ನಂದಿನಿ ರಿಟೇಲ್ ಮಾರಾಟಗಾರರ ಸಮಸ್ಯೆಗಳು ಗಮನಕ್ಕೆ ಬಂದಿದೆ. ಒಕ್ಕೂಟಕ್ಕೆ ಉತ್ಪಾದಕರು ಎಷ್ಟು ಮುಖ್ಯವೋ ಮಾರಾಟಗಾರರು ಸಹ ಅಷ್ಟೇ ಮುಖವಾಗಿದ್ದಾರೆ. ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ ರಿಟೇಲ್ ಮಾರಾಟಗಾರರ ಸಮಸ್ಯೆಗಳ ಬಗ್ಗೆಯೂ ಚರ್ಚಿಸಿದ್ದೇವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಬೇಸಿಗೆಯಲ್ಲಿ ಒಕ್ಕೂಟದ ಮೊಸರು ಮತ್ತು ಐಸ್ ಕ್ರೀಂಗೆ ಬೇಡಿಕೆ ಹೆಚ್ಚಾಗುವುದರಿಂದ ಮುಂದಿನ ದಿನಗಳಲ್ಲಿ ಮೊಸರು ಹಾಗೂ ಐಸ್‌ಕ್ರೀಂ ಉತ್ಪಾದಕ ಘಟಕವನ್ನು ಮನ್‌ಮುಲ್ ಒಕ್ಕೂಟದ ಆವರಣದಲ್ಲಿಯೇ ಆರಂಭಿಸಲು ಕ್ರಮ ವಹಿಸಲಾಗುವುದು ಎಂದು ಮನ್‌ಮುಲ್ ಹಾಗೂ ಕೆಎಂಎಫ್ ನಿರ್ದೇಶಕ ಅಪ್ಪಾಜಿಗೌಡ ಭರವಸೆ ನೀಡಿದರು.

ಪಟ್ಟಣದ ಕಸಾಪ ಭವನದಲ್ಲಿ ಮನ್‌ಮುಲ್ ಒಕ್ಕೂಟದಿಂದ ಹಮ್ಮಿಕೊಂಡಿದ್ದ ನಂದಿನಿ ರಿಟೇಲ್ ಮಾರಾಟಗಾರರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ, ನಂದಿನಿ ರಿಟೇಲ್ ಮಾರಾಟಗಾರರ ಸಮಸ್ಯೆಗಳು ಗಮನಕ್ಕೆ ಬಂದಿದೆ. ಒಕ್ಕೂಟಕ್ಕೆ ಉತ್ಪಾದಕರು ಎಷ್ಟು ಮುಖ್ಯವೋ ಮಾರಾಟಗಾರರು ಸಹ ಅಷ್ಟೇ ಮುಖವಾಗಿದ್ದಾರೆ. ನಮ್ಮ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ ರಿಟೇಲ್ ಮಾರಾಟಗಾರರ ಸಮಸ್ಯೆಗಳ ಬಗ್ಗೆಯೂ ಚರ್ಚಿಸಿದ್ದೇವೆ. ಸಭೆಯಲ್ಲಿ ನಮ್ಮ ಗಮನಕ್ಕೆ ಬಂದಿರುವ ಸಮಸ್ಯೆಗಳ ಬಗ್ಗೆ ಮನ್‌ಮುಲ್ ಒಕ್ಕೂಟ ಹಾಗೂ ಕೆಎಂಎಫ್‌ನಲ್ಲಿ ಚರ್ಚಿಸಿ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳುತ್ತೇವೆ. ಬೇಸಿಗೆಯಲ್ಲಿ ಮೊಸರು ಹಾಗೂ ಐಸ್‌ಕ್ರೀಂಗೆ ಬೇಡಿಕೆ ಹೆಚ್ಚಿರುವುದರಿಂದ ಮೊಸರು ಉತ್ಪಾದನೆಯ ಜತೆಗೆ ಐಸ್‌ಕ್ರೀಂ ತಯಾರಿಕ ಘಟಕವನ್ನು ಒಕ್ಕೂಟದ ವತಿಯಿಂದ ಆರಂಭಿಸಲು ಚಿಂತನೆ ನಡೆಸಲಾಗಿದೆ ಎಂದರು.

