ಸಾರಾಂಶ
ಕನ್ನಡಪ್ರಭ ವಾರ್ತೆ ಕನಕಗಿರಿ
ತಾಲೂಕು ವ್ಯಾಪ್ತಿಯ ಎಲ್ಲ ಗ್ರಾಪಂ ಮಟ್ಟದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಸಬಲತೆಯೆಡೆಗೆ ಅಭಿಯಾನ ಆರಂಭಿಸಲಾಗಿದೆ ಎಂದು ಕನಕಗಿರಿ ತಾಪಂ ಕಾರ್ಯನಿರ್ವಾಹಕಾಧಿಕಾರಿ ರಾಜಶೇಖರ ಹೇಳಿದರು.ಸೋಮವಾರ ಪತ್ರಕರ್ತರ ಜತೆ ಮಾತನಾಡಿ, ಗ್ರಾಮಸಭೆಯಲ್ಲಿ ಅನುಮೋದಿಸಿದ ವಾರ್ಷಿಕ ಕ್ರಿಯಾ ಯೋಜನೆಯನ್ನು ಡಿ. 5ರೊಳಗೆ ತಾಪಂಗೆ ಸಲ್ಲಿಸಬೇಕು. ಎಲ್ಲ ಗ್ರಾಮ ಪಂಚಾಯಿತಿಗಳ ಕ್ರೋಢೀಕೃತ ತಾಲೂಕು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ, ಅನುಮೋದಿಸಿ ಡಿ. 20ರೊಳಗೆ ಜಿಪಂ ಸಿಇಒ ಅನುಮೋದನೆಗೆ ಕಳುಹಿಸಲಾಗುವುದು ಎಂದು ತಿಳಿಸಿದರು. ಅ. 2ರಿಂದ 31ರ ವರೆಗೆ ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುವ ಮನರೇಗಾ ಯೋಜನೆಯ ಸಬಲತೆಗೆ ತಾಪಂ ಮುಂದಾಗಿದೆ. ಪ್ರತಿ ಮನೆಗೂ ಭೇಟಿ ನೀಡುವ ಗ್ರಾಪಂ ಸಿಬ್ಬಂದಿಯು ಯೋಜನೆಯ ಪರಿಪೂರ್ಣ ಮಾಹಿತಿ ನೀಡಲಿದ್ದು, ಈ ವೇಳೆ ವೈಯಕ್ತಿಕ ಕಾಮಗಾರಿಗಳ ಬೇಡಿಕೆ ಸಲ್ಲಿಸಬೇಕಿದೆ.
ಗ್ರಾಮೀಣ ಪ್ರದೇಶದ ಕುಟುಂಬಕ್ಕೆ ನೂರು ದಿನ ಕೆಲಸ ಖಾತರಿಯಾಗಿದ್ದು, ಪ್ರತಿ ದಿನಕ್ಕೆ ₹349 ಕೂಲಿ ನಿಗದಿಪಡಿಸಲಾಗಿದೆ ಎಂದರು.ಪ್ರತಿ ಮನೆಗೂ ಭೇಟಿ ನೀಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳ ಬೇಡಿಕೆ ಅರ್ಜಿ ಸ್ವೀಕರಿಸಲು ಅಂಗನವಾಡಿ, ಗ್ರಂಥಾಲಯ, ನ್ಯಾಯಬೆಲೆ ಅಂಗಡಿ ಮತ್ತು ಹಾಲಿನ ಕೇಂದ್ರಗಳಲ್ಲಿ ಬೇಡಿಕೆ ಪೆಟ್ಟಿಗೆ ಸ್ಥಾಪಿಸಿ ಪ್ರತಿದಿನ ಸ್ವೀಕೃತವಾದ ಬೇಡಿಕೆಯನ್ನು ಅ. 31ರ ವರೆಗೆ ಅರ್ಜಿ ಸಂಗ್ರಹಿಸಲಾಗುವುದು. ಕಾಮಗಾರಿ ಬೇಡಿಕೆ ಪೆಟ್ಟಿಗೆ ಮೂಲಕ ಸ್ವೀಕರಿಸಿದ ಅರ್ಜಿ ಪರಿಶೀಲಿಸಿ, ವಾರ್ಡ್ ಸಭೆಗಳಲ್ಲಿ ಕಾಮಗಾರಿ ಪಟ್ಟಿ ತಯಾರಿಸಿ ಅನುಮೋದಿಸಿ, ಗ್ರಾಮಸಭೆಗೆ ಸಲ್ಲಿಸುವುದು, ನ. 15ರೊಳಗೆ ವಾರ್ಡ್ ಸಭೆ ಪೂರ್ಣಗೊಳಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಚಿನ್ನ ಕಳ್ಳತನ-ಆರೋಪಿ ಬಂಧನ:ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮದ ಮನೆಯೊಂದರಲ್ಲಿ ಜು. ೨೦ರಿಂದ ೨೪ನೇ ತಾರೀಕಿನೊಳಗೆ ನಡೆದಿದ್ದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಿರುವ ಸ್ಥಳೀಯ ಪೊಲೀಸರು, ಬಂಧಿತನಿಂದ ₹೯.೧೦ ಲಕ್ಷ ಬೆಲೆಯ ೧೩೦ ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.
