ಸಾರಾಂಶ
ಸಚಿವ ದರ್ಶನಾಪುರ ಕಚೇರಿಯಲ್ಲಿ ನಡೆದ ಡಾ. ಸಿಂಗ್ ಶ್ರದ್ಧಾಂಜಲಿ ಸಭೆಯಲ್ಲಿ ಮುನಿಯಪ್ಪ ಅಭಿಮತ
ಕನ್ನಡಪ್ರಭ ವಾರ್ತೆ ಶಹಾಪುರಡಾ. ಮನಮೋಹನ್ ಸಿಂಗ್ ನಮ್ಮನ್ನು ಬಿಟ್ಟು ಹೋಗಿರಬಹುದು. ಆದರೆ, ಅವರು ತಮ್ಮ ಕಾರ್ಯಕ್ರಮಗಳ ಮೂಲಕ ನಮ್ಮ ನಡುವೆ ಜೀವಂತವಾಗಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಸಾಮಾಜಿಕ ನ್ಯಾಯದ ತತ್ವದ ಅಡಿಯಲ್ಲಿ ಕೆಲಸ ಮಾಡಿ ದೇಶದ ಜನರ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ನಾವೆಲ್ಲರೂ ಅವರ ಆದರ್ಶ ಉಳಿಸುವ ಕೆಲಸ ಮಾಡಬೇಕು ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರವರ ಕಚೇರಿ ಸಹಾಯಕ ಮುನಿಯಪ್ಪ ತಿಳಿಸಿದರು.ನಗರದ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ಗೌಡ ದರ್ಶನಾಪುರ ಅವರ ಕಚೇರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.ಡಾ. ಮನಮೋಹನ್ ಸಿಂಗ್ ಜನಸಾಮಾನ್ಯನಿಗೆ ಆಹಾರದ ಹಕ್ಕನ್ನು ಸಂವಿಧಾನಾತ್ಮಕವಾಗಿ ನೀಡಿದವರು. ಆರ್ಥಿಕವಾಗಿ ಸ್ವಾವಲಂಬನೆ ಮಾಡುವಲ್ಲಿ ಪ್ರಯತ್ನ ಪಟ್ಟಿದ್ದಾರೆ. ಇನ್ನು ನರೇಗಾ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಯ ಪರ್ವ ಆರಂಭಿಸಿ ಗ್ರಾಮಾಭಿವೃದ್ಧಿ ಮಾಡುವಲ್ಲಿ ಮಹತ್ತರ ಹೆಜ್ಜೆ ಇಟ್ಟಿದ್ದಾರೆ. ಮನಮೋಹನ್ ಸಿಂಗ್ ಅವರು ಆರ್ಥಿಕ ಸಚಿವರಾಗಿ ದೇಶದ ಆರ್ಥಿಕತೆಗೆ ಚೇತರಿಕೆ ನೀಡಿದ್ದರು ಎಂದರು.ದೇಶದ ಬಡವರು, ನೀರುದ್ಯೋಗಿಗಳ ಪರವಾಗಿ ಅವರು ಕೆಲಸ ಮಾಡಿದ್ದಾರೆ. ಸರಳ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದ ಮನಮೋಹನ ಸಿಂಗ್ ಅವರ ಅಗಲಿಕೆಯಿಂದ ಇಡೀ ದೇಶಕ್ಕೆ ನಷ್ಟವಾಗಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ. ಅವರ ಬದುಕು ಹಾಗೂ ಅವರು ಮಾಡಿದ ಕೆಲಸಗಳು ನಮಗೆ ಸದಾ ಪ್ರೇರಣೆಯಾಗಲಿವೆ ಎಂದರು.ಹಣಮಂತರಾಯಗೌಡ ರಾಕಂಗೇರಾ, ಶಾಂತು ಪಾಟೀಲ್, ಸೈಯದ್ ಮುಸ್ತಾದ್ ದರ್ಭಾನ, ಮಲ್ಲಣಗೌಡ ತಿಪ್ಪನಟಗಿ, ಶಾಂತಗೌಡ ಪಾಟೀಲ್, ನಾಗನಟಗಿ, ನಗರಸಭೆ ಸದಸ್ಯರಾದ ಬಸವರಾಜ ಚೆನ್ನೂರ, ಶಾಂತಪ್ಪ ಕಟ್ಟಿಮನಿ ಸೇರಿದಂತೆ ಆನೇಕ ಯುವಕರು ಹಾಗೂ ಕಾರ್ಯಕರ್ತರು ಹಾಜರಿದ್ದರು.