ಕನ್ನಡಪ್ರಭ ವಾರ್ತೆ ಮಳವಳ್ಳಿ

ಒಂದೇ ಸಮಕಾಲಿನವರಾದ ಧರೆಗೆದೊಡ್ಡವರು ಮಂಟೇಸ್ವಾಮಿ ಹಾಗೂ ಮಹದೇಶ್ವರರು ಸಮಾಜ ಸುಧಾರಣೆಗಾಗಿ ಶ್ರಮಿಸಿದ ಮಹಾ ಪುರುಷರು ಎಂದು ಮಳವಳ್ಳಿ, ಹೊನ್ನಾಯಕಹಳ್ಳಿ ಮಂಟೇಸ್ವಾಮಿ ಹಾಗೂ ಕಪ್ಪಡಿ ರಾಚಪ್ಪಾಜಿ ಮಠದ ಮಠಾಧಿಪತಿ ವರ್ಚಸ್ವಿ ಎಂ.ಎಲ್.ಸಿದ್ದಲಿಂಗರಾಜೇ ಅರಸು ತಿಳಿಸಿದರು.

ತಾಲೂಕಿನ ಅಂಚೇದೊಡ್ಡಿ ಗ್ರಾಮದಲ್ಲಿ ಇತಿಹಾಸ ಪ್ರಸಿದ್ಧ ಮುತ್ತುರಾಯಸ್ವಾಮಿಯ ಪರ ಹಾಗೂ ಪೂಜಾ ಮಹೋತ್ಸವದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿ, ಮಂಟೇಸ್ವಾಮಿ, ಮಹದೇಶ್ವರ ಹಾಗೂ ಮುತ್ತುರಾಯಸ್ವಾಮಿ ಅವರ ಪರಂಪರೆಯನ್ನು ಪ್ರತಿಯೊಬ್ಬರು ಕೈಜೋಡಿಸಿ ಇಂದಿಗೂ ಮುಂದುವರಿಸಿಕೊಂಡು ಬರುತ್ತಿರುವುದು ನಮ್ಮ ಸಂಸ್ಕೃತಿಯನ್ನು ಉಳಿಸಿಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದರು.

ಮಳವಳ್ಳಿ ಮಠದ ಮಂಟೇಸ್ವಾಮಿ ಬಸವಪ್ಪ, ಆದಿಹೊನ್ನನಾಯಕನಹಳ್ಳಿ ಮಂಟೇಸ್ವಾಮಿ ಬಸವಪ್ಪ, ಕರಡಕೆರೆ ಹನುಮಂತರಾಯಸ್ವಾಮಿ ಬಸಪ್ಪ, ಗಾಜನೂರು ದೊಡ್ಡಬಸವೇಶ್ವರ ಬಸವಪ್ಪ, ಕಂದೇಗಾಲ ಮತ್ತಿತಾಳೇಶ್ವರ ಬಸವಪ್ಪ ಕಂದೇಗಾಲ ಬಸವಪ್ಪಗಳ ಹೂವು ಹೊಂಬಾಳೆ ಕಾರ್ಯಕ್ರಮ ಭಕ್ತಿ ಪ್ರಧಾನವಾಗಿ ನಡೆದ ಬಳಿಕ ಜಾನಪದ ಕಲಾ ಮೇಳದೊಂದಿಗೆ ದೇವರ ಮೆರವಣಿಗೆ ವಿಶೇಷವಾಗಿ ನಡೆಯಿತು.

ಗುರುಮಠದ ಸಿದ್ದರಾಮಾರಾಧ್ಯ, ನಾಗಭೂಷಣ ಆರಾಧ್ಯ, ಅರ್ಚಕ ತಿಬ್ಬಾದೇವಿ ಅವರ ನೇತೃತ್ವದಲ್ಲಿ ಮುತ್ತುರಾಯಸ್ವಾಮಿ ದೇವರಿಗೆ ಹೋಮ ಹವನ ಸೇರಿದಂತೆ ಧಾರ್ಮಿಕ ಪೂಜಾ ಕೈಂಕರ್ಯಗಳನ್ನು ವಿಧಿವಿಧಾನಗಳಿಂದ ನೆರವೇರಿಸಲಾಯಿತು.


ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮುತ್ತುರಾಯಸ್ವಾಮಿ ದೇವರ ದರ್ಶನ ಪಡೆದು ಗ್ರಾಮಸ್ಥರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಮುತ್ತುರಾಯಸ್ವಾಮಿ ನೆಲೆಗೊಂಡಿರುವ ಮಳವಳ್ಳಿ ತಾಲೂಕಿನಲ್ಲಿಯೇ ಒಗ್ಗಟ್ಟಿನಿಂದ ದೇವರ ಸೇವೆ ಮಾಡುತ್ತಿರುವುದು ಶ್ಲಾಘನೀಯ. ನಾಡಿಗೆ ಮಳೆಬೆಳೆಯಾಗಿ ಸಮೃದ್ಧಿಯಿಂದ ರೈತರು ಬದುಕುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.

ಬೆಳಗ್ಗೆಯಿಂದ ತಡರಾತ್ರಿಯವರೆವಿಗೂ ಅನ್ನ ಸಂತರ್ಪಣೆ ನಡೆಯಿತು. ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಪರ ಮಹೋತ್ಸವದ ಅಂಗವಾಗಿ ಗ್ರಾಮವನ್ನು ವಿದ್ಯುತ್ ದೀಪಾಲಾಂಕಾರ ಶೃಂಗರಿಸಲಾಗಿತ್ತು. ಜಾನಪದ ಕಲಾವಿದ ಶಿವಾರ ಉಮೇಶ್ ಅವರಿಂದ ಗೀತಗಾಯನ ನಡೆಯಿತು.