ಮನಮೋಹನ್‌ ಸಿಂಗ್‌ ರಾಜಕಾರಣಿಗಿಂತ ಒಳ್ಳೆ ಆರ್ಥಿಕ ಚಿಂತಕ: ರಾಜ್ಯಸಭೆ ಮಾಜಿ ಸದಸ್ಯ ಹನುಮಂತಪ್ಪ

| Published : Dec 29 2024, 01:15 AM IST

ಮನಮೋಹನ್‌ ಸಿಂಗ್‌ ರಾಜಕಾರಣಿಗಿಂತ ಒಳ್ಳೆ ಆರ್ಥಿಕ ಚಿಂತಕ: ರಾಜ್ಯಸಭೆ ಮಾಜಿ ಸದಸ್ಯ ಹನುಮಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಡಾ.ಮನಮೋಹನ್‍ ಸಿಂಗ್ ಅತ್ಯುತ್ತಮ ಆರ್ಥಿಕ ತಜ್ಞರಾಗಿದ್ದರು, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಶ್ರಮಿಸಿದ್ದರೆಂದು ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಬಣ್ಣಿಸಿದರು. ಚಿತ್ರದುರ್ಗದಲ್ಲಿ ಡಾ.ಮನಮೋಹನ್‍ ಸಿಂಗ್ ಶ್ರದ್ದಾಂಜಲಿ ಹಾಗೂ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.

ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ, ಗೌರವ ಸಲ್ಲಿಕೆ । ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹತ್ತು ವರ್ಷಗಳ ಕಾಲ ದೇಶದ ಪ್ರಧಾನಿಯಾಗಿದ್ದ ಡಾ.ಮನಮೋಹನ್‍ ಸಿಂಗ್ ಅತ್ಯುತ್ತಮ ಆರ್ಥಿಕ ತಜ್ಞರಾಗಿದ್ದರು, ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಶ್ರಮಿಸಿದ್ದರೆಂದು ರಾಜ್ಯಸಭೆ ಮಾಜಿ ಸದಸ್ಯ ಎಚ್.ಹನುಮಂತಪ್ಪ ಬಣ್ಣಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಮಾಜಿ ಪ್ರಧಾನಿ ಡಾ.ಮನಮೋಹನ್‍ ಸಿಂಗ್ ಶ್ರದ್ದಾಂಜಲಿ ಹಾಗೂ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ವಿಶ್ವ ಬ್ಯಾಂಕ್ ಸಂಪರ್ಕವಿಟ್ಟುಕೊಂಡಿದ್ದ ಡಾ.ಮನಮೋಹನ್‍ ಸಿಂಗ್‍ಗೆ ಯಾರ ಮೇಲೂ ಸಿಟ್ಟು, ದ್ವೇಷವಿರಲಿಲ್ಲ. ಒಮ್ಮೆ ಅವರನ್ನು ಚಿತ್ರದುರ್ಗಕ್ಕೂ ಕರೆಸಿದ್ದೆ. ಭಾರತದ ಹಣಕಾಸು ಪರಿಸ್ಥಿತಿ ಸುಧಾರಿಸಿ ಅನೇಕ ಯೋಜನೆಗಳನ್ನು ನೀಡಿದ ಸಿಂಗ್ ರಾಜಕಾರಣಿ ಎನ್ನುವುದಕ್ಕಿಂತ ಒಳ್ಳೆ ಆರ್ಥಿಕ ಚಿಂತಕ, ಸಜ್ಜನ. ದೇಶದ ಅಭಿವೃದ್ಧಿ ಬಗ್ಗೆ ದೂರದೃಷ್ಟಿಯಿಟ್ಟುಕೊಂಡಿದ್ದರು ಎಂದು ಹೇಳಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಬಲಿಷ್ಠ ರಾಷ್ಟ್ರ ಅಮೆರಿಕಾ ಆರ್ಥಿಕವಾಗಿ ದಿವಾಳಿಯಾಗಿದ್ದಾಗ ಡಾ.ಸಿಂಗ್‌ ಅವರ ಸಲಹೆ ಪಡೆದು ಚೇತರಿಸಿಕೊಂಡಿತ್ತು. ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ಭಾರತ ದೇಶವನ್ನು ಆಳಿದ ಸಿಂಗ್‍ರನ್ನು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾದಾಗಿನಿಂದಲೂ ನೋಡಿದ್ದೇನೆ. ಸರಳ, ಸಂಪನ್ನ ರಾಜಕಾರಣಿಯಾಗಿದ್ದ ಅವರನ್ನು ಬಹಳ ಜನ ಮೌನಿ ಎಂದು ಕರೆಯುತ್ತಿದ್ದರು. ಅವರೊಬ್ಬ ಜ್ಞಾನಿ ಎಂದು ಹೇಳಿದರು.

