ಡಿವಿಜಿಯವರ ಸ್ಮರಣೆ ಒಂದು ದಿನಕ್ಕೆ ಸೀಮಿತವಲ್ಲ, ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಪ್ರಾಮಾಣಿಕತೆ, ಬದ್ಧತೆ, ಶಿಸ್ತಿನ ಜೀವನ ಇಂದಿನ ಯುವಜನತೆಗೆ ಆದರ್ಶ .

ಕರುನಾಡ ಕನ್ನಡ ಸಂಘದಿಂದ ಡಿ.ವಿ.ಜಿಯವರ ೧೩೯ನೇ ಜಯಂತಿ ಆಚರಣೆಕನ್ನಡಪ್ರಭ ವಾರ್ತೆ ಕೋಲಾರ

ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಆಧುನಿಕ ಭಗವದ್ಗೀತೆಯಾಗಿದ್ದು, ಅದು ಸಮಾಜದಲ್ಲಿನ ಅಶಾಂತಿ, ಅತಿಯಾಸೆ ಹೋಗಲಾಡಿಸಿ ನೆಮ್ಮದಿ ಬದುಕು ನೀಡುವ ದಾರಿದೀಪವಾಗಿದೆ. ಮಕ್ಕಳು ಅವರ ಆದರ್ಶ ಪಾಲಿಸಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಬಿ.ಎಂ. ರಾಧಮ್ಮ ಕರೆ ನೀಡಿದರು.

ಕರುನಾಡ ಕನ್ನಡ ಸಂಘ, ತನೀಷ್ಕ್ ಮೋಟಾರ್ಸ್ ಮುಳಬಾಗಿಲು ಅವರ ಸಹಯೋಗದಲ್ಲಿ ತಾಲೂಕಿನ ಚದುಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಹಮ್ಮಿಕೊಂಡಿದ್ದ ಡಿ.ವಿ.ಗುಂಡಪ್ಪ ಅವರ ೧೩೯ನೇ ಜನ್ಮದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಸಾಧಕ ಮಕ್ಕಳನ್ನು ಪುರಸ್ಕರಿಸಿ, ಪರೀಕ್ಷಾ ಸಲಕರಣೆ ವಿತರಣೆ, ಶಾಲೆಗಳಿಗೆ ಜ್ಞಾನಪೀಠ ಸಾಹಿತಿಗಳ ಪೋಟೋಗಳನ್ನು ಕೊಡುಗೆಯಾಗಿ ವಿತರಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿರುವ ಡಿವಿಜಿಯವರು ಅತ್ಯಂತ ಶ್ರೇಷ್ಠ ಕವಿ, ಸಾಹಿತಿ, ಪತ್ರಕರ್ತರಾಗಿದ್ದರು. ಅವರ ಮಂಕುತಿಮ್ಮನ ಕಗ್ಗ ಕೃತಿ ಜೀವನದ ತತ್ವಜ್ಞಾನವನ್ನು ಸರಳ ಪದ್ಯಗಳಲ್ಲಿ ಹೇಳುವ ಇವರ ಮೇರು ಕೃತಿ ಎಂದರು.

ಅಂತಃಪುರ ಗೀತೆಗಳು: ಪ್ರೇಮ ಮತ್ತು ಪ್ರಕೃತಿಯನ್ನು ವರ್ಣಿಸುವ ಗೀತ ಸಂಕಲನ, ‘ಮರುಳ ಮುನಿಯನ ಕಗ್ಗ’, ‘ಜೀವನಧರ್ಮ ಯೋಗ, ‘ಜ್ಞಾಪಕ ಚಿತ್ರಶಾಲೆ’, ‘ಮಹನೀಯರು’ ಮುಂತಾದುವು ಡಿವಿಜಿಯವರ ಇತರ ಕೃತಿಗಳು ಎಂದು ತಿಳಿಸಿ ಇವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ಲಭಿಸಿದೆ ಎಂದು ಹೇಳಿದರು.

ಕರುನಾಡ ಕನ್ನಡ ಸಂಘದ ಅಧ್ಯಕ್ಷ ಇ.ಶ್ರೀನಿವಾಸಗೌಡ ಕಾರ್ಯಕ್ರಮ ಉದ್ಘಾಟಿಸಿ, ಡಿ.ವಿ.ಗುಂಡಪ್ಪ ಅವರು ಕೋಲಾರ ಜಿಲ್ಲೆಯವರು ಎಂದು ಹೇಳಲು ಹೆಮ್ಮೆಯಾಗುತ್ತದೆ. ಅವರು ಆಧುನಿಕ ಕನ್ನಡ ಸಾಹಿತ್ಯದ ಶ್ರೇಷ್ಠ ಕವಿ, ತತ್ವಜ್ಞಾನಿ ಮತ್ತು ಪತ್ರಕರ್ತರು. ’ಮಂಕುತಿಮ್ಮನ ಕಗ್ಗ’ದ ಮೂಲಕ ’ಕನ್ನಡದ ಆಧುನಿಕ ಸರ್ವಜ್ಞ’ ಎಂದೇ ಜನಪ್ರಿಯರಾದ ಇವರು, ಜೀವನಧರ್ಮ ಯೋಗ, ಅಂತರಂಗದ ಗೀತೆಗಳಂತಹ ಕೃತಿಗಳನ್ನು ರಚಿಸಿದ್ದಾರೆ. ಕಾವ್ಯ, ಜೀವನಚರಿತ್ರೆ ಮತ್ತು ಪತ್ರಿಕೋದ್ಯಮದಲ್ಲಿ ಅಪಾರ ಸೇವೆ ಸಲ್ಲಿಸಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದಾರೆ ಎಂದು ತಿಳಿಸಿದರು.

ಕರುನಾಡ ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ವಿ.ಜಗನ್ನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ, ಡಿವಿಜಿಯವರ ಸ್ಮರಣೆ ಒಂದು ದಿನಕ್ಕೆ ಸೀಮಿತವಲ್ಲ, ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಪ್ರಾಮಾಣಿಕತೆ, ಬದ್ಧತೆ, ಶಿಸ್ತಿನ ಜೀವನ ಇಂದಿನ ಯುವಜನತೆಗೆ ಆದರ್ಶ ಎಂದು ತಿಳಿಸಿದರು.

ನಿವೃತ್ತರಾದ ನವೀನ ಮಾತನಾಡಿದರು. ಮುಖ್ಯಶಿಕ್ಷಕ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮದಲ್ಲಿ ಶಿಕ್ಷಣ ಸಂಯೋಜಕ ನಾಗರಾಜ್, ಪ್ರೌಢಶಾಲಾ ಶಿಕ್ಷಕ ವೆಂಕಟಾಚಲಪತಿ, ಕರುನಾಡ ಕನ್ನಡ ಸಂಘದ ಖಜಾಂಚಿ ಎಂ.ಶ್ರೀರಾಮ್, ಸಹಕಾರ್ಯದರ್ಶಿ ಸಿದ್ದಲಿಂಗಯ್ಯ, ಶಿಕ್ಷಕರಾದ ಗೌರಮ್ಮ, ಜೆ.ಡಿ.ಲಕ್ಷ್ಮಿ,ಮಲ್ಲಿಕಾ ಮತ್ತಿತರರಿದ್ದರು.