ಸಾರಾಂಶ
ಈಗ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ರೂಪ ಅವರನ್ನು ಪಕ್ಷ ಅಧಿಕೃತವಾಗಿ ಘೋಷಣೆ ಮಾಡಿದೆ. ಹೀಗಾಗಿ ಎನ್ ಡಿ ಎ ಅಭ್ಯರ್ಥಿಗಳ ಪರ ಕೆಲಸ ಮಾಡುವ ಮೂಲಕ ಎರಡು ಪಕ್ಷಗಳ ಹೈಕಮಾಂಡ್ ಆದೇಶ ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಮನ್ಮುಲ್ ನಿರ್ದೇಶಕರ ಸ್ಥಾನಕ್ಕೆ ಫೆ.2ರಂದು ನಡೆಯುವ ಚುನಾವಣೆಯಲ್ಲಿ ಮಾಜಿ ನಿರ್ದೇಶಕಿ ರೂಪ ಮತ್ತು ಮಹೇಶ್ ಅವರನ್ನು ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುವುದು ಎಂದು ಮಾಜಿ ಶಾಸಕರಾದ ಡಿ.ಸಿ.ತಮ್ಮಣ್ಣ ಹಾಗೂ ಸುರೇಶ್ ಗೌಡ ಶನಿವಾರ ಘೋಷಣೆ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೂಪ ಮತ್ತು ಮಹೇಶ್ ಹೆಸರನ್ನು ಪ್ರಕಟಿಸಿ ಸೋಮುವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂದರು.
ಕಳೆದ ಲೋಕಸಭಾ ಚುನಾವಣೆ ನಂತರ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಯಾವುದೇ ಗೊಂದಲವಿಲ್ಲದೆ ಪಕ್ಷದ ಸಂಘಟನೆಗಾಗಿ ಕೆಲಸ ಮಾಡಿಕೊಂಡು ಬಂದಿದ್ದೇವೆ. ಮನ್ಮುಲ್ ನಿರ್ದೇಶಕ ಸ್ಥಾನದ ಚುನಾವಣೆಗೆ ಜೆಡಿಎಸ್ ನಿಂದ ಮಹೇಶ್ ಅವರನ್ನು, ಬಿಜೆಪಿಗೆ ಒಂದು ಸ್ಥಾನ ಬಿಟ್ಟು ಕೊಟ್ಟು ಒಗ್ಗಟ್ಟಾಗಿ ಚುನಾವಣೆ ಎದುರಿಸುವ ತೀರ್ಮಾನ ಕೈಗೊಳ್ಳಲಾಗಿತ್ತು ಎಂದು ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು.ಈ ಮಧ್ಯೆ ಬಿಜೆಪಿಯ ಎಸ್.ಪಿ.ಸ್ವಾಮಿ ತಮ್ಮೊಂದಿಗೆ ಮಾತುಕತೆ ನಡೆಸಿ ಬೆಂಬಲ ಕೋರಿದ್ದರು. ಈ ವೇಳೆ ನಾನು ತಮ್ಮ ಪಕ್ಷದಿಂದ ಯಾರು ಅಭ್ಯರ್ಥಿ ಎಂದು ಘೋಷಣೆ ಮಾಡಿಸಿಕೊಂಡು ಬನ್ನಿ ಆಗ ನಾವೆಲ್ಲರೂ ಒಗ್ಗಟ್ಟಾಗಿ ಮತಯಾಚನೆ ಮಾಡೋಣ ಎಂದು ತಿಳಿಹೇಳಿ ಕಳಿಸಿದ್ದೆ ಎಂದು ತಮ್ಮಣ್ಣ ಸ್ಪಷ್ಟಪಡಿಸಿದರು.
ಈಗ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ರೂಪ ಅವರನ್ನು ಪಕ್ಷ ಅಧಿಕೃತವಾಗಿ ಘೋಷಣೆ ಮಾಡಿದೆ. ಹೀಗಾಗಿ ಎನ್ ಡಿ ಎ ಅಭ್ಯರ್ಥಿಗಳ ಪರ ಕೆಲಸ ಮಾಡುವ ಮೂಲಕ ಎರಡು ಪಕ್ಷಗಳ ಹೈಕಮಾಂಡ್ ಆದೇಶ ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದು ಡಿ.ಸಿ.ತಮ್ಮಣ್ಣ ಹಾಗೂ ಸುರೇಶ್ ಗೌಡ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಿ.ಕೆ.ಸತೀಶ್, ಮುಖಂಡರಾದ ಮಲ್ಲಿಕಾರ್ಜುನ್, ಜಿ.ಸಿ. ಮಹೇಂದ್ರ, ಲಲಿತಮ್ಮ ಸಿದ್ದರಾಜು, ತ್ರಿವೇಣಿ, ಬುಲೆಟ್ ಬಸವರಾಜು, ವೀರಭದ್ರ ಸ್ವಾಮಿ ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಮುಖಂಡರಾದ ಕೆ.ಟಿ.ರಾಜಣ್ಣ, ಕೂಳಗೆರೆ ಶೇಖರ್, ಹನುಮಂತೇಗೌಡ, ಬಿದರಕೋಟೆ ಕುಶ, ಹೊಸಕೆರೆ ದಯಾನಂದ, ಮತ್ತಿತರರು ಇದ್ದರು.