ಡಾ.ಮನಮೋಹನ್‍ಸಿಂಗ್‍ರವರ ಆರ್ಥಿಕತೆಯನ್ನು ವಿಶ್ವವೇ ಒಪ್ಪಿಕೊಂಡಿತ್ತು. ಸೋನಿಯಾ ಗಾಂಧಿಗೆಯವರಿಗೆ ಪ್ರಧಾನಿಯಾಗುವ ಅವಕಾಶ ಸಿಕ್ಕಿದ್ದನ್ನು ತ್ಯಜಿಸಿ ಮನಮೋಹನ್‍ ಸಿಂಗ್‍ರನ್ನು ಪ್ರಧಾನಿಯನ್ನಾಗಿ ಮಾಡಿದರು. ಉದ್ಯೋಗ ಖಾತ್ರಿ ಯೋಜನೆ ಸೇರಿದಂತೆ ಅನೇಕ ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರಿಂದ ಬಡವರು ಕೆಲಸ ಹುಡುಕಿಕೊಂಡು ಗುಳೆ ಹೋಗುವುದು ತಪ್ಪಿದಂತಾಯಿತು ಎಂದರು.

ಬಡ ಮಕ್ಕಳಿಗೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಅವಕಾಶ ಸಿಗಬೇಕೆನ್ನುವ ಆಸೆಯಿಂದ ಮಾಹಿತಿ ಹಕ್ಕು ಶಿಕ್ಷಣ ಜಾರಿಗೆ ತಂದ ಡಾ.ಮನಮೋಹನ್‍ಸಿಂಗ್ ಜಾತ್ಯಾತೀತ, ಧರ್ಮಾತೀತ, ಅಪ್ರತಿಮೆ ರಾಜಕಾರಣಿಯಾಗಿದ್ದರು. ಪ್ರಧಾನಿಯಾಗಿದ್ದಾಗ ಪಕ್ಷಾತೀತವಿಲ್ಲದೆ ಎಲ್ಲರನ್ನು ಸಮಾನವಾಗಿ ಕಾಣುವಂತ ದೊಡ್ಡ ಗುಣ ಅವರದಾಗಿತ್ತು. ಆರ್ಥಿಕ ಸುಧಾರಣೆಗಾಗಿಯೇ ಬದುಕಿದ ಸಿಂಗ್‍ರವರ ನಿಧನದಿಂದ ವಿಶ್ವಕ್ಕೆ ನಷ್ಟವುಂಟಾಗಿದೆ ಎಂದರು.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಜೆ.ಜೆ.ಹಟ್ಟಿ ಡಾ.ಬಿ.ತಿಪ್ಪೇಸ್ವಾಮಿ ಮಾತನಾಡಿ, ಜಾಗತೀಕರಣವಾಗಿ ದೇಶವನ್ನು ಆರ್ಥಿಕವಾಗಿ ಬಲಿಷ್ಟಗೊಳಿಸಿದ ಡಾ.ಮನಮೋಹನ್‍ಸಿಂಗ್ ಬಡವರಿಗಾಗಿ ಉದ್ಯೋಗಖಾತ್ರಿ ಯೋಜನೆಯನ್ನು ಕೊಟ್ಟರು ಎಂದರು.

ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ಇಂಗ್ಲೆಂಡ್‍ನಲ್ಲಿ ಶಿಕ್ಷಣ ಪಡೆದ ಡಾ.ಮನಮೋಹನ್‍ಸಿಂಗ್ ಪ್ರಧಾನಿ ನರಸಿಂಹರಾವ್‍ರವರ ಸಂಪುಟದಲ್ಲಿ ಆರ್ಥಿಕ ಮಂತ್ರಿಯಾಗಿದ್ದರು. ದೇಶದ ಪ್ರಧಾನಿಯಾಗುತ್ತಾರೆಂದು ಯಾರೂ ಅಂದುಕೊಂಡಿರಲಿಲ್ಲ. ಸೋನಿಯಾ ಗಾಂಧಿರವರಲ್ಲಿದ್ದ ದೂರದೃಷ್ಟಿಯಿಂದಾಗಿ ಸಿಂಗ್ ದೇಶದ ಪ್ರಧಾನಿಯಾದರು. ಶಿಕ್ಷಣ ತಜ್ಞರಾಗಿದ್ದ ಅವರು ದೇಶಕ್ಕೆ ಆರ್ಥಿಕ ಭದ್ರತೆಯನ್ನು ಕೊಟ್ಟರು. ನರೇಗಾ ಯೋಜನೆಯಿಂದ ಬಡವರು ಗುಳೆ ಹೋಗುವುದು ತಪ್ಪಿದೆ ಎನ್ನುವುದಾದರೆ ಅದಕ್ಕೆ ಸಿಂಗ್‍ರವರ ಕೊಡುಗೆ ಕಾರಣ ಎಂದು ಗುಣಗಾನ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಧ್ಯಕ್ಷ ಕೆ.ಎಂ.ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಉಪಾಧ್ಯಕ್ಷರುಗಳಾದ ನಜ್ಮತಾಜ್, ಕುಮಾರ್ ಗೌಡ, ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಸಿ.ನಿರಂಜನಮೂರ್ತಿ, ಲಿಡ್ಕರ್ ಮಾಜಿ ಚೇರ್ಮನ್ ಓ.ಶಂಕರ್, ಜಿಲ್ಲಾ ಯುವ ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ನ್ಯಾಯವಾದಿ ಎನ್.ಶಶಾಂಕ್, ವಕೀಲರುಗಳಾದ ಜಗದೀಶ್ ಗುಂಡೇರಿ,ರವೀಂದ್ರ, ಜಿಲ್ಲಾ ಕಾಂಗ್ರೆಸ್ ಪರಿಶಿಷ್ಠ ಜಾತಿ ವಿಭಾಗದ ಅಧ್ಯಕ್ಷ ಎಸ್.ಜಯಣ್ಣ, ಎ.ಸಾಧಿಕ್‍ವುಲ್ಲಾ, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಸೈಯದ್ ಮೊಹಿದ್ದೀನ್, ಗ್ಯಾರಂಟಿ ಅನುಷ್ಠಾನಗಳ ಸಮಿತಿ ಜಿಲ್ಲಾಧ್ಯಕ್ಷ ಆರ್.ಶಿವಣ್ಣ, ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ಸೇವಾದಳದ ಜಿಲ್ಲಾಧ್ಯಕ್ಷ ಭೂತೇಶ್, ಮಹಿಳಾ ಘಟಕದ ಅಧ್ಯಕ್ಷೆ ನೇತ್ರಾವತಿ, ಮುದಸಿರ್‍ನವಾಜ್. ಇಂದಿರಾ, ಬಸಮ್ಮ, ಎಸ್ಸಿ. ವಿಭಾಗದ ಉಪಾಧ್ಯಕ್ಷ ಡಿ.ಕುಮಾರ್ ಪಿಳ್ಳೆಕೆರನಹಳ್ಳಿ, ಚಾಂದ್‍ಪೀರ್, ಅಕ್ಬರ್ ಇದ್ದರು.