ರಾಜ್ಯ ಸಚಿವ ಸಂಪುಟ ವಿಸ್ತರಣೆ ಕೊನೆಯ ಕ್ಷಣದಲ್ಲಿ ಭಾರಿ ರೋಚಕ ತಿರುವು ಪಡೆದಿದ್ದು, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಭಟ್ಕಳ ಶಾಸಕ ಮಂಕಾಳ ವೈದ್ಯ ಅವರಿಗೆ ತೀವ್ರ ನಿರಾಸೆಯಾಗಿದೆ.

ಕಾರವಾರ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಕೊನೆಯ ಕ್ಷಣದಲ್ಲಿ ಭಾರಿ ರೋಚಕ ತಿರುವು ಪಡೆದಿದ್ದು, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಭಟ್ಕಳ ಶಾಸಕ ಮಂಕಾಳ ವೈದ್ಯ ಅವರಿಗೆ ತೀವ್ರ ನಿರಾಸೆಯಾಗಿದೆ.

ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಅಂತಿಮ ಪಟ್ಟಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಸ್ಥಾನ ನೀಡಲಾಗಿದೆ. ಈ ಬೆಳವಣಿಗೆಯಿಂದಾಗಿ ಇಡೀ ಉತ್ತರ ಕನ್ನಡ ಜಿಲ್ಲೆಗೆ ಈ ಹಂತದ ಸಂಪುಟ ವಿಸ್ತರಣೆಯಲ್ಲಿ ಯಾವುದೇ ಸಚಿವ ಪ್ರಾತಿನಿಧ್ಯ ದೊರೆಯದಂತಾಗಿದ್ದು, ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.

ಸೋಮವಾರ ಬೆಳಗ್ಗೆ ಹೈಕಮಾಂಡ್ ಬಿಡುಗಡೆ ಮಾಡಿದ್ದ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಮಂಕಾಳು ವೈದ್ಯ ಅವರ ಹೆಸರು ಖಚಿತವಾಗಿತ್ತು. ಆದರೆ, ಪ್ರಮಾಣವಚನ ಸಮಾರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗ ದಿಢೀರ್ ಬದಲಾವಣೆ ನಡೆದಿದೆ. ತಮ್ಮ ಹೆಸರು ಪಟ್ಟಿಯಿಂದ ಕೈಬಿಡುತ್ತಿರುವ ಸುಳಿವು ಸಿಗುತ್ತಿದ್ದಂತೆಯೇ ನೇರವಾಗಿ ಮುಖ್ಯಮಂತ್ರಿಗಳ ನಿವಾಸಕ್ಕೆ ದೌಡಾಯಿಸಿ ವರಿಷ್ಠರನ್ನು ಭೇಟಿ ಮಾಡಿದರು. ಹಿರಿಯ ನಾಯಕ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಮಂಕಾಳ ವೈದ್ಯ ಅವರಿಗೆ ಕೊಕ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಈ ಬಿಕ್ಕಟ್ಟು ತಾರಕಕ್ಕೇರಿದಾಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಕಾಳ ವೈದ್ಯ ಅವರಿಗೆ ದೂರವಾಣಿ ಕರೆ ಮಾಡಿ ಸಮಾಧಾನಪಡಿಸಲು ಯತ್ನಿಸಿದರು ಎನ್ನಲಾಗಿದೆ. ಸದ್ಯದ ರಾಜಕೀಯ ಸಮೀಕರಣಗಳ ಕಾರಣದಿಂದ ಈ ಬದಲಾವಣೆ ಅನಿವಾರ್ಯವಾಗಿದೆ, ಸಂಜೆವರೆಗೂ ಕಾದು ನೋಡಿ ಎಂದು ಸೂಚನೆ ನೀಡಿದ್ದರು. ಆದರೆ, ಅಂತಿಮವಾಗಿ ಪ್ರಮಾಣವಚನ ಸ್ವೀಕರಿಸುವವರ ಪಟ್ಟಿಯಲ್ಲಿ ಮಲ್ಲಿಕಾರ್ಜುನ ಹೆಸರು ಮಾತ್ರ ಉಳಿದುಕೊಂಡಿದೆ. ಕಾಂಗ್ರೆಸ್ ಹೈಕಮಾಂಡ್ ಈ ಗೊಂದಲಕ್ಕೆ ''''''''ಆಡಳಿತಾತ್ಮಕ ದೋಷ'''''''' ಎಂಬ ನೆಪ ನೀಡಿದೆಯಾದರೂ, ಜಿಲ್ಲೆಯ ಶಾಸಕರಾದ ಆರ್.ವಿ. ದೇಶಪಾಂಡೆ ಹಾಗೂ ಸತೀಶ್ ಸೈಲ್ ಅವರ ಬೆಂಬಲಿಗರಲ್ಲೂ ಈ ನಡೆ ಅಸಮಾಧಾನ ಮೂಡಿಸಿದೆ.

ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ವರು ಕಾಂಗ್ರೆಸ್ ಶಾಸಕರು ಗೆಲುವು ಸಾಧಿಸಿದ್ದು, ಈ ಪೈಕಿ ಹಿರಿಯ ಮುಖಂಡ ಹಳಿಯಾಳ ಶಾಸಕ ಆರ್.ವಿ. ದೇಶಪಾಂಡೆ, ಭಟ್ಕಳ ಶಾಸಕ ಮಂಕಾಳ ವೈದ್ಯ ಹಾಗೂ ಕಾರವಾರ ಶಾಸಕ ಸತೀಶ್ ಸೈಲ್ ಸಚಿವ ಸ್ಥಾನಕ್ಕಾಗಿ ತೀವ್ರ ಪ್ರಯತ್ನ ನಡೆಸಿದ್ದರು. ಮೂವರ ಪೈಕಿ ಆರ್.ವಿ. ದೇಶಪಾಂಡೆ ಹಾಗೂ ಮಂಕಾಳ ವೈದ್ಯ ನಡುವೆ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಸಹ ನಡೆದಿದ್ದು, ಈರ್ವರ ಪೈಕಿ ಓರ್ವರಿಗೆ ಸಚಿವ ಸ್ಥಾನ ಸಿಗುವುದು ಖಚಿತ ಎನ್ನಲಾಗಿತ್ತು. ಆದರೆ ಇದೀಗ ಅಂತಿಮವಾಗಿ ಹೊರಬಿದ್ದಿರುವ ಪಟ್ಟಿಯಲ್ಲಿ ಜಿಲ್ಲೆಗೆ ಸಚಿವ ಸ್ಥಾನವನ್ನೇ ನೀಡದಿರುವುದು, ಜಿಲ್ಲೆಯನ್ನ ನಿರ್ಲಕ್ಷಿಸಲಾಗಿದೆ ಎನ್ನುವ ಆರೋಪಗಳು ಬೆಂಬಲಿಗರಿಂದ ವ್ಯಕ್ತವಾಗಿದೆ. ಮೀನುಗಾರ ಸಮುದಾಯದಿಂದ ತೀವ್ರ ಆಕ್ರೋಶ: ಮಂಕಾಳು ವೈದ್ಯ ಅವರನ್ನು ಸಂಪುಟದಿಂದ ಕಡೆಗಣಿಸಿರುವ ಕ್ರಮ ಖಂಡಿಸಿ ಕರಾವಳಿಯ ಮೀನುಗಾರ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಸಮರ ಸಾರಿವೆ. ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಮೂಲಕ ಆಕ್ರೋಶ ಹೊರಹಾಕಿರುವ ಮೊಗವೀರ ಸಮುದಾಯದ ಯುವಕರು, #INJUSTICE FOR FISHERIES COMMUNITY ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡುತ್ತಿದ್ದಾರೆ. "ಕರಾವಳಿ ಜಿಲ್ಲೆ ಹಾಗೂ ಮೀನುಗಾರ ಸಮುದಾಯಕ್ಕೆ ಕಾಂಗ್ರೆಸ್ ಸರ್ಕಾರ ಘೋರ ಅನ್ಯಾಯ ಮಾಡಿದೆ " ಎಂದು ಕಿಡಿಕಾರುತ್ತಿರುವ ಹೋರಾಟಗಾರರು, ಉತ್ತರ ಕನ್ನಡಕ್ಕೆ ಸೂಕ್ತ ಪ್ರಾದೇಶಿಕ ಪ್ರಾತಿನಿಧ್ಯ ನೀಡದಿದ್ದರೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸುವುದಾಗಿ ಎಚ್ಚರಿಸಿದ್ದಾರೆ.