ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ವೈಭವದ ತೆರೆ

| Published : Jan 18 2025, 12:45 AM IST

ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವಕ್ಕೆ ವೈಭವದ ತೆರೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-2025 ಮೂರು ದಿನಗಳ ಕಾರ್ಯಕ್ರಮಕ್ಕೆ ವೈಭವದ ತೆರೆ ಕಂಡಿತು.

ಅಪಾರ ಭಕ್ತ ಸಮೂಹಕ್ಕೆ ಸಾಕ್ಷಿಯಾದ ಜಾತ್ರೆ । ನಾನಾ ಧಾರ್ಮಿಕ, ಕ್ರೀಡಾ, ಸಾಧಕರಿಗೆ ಸನ್ಮಾನ, ಜಾಗೃತಿ ಜಾಥಾದೊಂದಿಗೆ ಜಾತ್ರೆಗೆ ತೆರೆ

ಕನ್ನಡಪ್ರಭ ವಾರ್ತೆ ಕೊಪ್ಪಳನಗರದ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ-2025 ಮೂರು ದಿನಗಳ ಕಾರ್ಯಕ್ರಮಕ್ಕೆ ವೈಭವದ ತೆರೆ ಕಂಡಿತು. ಆಧ್ಯಾತ್ಮ, ಸಾಂಸ್ಕೃತಿಕ, ಜಾಗೃತಿ ಜಾಥಾ, ಕ್ರೀಡಾ ಸಂಭ್ರಮದ ಜೊತೆಗೆ ಅರಿವಿನ ಪರಿಯ ಸವಿಯನ್ನು ಲಕ್ಷ ಲಕ್ಷ ಭಕ್ತರು ಸವಿದರು.

ಲಕ್ಷ ಲಕ್ಷ ಜಿಲೇಬಿ, ಲಕ್ಷ ಲಕ್ಷ ಮಿರ್ಚಿ ಸೇರಿದಂತೆ ಹಲವು ಭಕ್ಷ್ಯಭೋಜನವನ್ನು ಸವಿದ ಭಕ್ತರು ಅಬ್ಬಾ ಇದಪ್ಪ ಜಾತ್ರೆ ಎಂದು ಬಣ್ಣಿಸಿದರು.ಖ್ಯಾತರ ಸನ್ಮಾನ, ಉಪದೇಶ ನೆರೆದಿದ್ದವರಿಗೆ ಉಣಬಡಿಸಿತು. ಹಾಗೆ ಕೋಟ್ಯಾಂತರ ಜನರು ಸೋಷಿಯಲ್ ಮೀಡಿಯಾದಲ್ಲಿ, ಆನ್‌ಲೈನ್‌ನಲ್ಲಿ ಜಾತ್ರೆಯ ವೈಭವವನ್ನು ಕಣ್ತುಂಬಿಕೊಂಡರು.

ಮೊದಲ ದಿನ ರಥೋತ್ಸವದಲ್ಲಿ ೮-೧೦ ಲಕ್ಷ ಜನ ಸಾಕ್ಷಿಯಾದರೆ, ಎರಡನೇ ದಿನ ೩-೪ ಲಕ್ಷ ಜನರು ಹಾಗೂ ಮೂರನೇ ದಿನ ೨ ಲಕ್ಷ ಲಕ್ಷಕ್ಕೂ ಅಧಿಕ ಭಕ್ತರು ನೇರವಾಗಿ ಭಾಗಿಯಾದರು.ಕಾಂತಾ ಕರ್ನಾಟಕದ ಲಾಲ್‌ ಬಹದ್ದೂರು ಶಾಸ್ತ್ರಿಗಳು:

ಕಲಬುರಗಿಯ ಮಾಜಿ ಸಚಿವ ಎಸ್.ಕೆ. ಕಾಂತಾ ಕರ್ನಾಟಕದ ಲಾಲ್‌ ಬಹದ್ದೂರು ಶಾಸ್ತ್ರಿಗಳು ಎಂದು ಗವಿಸಿದ್ಧೇಶ್ವರ ಮಹಾಸ್ವಾಮೀಜಿ ಹೇಳಿದರು.ಕೈಲಾಸ ಮಂಟಪದಲ್ಲಿ ಜರುಗಿದ ಸಮಾರೋಪ ಸಮಾರಂಭದಲ್ಲಿ ವಿಶೇಷ ಸಾಧಕ, ಹಿರಿಯ ರಾಜಕಾರಣಿ ಎಸ್.ಕೆ. ಕಾಂತಾ ಅವರನ್ನು ಸನ್ಮಾನ ಮಾಡಿ ಶ್ರೀಗಳು ಮಾತನಾಡಿದರು.