ಮನ್‌ಮುಲ್ ನಿರ್ದೇಶಕ ಸಿ.ಶಿವಕುಮಾರ್ ಮಾತನಾಡಿ, ನಂದಿನಿ ಬಳಗಕ್ಕೆ ಹಾಲು ಉತ್ಪಾದಕರು ಮತ್ತು ರಿಟೇಲ್ ಮಾರಾಟಗಾರರು ಇಬ್ಬರು ಎರಡು ಕಣ್ಣುಗಳು ಇದ್ದಂತೆ, ಉತ್ಪಾದಕರಿಗೆ ತೋರಿಸುವ ಕಾಳಜಿಯನ್ನು ರಿಟೇಲ್ ಮಾರಾಟಗಾರರಿಗೂ ತೋರಿಸುತ್ತೇವೆ. ಈಗಾಗಲೆ ನಿಮ್ಮ ಸಮಸ್ಯೆಗಳ ಬಗ್ಗೆ ಆಡಳಿತ ಮಂಡಳಿಯಲ್ಲಿ ಚರ್ಚಿಸಿದ್ದೇವೆ. ಜತೆಗೆ ಕೆಎಂಎಫ್‌ನಲ್ಲಿ ನಮ್ಮ-ನಿಮ್ಮ ಪರವಾರ ಧ್ವನಿಗೂಡಿಸಲು ಮಾಜಿ ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡರನ್ನು ಒಕ್ಕೂಟದಿಂದ ನಿರ್ದೇಶಕರಾಗಿ ಕಳುಹಿಸಿದ್ದೇವೆ.

ರಿಟೇಲ್ ಮಾರಾಟಗಾರರಿಗೆ ಶ್ರಮಹೆಚ್ಚಿದೆ, ನಿದ್ರೆಗೆಟ್ಟು ಕೆಲಸ ಮಾಡುತ್ತಾರೆ. ಅದನ್ನು ಗಮನದಲ್ಲಿ ಇಟ್ಟುಕೊಂಡು ಹೆಚ್ಚಿನ ಲಾಭನೀಡುವ ನಿಟ್ಟಿನಲ್ಲಿ ಒಕ್ಕೂಟ ಮತ್ತು ಕೆಎಂಎಫ್ ಕೆಲಸ ಮಾಡಬೇಕು, ಜತೆಗೆ ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿನಲ್ಲಿ ಆರು ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದು ಭರವೆ ನೀಡಿದರು.

ಇದೇ ವೇಳೆ ನೂತನ ಕೆಎಂಎಫ್ ನಿರ್ದೇಶಕರಾಗಿ ಆಯ್ಕೆಯಾದ ಅಪ್ಪಾಜಿಗೌಡ ಅವರನ್ನು ಅಭಿನಂಧಿಸಲಾಯಿತು.

ಸಭೆಯಲ್ಲಿ ಮನ್‌ಮುಲ್ ಒಕ್ಕೂಟದ ಮಾರಾಟ ವಿಭಾಗದ ವ್ಯವಸ್ಥಾಪಕ ಶ್ರೀಕಾಂತ್, ಉಪವ್ಯವಸ್ಥಾಪಕಿ ಬಿಂದುಶ್ರೀ, ಸಹಾಯಕ ವ್ಯವಸ್ಥಾಪಕ ಸಾಗರ್, ಮನ್‌ಮುಲ್ ಉಪವ್ಯವಸ್ಥಾಪಕ ಆರ್.ಪ್ರಸಾದ್, ರವಿ. ಸೋಮಶೇಖರ್, ಮನು, ಎಚ್.ಎಸ್.ರಾಜು, ಹಾ.ಉ.ನೌ.ಸಂ.ಅಧ್ಯಕ್ಷ ಶಿವಪ್ಪ, ಶಿಶಿಕಲಾ, ಮಾರ್ಗವಿಸ್ತರ್ಣಾಧಿಕಾರಿಗಳಾದ ಮಧುಶೇಖರ್, ಪ್ರಜ್ವಲ್‌ಗೌಡ, ನಾಗೇಂದ್ರ ಸೇರಿದಂತೆ ಹಲವರು ಹಾಜರಿದ್ದರು.