ಹಲವು ವರ್ಷಗಳಿಂದ ಮನ್‌ಮುಲ್‌ನಲ್ಲಿ ಒಂದಲ್ಲಾ ಒಂದು ಹಗರಣಗಳು ಬೆಳಕಿಗೆ ಬರುತ್ತಿವೆ. ನೇಮಕಾತಿ ಅಕ್ರಮ, ಹಾಲು-ನೀರು ಹಗರಣ ಬಯಲಿಗೆ ಬಂದರೂ ಪ್ರಕರಣದ ತನಿಖೆ ತಾರ್ಕಿಕ ಅಂತ್ಯ ತಲುಪಲಿಲ್ಲ. ಯಾರಿಗೂ ಶಿಕ್ಷೆಯೂ ಆಗಲಿಲ್ಲ. ಈಗ ಅದೇ ಹಾದಿಯಲ್ಲಿ ಹಾಲಿನಪುಡಿ ಕಲಬೆರಕೆ ಪ್ರಕರಣವೂ ಸಾಗುತ್ತಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಮನ್‌ಮುಲ್‌ನಲ್ಲಿ ನಡೆದಿರುವ ಹಾಲಿನಪುಡಿ ಕಲಬೆರಕೆ, ನೀರು-ಹಾಲು, ನೇಮಕಾತಿ ಅಕ್ರಮ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ನಾರಾಯಣಗೌಡ ಬಣ) ಕಾರ್ಯಕರ್ತರು ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಆಗಮಿಸಿದ ಪ್ರತಿಭಟನಾಕಾರರು ಮನ್‌ಮುಲ್ ಆಡಳಿತ ಮಂಡಳಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಕರವೇ ಜಿಲ್ಲಾಧ್ಯಕ್ಷ ಡಿ.ಎಸ್.ವೇಣು ಮಾತನಾಡಿ, ಹಲವು ವರ್ಷಗಳಿಂದ ಮನ್‌ಮುಲ್‌ನಲ್ಲಿ ಒಂದಲ್ಲಾ ಒಂದು ಹಗರಣಗಳು ಬೆಳಕಿಗೆ ಬರುತ್ತಿವೆ. ನೇಮಕಾತಿ ಅಕ್ರಮ, ಹಾಲು-ನೀರು ಹಗರಣ ಬಯಲಿಗೆ ಬಂದರೂ ಪ್ರಕರಣದ ತನಿಖೆ ತಾರ್ಕಿಕ ಅಂತ್ಯ ತಲುಪಲಿಲ್ಲ. ಯಾರಿಗೂ ಶಿಕ್ಷೆಯೂ ಆಗಲಿಲ್ಲ. ಈಗ ಅದೇ ಹಾದಿಯಲ್ಲಿ ಹಾಲಿನಪುಡಿ ಕಲಬೆರಕೆ ಪ್ರಕರಣವೂ ಸಾಗುತ್ತಿದೆ. ಈ ಹಗರಣಗಳನ್ನು ಪೊಲೀಸ್ ಇಲಾಖೆ, ಸಿಐಡಿ ಸಂಸ್ಥೆಯಿಂದ ತನಿಖೆ ನಡೆಸಲು ಸಾಧ್ಯವಿಲ್ಲ. ಆಡಳಿತರೂಢ ಸರ್ಕಾರಗಳು ಅವುಗಳ ಮೇಲೆ ನಿಯಂತ್ರಣ, ಪ್ರಭಾವ ಬೀರುವುದರಿಂದ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸುವಂತೆ ಆಗ್ರಹಪಡಿಸಿದರು.ಈ ಹಗರಣಗಳಿಂದ ನಂದಿನಿ ಬ್ರ್ಯಾಂಡ್‌ಗೆ ಕಳಂಕ ತಂದೊಡ್ಡಿದೆ. ಜಿಲ್ಲೆಯ ಸ್ವಾಭಿಮಾನಿ ರೈತರಿಗೆ ತೀವ್ರ ನೋವುಂಟು ಮಾಡಿದೆ. ಪ್ರಕರಣದ ಸಂಪೂರ್ಣ ಸತ್ಯಾಂಶ ಹೊರಬರಲು ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ನಡೆಯಬೇಕು. ಆರೋಪಗಳ ಹಿಂದೆ ಯಾರೇ ಇದ್ದರೂ, ತನಿಖೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಶಾಲಾ ಮಕ್ಕಳು ಹಾಗೂ ಅಂಗನವಾಡಿ ಕೇಂದ್ರಗಳಿಗೆ ಪೂರೈಕೆಯಾಗುವ ಹಾಲಿನ ಪುಡಿಯ ಗುಣಮಟ್ಟದ ವಿಚಾರ ಅತ್ಯಂತ ಗಂಭೀರವಾಗಿದೆ. ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶದಿಂದ ನೀಡಲಾಗುವ ಹಾಲಿನ ಪುಡಿಯ ಗುಣಮಟ್ಟದಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ಕಲಬೆರಕೆ ನಡೆದಿರುವ ಆರೋಪದ ಕುರಿತು ಸಮಗ್ರ ಪರಿಶೀಲನೆ ನಡೆಸಿ, ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.ಆಹಾರ ಸುರಕ್ಷತೆಗೆ ಸಂಬಂಧಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಇಲಾಖೆಗಳು ಪ್ರಕರಣದ ಪರಿಶೀಲನೆಯಲ್ಲಿ ಭಾಗವಹಿಸಬೇಕು. ತನಿಖೆಯ ಮೂಲಕ ಸತ್ಯಾಂಶ ಹೊರಬಂದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.
ಮನ್ಮುಲ್ ಮಂಡ್ಯ ಜಿಲ್ಲೆಯ ಲಕ್ಷಾಂತರ ಹಾಲು ಉತ್ಪಾದಕ ರೈತರ ಬದುಕಿಗೆ ಸಂಬಂಧಿಸಿದ ಸಂಸ್ಥೆಯಾಗಿದೆ. ಇಂತಹ ಸಂಸ್ಥೆಯಲ್ಲಿ ಅಕ್ರಮಗಳ ಆರೋಪಗಳು ಕೇಳಿಬಂದಾಗ ಅವುಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ. ರಾಜ್ಯ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಸಿಬಿಐ ತನಿಖೆಗೆ ವಹಿಸಬೇಕು. ಇಲ್ಲದಿದ್ದರೆ ಮಂಡ್ಯದಲ್ಲಿ ಜನಾಂದೋಲನ ರೂಪಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಬೃಹತ್ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ಪ್ರತಿಭಟನೆಯಲ್ಲಿ ಕರವೇ ರಾಜ್ಯ ಉಪಾಧ್ಯಕ್ಷ ಮ.ಸೋ. ಚಿದಂಬರ್, ಕೆ.ಟಿ.ಶಂಕರೇಗೌಡ, ಸುಜಾತ ಕೃಷ್ಣ, ಮಣಿಗೆರೆ ರಾಮಚಂದ್ರು, ಭಾರತಿ ಕುಮಾರ್, ಸರಸ್ವತಿ, ರಾಧಾ, ಶೀಲಾ, ಸೌಭಾಗ್ಯ, ಸ್ವಾಮಿ, ಪುಟ್ಟಮ್ಮ, ತೇಜುಕುಮಾರ್, ಯಶವಂತ್, ಶಿವಪ್ರಸಾದ್ ಇತರರಿದ್ದರು.