ಮಾಜಿ ಸಚಿವರಾದರೂ ಇಂದು ಬಾಡಿಗೆ ಮನೆಯಲ್ಲಿ ಜೀವನ ಮಾಡುತ್ತಾರೆ. ಸರ್ಕಾರ ಪ್ರಶಸ್ತಿ ನೀಡಿ ₹ ಐದು ಲಕ್ಷ ನೀಡಿದರೆ ಅದು ಹಿಂದುಳಿದ ಮಕ್ಕಳಿಗೆ ಬಳಕೆಯಾಗಲಿ ಎಂದು ಹಿಂದುಳಿದ ಇಲಾಖೆಗೆ ನೀಡಿದ್ದಾರೆ. ಇಂಥ ಆದರ್ಶದ ಬದುಕು ಸಾಗಿಸುವವರು ನಮ್ಮ ಮಧ್ಯೆ ಇರುವುದು ಅಂದರೆ ನಮಗೆ ಹೆಮ್ಮೆ. ಕೊಟ್ಟಿದ್ದನ್ನೆಲ್ಲ ಪಡೆದು ಇನ್ನಷ್ಟು ಬೇಡುವಂತವರ ಮಧ್ಯೆ ಎಸ್.ಕೆ. ಕಾಂತಾ ಅವರು ವಿಶೇಷ ಅನಿಸುತ್ತಾರೆ ಎಂದರು.ವಿಶೇಷ ಸಾಧಕರಾದ ಜಿತೇಂದ್ರ ಮಜೇಥಿಯಾ ಸಹ ಹುಬ್ಬಳ್ಳಿಯಲ್ಲಿ ಕ್ಯಾನ್ಸರ್‌ನಿಂದ ಬಳಲುವವರಿಗೆ ಉಚಿತ ಆರೈಕೆ ಆಸ್ಪತ್ರೆ ಮಾಡಿದ್ದಾರೆ, ಇದು ಮಾನವೀಯತೆಗೆ ಸಾಕ್ಷಿಯಾಗಿದೆ. ಇಂಥವರ ಅಗತ್ಯವಿದೆ. ನಿರೀಕ್ಷೆಯಿರದ ಸೇವೆ ನಿಜವಾದ ಸೇವೆ. ನಿರೀಕ್ಷೆ ಇಟ್ಟುಕೊಂಡ ಮಾಡುವ ಸೇವೆ ನಿಜವಾದ ಪ್ರೀತಿ ಅಥವಾ ಸೇವೆ ಅಲ್ಲ ಎಂದರು.

ಹೆಬ್ಬಾಳ ಬೃಹನ್ಮಠದ ಷ.ಬ್ರ.ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು, ಶಿರೂರು ಡಾ.ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿದರು.ಎಸ್.ಕೆ. ಕಾಂತಾ, ಹೈದ್ರಾಬಾದನ ಅಲಿ ಅವರನ್ನು ಸನ್ಮಾನಿಸಲಾಯಿತು. ಜಿ ಕನ್ನಡ ಖ್ಯಾತಿಯ ಶುಭಾ ರಾಘವೇಂದ್ರ ಹಾಗೂ ತಂಡದ ಗಾಯಕ ಸೂರ್ಯಕಾಂತ ಗಡಿನಿಂಗದಹಳ್ಳಿ ಅವರ ಗಾಯನ ಮನಸೊರೆಗೊಂಡಿತು. ಬಿ.ಪ್ರಾಣೇಶ ಅವರಿಂದ ಹಾಸ್ಯೋತ್ಸವ ನಡೆಯಿತು. ಗವಿಸಿದ್ಧೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳ ರೂಪಕ ಮನಸೊರೆಗೊಂಡಿತು.