ಸಾರಾಂಶ
ಮತ ಎಣಿಕೆ ಸ್ಥಳವಾದ ಮೈಷುಗರ್ ಪ್ರೌಢಶಾಲೆ ಎದುರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಬೆಂಬಲಿಗರು, ಕಾರ್ಯಕರ್ತರು ನೆರೆದಿದ್ದರು. ಮೊಬೈಲ್ ಮೂಲಕವೇ ಫಲಿತಾಂಶವನ್ನು ತಿಳಿದುಕೊಂಡು ಹೊರಗಿನಿಂದಲೇ ಅಭ್ಯರ್ಥಿಗಳ ಪರ ಜೈಕಾರ ಮೊಳಗಿಸಿದರು. ಪಟಾಕಿಗಳನ್ನು ಸಿಡಿಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮನ್‌ಮುಲ್ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದವರ ಪರ ಅಭಿಮಾನಿಗಳು, ಬೆಂಬಲಿಗರು ಪಟಾಕಿ ಸಿಡಿಸಿ, ವಿಜೇತರನ್ನು ಎತ್ತಿಕೊಂಡು ಕುಣಿದು ಸಂಭ್ರಮಿಸಿದರು.ಮತ ಎಣಿಕೆ ಸ್ಥಳವಾದ ಮೈಷುಗರ್ ಪ್ರೌಢಶಾಲೆ ಎದುರು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಪರ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು, ಬೆಂಬಲಿಗರು, ಕಾರ್ಯಕರ್ತರು ನೆರೆದಿದ್ದರು. ಮೊಬೈಲ್ ಮೂಲಕವೇ ಫಲಿತಾಂಶವನ್ನು ತಿಳಿದುಕೊಂಡು ಹೊರಗಿನಿಂದಲೇ ಅಭ್ಯರ್ಥಿಗಳ ಪರ ಜೈಕಾರ ಮೊಳಗಿಸಿದರು. ಪಟಾಕಿಗಳನ್ನು ಸಿಡಿಸಿದರು.
ಗೆಲುವಿನ ಗುರುತನ್ನು ಪ್ರದರ್ಶಿಸುತ್ತಾ ಹೊರಬಂದ ವಿಜೇತರನ್ನು ಅಭಿಮಾನಿಗಳು ಓಡಿಬಂದು ಎತ್ತಿಕೊಂಡು ಕುಣಿದಾಡಿದರು. ಹೂಮಾಲೆ ಹಾಕಿ, ಸಿಹಿ ತಿನ್ನಿಸಿ ಸಂಭ್ರಮಿಸಿದರು. ಗೆದ್ದ ಅಭ್ಯರ್ಥಿಗಳೊಂದಿಗೆ ಫೋಟೋ ತೆಗೆಸಿಕೊಂಡು ಸಂತಸಪಟ್ಟರು. ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು, ಕಾರ್ಯಕರ್ತರು, ಬೆಂಬಲಿಗರು ನೆರೆದಿದ್ದರಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ಸ್ವಲ್ಪ ಅಡಚಣೆಯಾಗಿತ್ತು. ರಸ್ತೆಯ ಎರಡೂ ಬದಿಗಳಲ್ಲೂ ಸುಮಾರು ಒಂದು ಕಿ.ಮೀ. ದೂರ ಕಾರುಗಳು ಸಾಲುಗಟ್ಟಿ ನಿಂತಿದ್ದವು. ಫಲಿತಾಂಶವನ್ನು ಕುತೂಹಲದಿಂದಲೇ ಎದುರುನೋಡುತ್ತಿದ್ದರು.ಶಾಮಿಯಾನ ಹಾಕಿಕೊಂಡು ಪ್ರಚಾರ
ಮೈಷುಗರ್ ಪ್ರೌಢಶಾಲೆ ಕಾಂಪೌಂಡ್‌ನಿಂದ ೧೦೦ ಮೀ. ದೂರದಲ್ಲಿ ವಿವಿಧ ಅಭ್ಯರ್ಥಿಗಳ ಪರ ಬೆಂಬಲಿಗರು ಶಾಮಿಯಾನ ಹಾಕಿಕೊಂಡು ಕುಳಿತಿದ್ದರು. ಮತ ಚಲಾಯಿಸಲು ಬರುವ ಮತದಾರರಿಗೆ ತಮ್ಮ ಅಭ್ಯರ್ಥಿ ಪರ ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದರು. ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳಿಗೆ ಮೈಷುಗರ್ ಐಟಿಐ ಕಾಲೇಜು ಆವರಣದಲ್ಲೇ ಊಟದ ವ್ಯವಸ್ಥೆ ಮಾಡಲಾಗಿತ್ತು.ಬೆಳಗ್ಗೆ ೯ ಗಂಟೆಗೆ ಆರಂಭಗೊಂಡ ಮತದಾನ ಸಂಜೆ ೪ ಗಂಟೆಗೆ ಮುಕ್ತಾಯಗೊಂಡಿತು. ನಂತರ ಸಂಜೆ ೬ ಗಂಟೆ ವೇಳೆಗೆ ನಾಲ್ಕು ತಾಲೂಕುಗಳ ಏಳು ಸ್ಥಾನಗಳ ಫಲಿತಾಂಶವನ್ನು ಅಧಿಕೃತವಾಗಿ ಘೋಷಿಸಲಾಯಿತು. ನ್ಯಾಯಾಲಯದ ನಿರ್ದೇಶನದಂತೆ ಮೂರು ತಾಲೂಕುಗಳ ಐದು ಸ್ಥಾನಗಳ ಫಲಿತಾಂಶವನ್ನು ಕಾಯ್ದಿರಿಸಲಾಗಿದೆ.
ವಿಜೇತ ಅಭ್ಯರ್ಥಿಗಳಿಗೆ ಚುನಾವಣಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಪ್ರಮಾಣಪತ್ರಗಳನ್ನು ವಿತರಿಸಿದರು.