ಸಾರಾಂಶ
ಬೆಂಗಳೂರು : ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ಸಂಪಂಗಿ ರಾಮನಗರದ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಬಳಿಕ ಬೃಹತ್ ಮೆರವಣಿಗೆ ಮೂಲಕ ಬಿಬಿಎಂಪಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ಸಲೀಂ ಅಹಮದ್, ಮಾಜಿ ಶಾಸಕ ಎಚ್. ನಾಗೇಶ್ ಜತೆ ಬಿಬಿಎಂಪಿಯಲ್ಲಿ ಚುನಾವಣಾಧಿಕಾರಿ ಹರೀಶ್ ಕುಮಾರ್ ಅವರಿಗೆ ಮನ್ಸೂರ್ ಅಲಿಖಾನ್ ತಮ್ಮ ಉಮೇದುವಾರಿಕೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು, ಅಪಾರ ಬೆಂಬಲಿಗರ ಜತೆ ಜಾಥಾ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಮತ ಕೇಳುತ್ತೇನೆ ಎಂದು ಹೇಳಿದರು.
ಪ್ರತಿಯೊಂದು ಮನೆಗೂ ನಮ್ಮ ಸರ್ಕಾರದ ಗ್ಯಾರಂಟಿ ಕಾರ್ಯಕ್ರಮಗಳು ತಲುಪಿವೆ. ಕಷ್ಟದಲ್ಲಿರುವವರಿಗೆ ಆಸರೆಯಾಗಿವೆ. ಅಂತಹ ಗ್ಯಾರಂಟಿ ಯೋಜನೆಗಳು ಹಾಗೂ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೋಡಿ ಜನರ ಮತ ಕೇಳುತ್ತೇನೆ. ಬಿಜೆಪಿ ಅಭ್ಯರ್ಥಿಗೆ ಮೂರು ಸಲ ಅವಕಾಶ ನೀಡಿದ್ದೀರಿ. ಈ ಬಾರಿ ನನಗೆ ಅವಕಾಶ ನೀಡಿ ಎಂದು ಕೇಳುತ್ತಿದ್ದೇನೆ. ನೂರಕ್ಕೆ ನೂರರಷ್ಟು ನಾನು ಗೆಲ್ಲುವ ವಿಶ್ವಾಸ ಹೊಂದಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದಕ್ಕೂ ಮೊದಲು ಜಾಥಾದಲ್ಲಿ ವಿಧಾನಪರಿಷತ್ ಸದಸ್ಯ ಸಲೀಂ ಅಹಮದ್ ಸೇರಿದಂತೆ ಹಲವರು ಸಾಥ್ ನೀಡಿದರು.ಮನ್ಸೂರ್ ಅಲಿಖಾನ್ ಬಳಿ ₹97.33 ಕೋಟಿಯ ಆಸ್ತಿ
ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿಖಾನ್ ತಮ್ಮ ಕುಟುಂಬದ ಬಳಿ ₹97.33 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಣೆ ಮಾಡಿದ್ದಾರೆ.ಈ ಪೈಕಿ ತಮ್ಮ ಬಳಿ ₹14.96 ಕೋಟಿ ಚರಾಸ್ತಿ ಹಾಗೂ ಪತ್ನಿ ಬಳಿ ₹10.48 ಕೋಟಿ, ಮೊದಲ ಮಗನ ಬಳಿ ₹21.93 ಲಕ್ಷ, ಎರಡನೇ ಮಗನ ಬಳಿ ₹21.38 ಲಕ್ಷ ಚರಾಸ್ತಿ ಹೊಂದಿದ್ದಾರೆ.
ಚರಾಸ್ತಿ ಪೈಕಿ ತಮ್ಮ ಬಳಿ ₹4.50 ಲಕ್ಷ ನಗದು, ಪತ್ನಿ ಬಳಿ ₹4 ಲಕ್ಷ ನಗದು, ಮಕ್ಕಳ ಬಳಿ ₹1 ಲಕ್ಷ ಹಾಗೂ ₹50 ಸಾವಿರ ನಗದು ಇರುವುದಾಗಿ ಚುನಾವಣಾಧಿಕಾರಿಗೆ ಬುಧವಾರ ಸಲ್ಲಿಕೆ ಮಾಡಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ. ಇನ್ನು ಮನ್ಸೂರ್ ಅಲಿ ಖಾನ್ ಬಳಿ 2.25 ಕೆ.ಜಿ. ಚಿನ್ನ, ಪತ್ನಿ ಬಳಿ 3.71 ಕೆ.ಜಿ ಚಿನ್ನ ಸೇರಿ ₹3.65 ಕೋಟಿ ಮೌಲ್ಯದ 5.9 ಕೆ.ಜಿ. ಚಿನ್ನಾಭರಣ, ಪತ್ನಿ ಬಳಿ ₹1.09 ಕೋಟಿ ಮೌಲ್ಯದ ಬಿಎಂಡಬ್ಲ್ಯೂ ಎಕ್ಸ್-7 ಕಾರು, ಮನ್ಸೂರ್ ಅಲಿ ಖಾನ್ ಬಳಿ ₹98 ಲಕ್ಷ ಮೌಲ್ಯದ ಆಡಿ ಎಸ್-5 ಕಾರು ಇದೆ.₹71.44 ಕೋಟಿ ರು. ಸ್ಥಿರಾಸ್ತಿ: ಸ್ಥಿರಾಸ್ತಿ ಪೈಕಿ ಮನ್ಸೂರ್ ಅಲಿ ಖಾನ್ ಕೃಷಿ ಜಮೀನು, ಕೃಷಿಯೇತರ ಜಮೀನು, ವಸತಿ ಹಾಗೂ ವಾಣಿಜ್ಯ ಕಟ್ಟಡಗಳ ಸಹಿತ ₹62.19 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಇನ್ನು ಪತ್ನಿ ₹9.25 ಕೋಟಿ ಸ್ಥಿರಾಸ್ತಿ ಹೊಂದಿರುವುದಾಗಿ ಮಾಹಿತಿ ನೀಡಿದ್ದಾರೆ.