ಡಾ. ಮಲ್ಲಿಕಾರ್ಜುನ ಮನಸೂರ ಜನ್ಮದಿನ ನಿಮಿತ್ತ ಡಿ. 31ರಂದು ಆಲೂರು ವೆಂಕಟರಾವ್‌ ಭವನದಲ್ಲಿ ಅಥಣಿಯ ಇಂಗಳಗಾವ್‌ನ ಮುರುಗೇಂದ್ರ ಶಿವಯೋಗಿಗಳ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಿರಿಯ ಸಂಗೀತ ಕಲಾವಿದರಾದ ನೀಲಾ ಎಂ. ಕೊಡ್ಲಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಧಾರವಾಡ:

ಪಂ. ಮಲ್ಲಿಕಾರ್ಜುನ ಮನಸೂರ ಹೆಸರಿನಲ್ಲಿ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿಯು ಈ ಬಾರಿ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಖ್ಯಾತಿ ಪಡೆದಿರುವ ಪುಣೆಯ ವಿದುಷಿ ಅಲಕಾ ದೇವ್‌ ಮಾರುಲ್ಕರ್‌ ಅವರಿಗೆ ಸಂದಿದೆ.

ಈ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪದ್ಮಶ್ರೀ ಪುರಸ್ಕೃತರು ಹಾಗೂ ಡಾ. ಮಲ್ಲಿಕಾರ್ಜುನ ಮನಸೂರ ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌

ಅಧ್ಯಕ್ಷರೂ ಆದ ಪಂ. ವೆಂಕಟೇಶಕುಮಾರ, ಡಾ. ಮಲ್ಲಿಕಾರ್ಜುನ ಮನಸೂರ ಜನ್ಮದಿನ ನಿಮಿತ್ತ ಡಿ. 31ರಂದು ಆಲೂರು ವೆಂಕಟರಾವ್‌ ಭವನದಲ್ಲಿ ಅಥಣಿಯ ಇಂಗಳಗಾವ್‌ನ ಮುರುಗೇಂದ್ರ ಶಿವಯೋಗಿಗಳ ಮಠದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯದಲ್ಲಿ ಹಿರಿಯ ಸಂಗೀತ ಕಲಾವಿದರಾದ ನೀಲಾ ಎಂ. ಕೊಡ್ಲಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದರು.

ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಗಾಯಕ ಡಾ. ಹರೀಶ ಹೆಗಡೆ ಹಾಗೂ ಗದಗ ಜಿಲ್ಲೆಯ ಖ್ಯಾತ ತಬಲಾ ವಾದಕ ಡಾ. ನಾಗಲಿಂಗ ಮುರಗಿ ಅವರಿಗೆ ಯುವ ಪ್ರಶಸ್ತಿ ಪ್ರದಾನ ಮಾಡಲಾಗುವುದು. ರಾಷ್ಟ್ರೀಯ ಪ್ರಶಸ್ತಿಗೆ ₹ 1 ಲಕ್ಷ ಹಾಗೂ ಯುವ ಪ್ರಶಸ್ತಿಗೆ ತಲಾ ₹ 25 ಸಾವಿರ ಪ್ರಶಸ್ತಿ ಮೊತ್ತ ನೀಡಲಾಗುವುದು. ಸಮಾರಂಭದಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಹಾಗೂ ಕೆ.ಎಚ್‌. ಚೆನ್ನೂರ ಅತಿಥಿಗಳಾಗಿ ಭಾಗವಹಿಸುತ್ತಾರೆ. ಪ್ರಶಸ್ತಿ ಪ್ರದಾನ ನಂತರದಲ್ಲಿ ಪುರಸ್ಕೃತರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ವೆಂಕಟೇಶಕುಮಾರ ತಿಳಿಸಿದರು.

ಧಾರವಾಡದ ಆಕಾಶವಾಣಿ ಎದುರಿನ ಪ್ರದೇಶದಲ್ಲಿರುವ ಮನಸೂರ ಅವರು ಬಾಳಿದ ಮನೆಯನ್ನು ಸ್ಮಾರಕವಾಗಿ ಮಾಡಲಾಗಿದೆ. ಕಾರಣಾಂತರಗಳಿಂದ ಬಂದ್ ಆಗಿದ್ದ ಸಂಗೀತ ಶಾಲೆಯನ್ನು ಇಲ್ಲಿ ಮರಳಿ ಏಪ್ರಿಲ್‌ ತಿಂಗಳಿಂದ ಶುರು ಮಾಡಲಾಗುತ್ತಿದೆ. ಟ್ರಸ್ಟ್‌ಗೆ ವಾರ್ಷಿಕ ₹ 9 ಲಕ್ಷ ಅನುದಾನ ಬರುತ್ತಿದ್ದು, ಯೋಜನೆಗಳಿಗೆ ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ವಾರ್ಷಿಕವಾಗಿ ₹ 20 ಲಕ್ಷ ಅನುದಾನ ನೀಡಲು ಪ್ರಯತ್ನಗಳು ನಡೆದಿವೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ ಕಾರ್ಯದರ್ಶಿ ಕುಮಾರ ಬೆಕ್ಕೇರಿ, ಸದಸ್ಯರಾದ ಅಕ್ಕಮಹಾದೇವಿ, ಡಾ. ಚಂದ್ರಿಕಾ ಕಾಮತ್‌ ಹಾಗೂ ಗುರುಪ್ರಸಾದ ಹೆಗಡೆ ಇದ್ದರು.