ಮನ್‌ಮುಲ್ ಚುನಾವಣೆ: ಇಂದಿನಿಂದ ನಾಮಪತ್ರ ಸಲ್ಲಿಕೆ

| Published : Jan 18 2025, 12:45 AM IST

ಸಾರಾಂಶ

ಮಂಡ್ಯ ತಾಲೂಕಿನಲ್ಲಿ ೩ ಸ್ಥಾನಗಳು, ಮದ್ದೂರು-೨, ಮಳವಳ್ಳಿ-೧, ಪಾಂಡವಪುರ-೧, ಶ್ರೀರಂಗಪಟ್ಟಣ-೧, ಕೆ.ಆರ್.ಪೇಟೆ-೨, ನಾಗಮಂಗಲ-೨ ಸೇರಿ ಒಟ್ಟು ೧೨ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ೧೨ ಸ್ಥಾನಗಳಿಗೆ ಮುಂದಿನ ಐದು ವರ್ಷಗಳ ಅವಧಿಗೆ ಫೆ.೨ರಂದು ಚುನಾವಣೆ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಶನಿವಾರ (ಜ.೧೮)ದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ.

ಚುನಾವಣೆಗೆ ಸ್ಪರ್ಧಿಸಲು ಬಯಸುವ ಅಭ್ಯರ್ಥಿಗಳು ಬೆಳಗ್ಗೆ ೧೧ ಗಂಟೆಯಿಂದ ಮಧ್ಯಾಹ್ನ ೩ ಗಂಟೆಯವರೆಗೆ ಜಿಲ್ಲಾಧಿಕಾರಿ ಕಚೇರಿ ಕಾರ್ಯಾಲಯದಲ್ಲಿ ಉಮೇದುವಾರಿಕೆ ಸಲ್ಲಿಸಬಹುದು. ಜ.೨೫ರಂದು ನಾಮಪತ್ರ ಸಲ್ಲಿಸುವುದಕ್ಕೆ ಕೊನೆಯ ದಿನಾಂಕವಾಗಿರುತ್ತದೆ. ಜ.೨೬ರಂದು ಮಧ್ಯಾಹ್ನ ೧೨ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಕಾರ್ಯಾಲಯದಲ್ಲಿ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜ.೨೭ರಂದು ಮಧ್ಯಾಹ್ನ ೩ ಗಂಟೆಗೆ ನಾಮಪತ್ರ ಕ್ರಮಬದ್ಧವಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು. ಜ.೨೭ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿರುವವರು ನಾಮಪತ್ರ ಹಿಂಪಡೆಯುವುದಕ್ಕೆ ಕೊನೆಯ ದಿನವಾಗಿರುತ್ತದೆ. ಜ.೨೯ರಂದು ಚುನಾವಣೆಗೆ ಸ್ಪರ್ಧಿಸಲು ಸಿಂಧುತ್ವ ಹೊಂದಿರುವ ಉಮೇದುವಾರರ ಪಟ್ಟಿಯನ್ನು ಚಿಹ್ನೆ ಸಮೇತ ಪ್ರಕಟಿಸಲಾಗುತ್ತದೆ. ಫೆ.೨ರಂದು ನಗರದ ಸ್ವರ್ಣಸಂದ್ರದ ಬಳಿ ಇರುವ ಮೈಷುಗರ್ ಪ್ರೌಢಶಾಲೆ ಆವರಣದಲ್ಲಿ ಬೆಳಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ಮತದಾನ ನಡೆಯಲಿದೆ. ಮತದಾನ ಮುಕ್ತಾಯವಾದ ಬಳಿಕ ಮತ ಎಣಿಕೆ ನಡೆಸಿ ಅಂದೇ ಫಲಿತಾಂಶ ಪ್ರಕಟಿಸಲಾಗುವುದು.

ಮಂಡ್ಯ ತಾಲೂಕಿನಲ್ಲಿ ೩ ಸ್ಥಾನಗಳು, ಮದ್ದೂರು-೨, ಮಳವಳ್ಳಿ-೧, ಪಾಂಡವಪುರ-೧, ಶ್ರೀರಂಗಪಟ್ಟಣ-೧, ಕೆ.ಆರ್.ಪೇಟೆ-೨, ನಾಗಮಂಗಲ-೨ ಸೇರಿ ಒಟ್ಟು ೧೨ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಈ ಚುನಾವಣೆಯಲ್ಲಿ ಮಂಡ್ಯ ತಾಲೂಕಿನಿಂದ ೧೯೬, ಮದ್ದೂರು ೧೬೬, ಕೆ.ಆರ್.ಪೇಟೆ ೨೦೪, ನಾಗಮಂಗಲ ೨೩೧, ಮಳವಳ್ಳಿ ೧೦೦, ಪಾಂಡವಪುರ-೧೨೪, ಶ್ರೀರಂಗಪಟ್ಟಣ ೫೭ ಸೇರಿದಂತೆ ೧೦೭೮ ಮಂದಿ ಮತ ಚಲಾಯಿಸುವರು.

ಬಿಜೆಪಿ ಅಭ್ಯರ್ಥಿಯಾಗಿ ಎಸ್.ಪಿ.ಸ್ವಾಮಿ ಕಣಕ್ಕೆ:

ಮನ್‌ಮುಲ್ ಚುನಾವಣೆ ಯಾವುದೇ ಪಕ್ಷದ ಚಿಹ್ನೆಯಡಿ ನಡೆಯದಿರುವುದರಿಂದ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಪಿ.ಸ್ವಾಮಿ ಅವರು ಕಣಕ್ಕೆ ಇಳಿಯಲಿದ್ದಾರೆ. ಶನಿವಾರವೇ ಅವರು ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಸೇರಿದಂತೆ ಹಲವು ಪ್ರಮುಖರು ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಇತ್ತ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ರೂಪಾ ಕಣಕ್ಕಿಳಿಯುವುದು ನಿಶ್ಚಿತವಾಗಿದೆ.

ಹಿಂದಿನ ಆಡಳಿತ ಮಂಡಳಿ ಪೈಕಿ ಶೀಳನೆರೆ ಅಂಬರೀಶ್ ಹೊರತುಪಡಿಸಿದಂತೆ ಉಳಿದವರೆಲ್ಲರೂ ಮರು ಆಯ್ಕೆ ಬಯಸಿ ಕಣಕ್ಕಿಳಿದಿದ್ದಾರೆ. ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಎಚ್.ಟಿ.ಮಂಜು ಕೂಡ ಕಣದಲ್ಲಿರುವುದು ಮತ್ತೊಂದು ವಿಶೇಷವಾಗಿದೆ. ಈಗಾಗಲೇ ಮೂರ್ನಾಲ್ಕು ಬಾರಿ ಆಯ್ಕೆಯಾದವರೇ ಮತ್ತೆ ಮತ್ತೆ ಅಧಿಕಾರ ಬಯಸಿ ಕಣಕ್ಕಿಳಿಯುತ್ತಿರುವುದರಿಂದ ಮನ್‌ಮುಲ್‌ನಲ್ಲಿ ಹೊಸತನ ಕಾಣುವುದಕ್ಕೆ ಸಾಧ್ಯವಾಗದಂತಾಗಿದೆ. ಈಗ ನಡೆಯಲಿರುವ ಚುನಾವಣೆಯಲ್ಲೂ ಹಳೇ ಹುಲಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಅಖಾಡದಲ್ಲಿರುವುದರಿಂದ ಹಳೆಯ ಪರಿಸ್ಥಿತಿಯೇ ಮುಂದುವರೆಯಲಿದೆ.