ಮುಸಲಾಪುರ ಗ್ರಾಮದ ವ್ಯಾಪಾರಿ ಮಾರುತಿ ಗೊಂಧಳಿ ಕುಟುಂಬಸ್ಥರು ಜು. ೨೦ರಿಂದ ೪ ದಿನಗಳ ಕಾಲ ಕೊಪ್ಪಳದ ಜಾತ್ರೆಯೊಂದಕ್ಕೆ ತೆರಳಿದ್ದರು. ಅವರು ಮನೆಯಲ್ಲಿ ಇಲ್ಲದ ಸಂದರ್ಭವನ್ನು ಗಮನಿಸಿದ್ದ ತಾಲೂಕು ವ್ಯಾಪ್ತಿಯ ಹುಲಿಹೈದರ ಗ್ರಾಮದ ರಾಜಾಸಾಬ್ ದರೋಸಿ ಎನ್ನುವಾತ ಜು. ೨೦ರಿಂದ ೨೪ ತಾರೀಕಿನೊಳಗೆ ಮನೆಗೆ ನುಗ್ಗಿ ₹೧೧.೪೦ ಲಕ್ಷ ಬೆಲೆಯ ಚಿನ್ನ ಹಾಗೂ ಬೆಳ್ಳಿ ಆಭರಣಗಳನ್ನು ಕಳ್ಳತನ ಮಾಡಿದ್ದಾನೆ.ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಕೇಸ್‌ನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡಿತ್ತು.ಇಲಾಖೆಯು ಹೆಚ್ಚುವರಿ ಪೊಲೀಸ್ ಅಧಿಕ್ಷಕ ಹೇಮಂತ್‌ಕುಮಾರ್ ಆರ್., ಡಿವೈಎಸ್‌ಪಿ ಸಿದ್ದಲಿಂಗಪ್ಪಗೌಡ ಪಾಟೀಲ್ ಮಾರ್ಗದರ್ಶನದಲ್ಲಿ ಪಿಐ ಎಂ.ಡಿ. ಫೈಜುಲ್ಲಾ ನೇತೃತ್ವದಲ್ಲಿ ಪರಶುರಾಮ, ಬಸವರಾಜ, ನಿಂಗಪ್ಪ, ಶರೀಫ್ ಸಾಬ್, ಶ್ರೀಕಾಂತ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು.ಈ ತಂಡವು ಆರೋಪಿತನನ್ನು ಬಂಧಿಸಿ ವಿಚಾರಿಸಲಾಗಿ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದು, ಆರೋಪಿಯಿಂದ ೧೩೦ ಗ್ರಾಂ ಚಿನ್ನ ವಶಪಡಿಸಿಕೊಂಡಿದ್ದಾರೆ.
ಪ್ರಕರಣ ಭೇದಿಸಿದ ತಂಡಕ್ಕೆ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಪ್ರಶಂಸೆ ವ್ಯಕ್ತಪಡಿಸಿ, ಬಹುಮಾನ ಘೋಷಿಸಿದ್ದಾರೆ. ಬಂಧಿತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.