ ಮತ್ತು ನಳಿನಿ ದಂಪತಿಯನ್ನು ಶಾಲು ಹೊದಿಸಿ, ಪೇಟ ತೊಡಿಸಿ, ಫಲಪುಷ್ಪ, ನೆನಪಿನ ಕಾಣಿಕೆ, ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು. ಪುತ್ತೂರಿನ ವಿವಿಧ ಸಂಸ್ಥೆಗಳ ಪರವಾಗಿ ಅಭಿನಂದನೆ ಸಲ್ಲಿಸಲಾಯಿತು. ಉಡುಪಿ ಜಿಲ್ಲಾ ಪ್ರಾದೇಶಿಕ ಕಚೇರಿಯ ಯೋಜನಾಧಿಕಾರಿ ಗಣೇಶ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.