ಸಾರಾಂಶ
ಹಾವೇರಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ನಿಧನಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಕಂಬನಿ ಮಿಡಿದಿದ್ದಾರೆ.ವಿತ್ತ ಸಚಿವರಾಗಿ, ಪ್ರಧಾನಿಯಾಗಿ ಡಾ. ಮನಮೋಹನ್ ಸಿಂಗ್ ಅವರು ದೇಶಕ್ಕೆ ನೀಡಿರುವ ಕೊಡುಗೆ ಗಮನಾರ್ಹವಾದುದು. ಭಾರತ ಇಂದು ಆರ್ಥಿಕವಾಗಿ ಸದೃಢ ಸ್ಥಿತಿಯಲ್ಲಿದ್ದರೆ ಅದರಲ್ಲಿ ಮನಮೋಹನ ಸಿಂಗ್ ಅವರ ಕೊಡುಗೆಯೂ ಇದೆ ಎಂದಿದ್ದಾರೆ.ಅದೇ ರೀತಿ ಉದ್ಯೋಗ ಖಾತ್ರಿ ಯೋಜನೆ ಮೂಲಕ ದುಡಿಯುವ ಕೈಗಳಿಗೆ ಕೆಲಸ ಕೊಟ್ಟ ಕೀರ್ತಿ ಕೂಡ ಅವರಿಗೆ ಸಲ್ಲುತ್ತದೆ. ಆಕಸ್ಮಿಕವಾಗಿ ಪ್ರಧಾನಿ ಹುದ್ದೆಗೇರಿದ ಅವರು, ಎರಡು ಅವಧಿಯಲ್ಲಿ ದೇಶದ ಇತಿಹಾಸದ ದಾಖಲೆಗೆ ಸೇರ್ಪಡೆಯಾಗುವಂತಹ ಆಡಳಿತ ನೀಡಿದರು. ಅವರ ಅವಧಿಯ ಜಿಡಿಪಿ ದೇಶದ ಆರ್ಥಿಕ ಸ್ಥಿತಿ ಹೇಗಿತ್ತು ಎಂಬುದನ್ನು ಹೇಳುತ್ತದೆ. ಪ್ರತಿಶತ ನೂರರಷ್ಟು ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿದ್ದು ಕೂಡ ಭಾರತದ ಪ್ರಗತಿಯಲ್ಲಿ ಗಮನಾರ್ಹವಾದುದು ಎಂದು ಎಂದು ಸಚಿವರು ಸ್ಮರಿಸಿದ್ದಾರೆ.ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದರೆ ಅದಕ್ಕೆ ಡಾ. ಮನಮೋಹನ್ ಸಿಂಗ್ ಅವರ ಆರ್ಥಿಕ ನೀತಿಗಳೇ ಕಾರಣ. ತೆರಿಗೆ ವ್ಯವಸ್ಥೆ ಸರಳೀಕರಣ, ಕಾನೂನು ಸಡಿಲಿಕೆ ಮೂಲಕ ಉದ್ಯಮಸ್ನೇಹಿ ವಾತಾವರಣ ನಿರ್ಮಿಸಿದರು. ಜಾಗತೀಕರಣ ಮತ್ತು ಆರ್ಥಿಕ ಉದಾರೀಕರಣ ನೀತಿಗಳ ಮೂಲಕ ಗಣನೀಯ ಬದಲಾವಣೆಗೆ ಕಾರಣರಾದರು ಎಂದು ಬಣ್ಣಿಸಿದ್ದಾರೆ.
ಹತ್ತು ವರ್ಷಗಳ ಕಾಲ ದೇಶವನ್ನು ಮುನ್ನಡೆಸಿದ್ದ ಮನಮೋಹನ್ ಸಿಂಗ್ ಈ ಅವಧಿಯಲ್ಲಿ ಕೈಗೊಂಡ ಕ್ರಮಗಳು, ಜಾರಿಗೆ ತಂದ ನೀತಿಗಳು ಎಷ್ಟು ಮಹತ್ವದ್ದಾಗಿದ್ದವು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಸಾರ್ವಜನಿಕ ಉದ್ಯಮಗಳ ಖಾಸಗೀಕರಣ, ಉದಾರೀಕರಣದಂತಹ ಕಾರ್ಯಕ್ರಮಗಳು ದೇಶದ ಆರ್ಥಿಕ ಸ್ಥಿತಿ ಚೇತರಿಕೆಗೆ ಕಾರಣವಾದವು. ಆರ್ಥಿಕ ಸ್ಥಿತಿ ಸುಧಾರಣೆಗೆ ಈ ನೀತಿಗಳೇ ಮೆಟ್ಟಿಲುಗಳಾದವು ಎಂದು ಶ್ಲಾಘಿಸಿದರು.