ವಿಜೃಂಭಣೆಯಿಂದ ನಡೆದ ಮಂಟೇಸ್ವಾಮಿ ದೀಪಾವಳಿ ಜಾತ್ರಾ ಮಹೋತ್ಸವ

| Published : Oct 24 2025, 01:00 AM IST

ವಿಜೃಂಭಣೆಯಿಂದ ನಡೆದ ಮಂಟೇಸ್ವಾಮಿ ದೀಪಾವಳಿ ಜಾತ್ರಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಗ್ರಾಮದ ಹೊರವಲಯದ ದೊಡ್ಡಕೆರೆ ಸಮೀಪ ಮಂಟೇಸ್ವಾಮಿ ಬಸಪ್ಪ, ಕಂಡಾಯ, ಬಿರುದು ದೇರಿದಂತೆ ವಿವಿಧ ದೇವತೆಗಳ ಹೂವು ಹೊಂಬಾಳೆ ಕಾರ್ಯಕ್ರಮವು ಭಕ್ತಿ ಪ್ರಧಾನವಾಗಿ ನೆರವೇರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಂಡಾಯ ಹಾಗೂ ಬಸವಪ್ಪ ಮೆರವಣಿಗೆ ರಾತ್ರಿಯಿಡಿ ನಡೆಯಿತು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಸಮೀಪದ ಮಠದ ಹೊನ್ನನಾಯಕನಹಳ್ಳಿಯಲ್ಲಿ ಮಂಟೇಸ್ವಾಮಿ ದೀಪಾವಳಿ ಜಾತ್ರಾ ಮಹೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.

ಮಂಟೇಸ್ವಾಮಿ ಕಪ್ಪಡಿ ರಾಚಪ್ಪಾಜಿ ಮಠದ ಮಠಾಧೀಪತಿ ವರ್ಚಸ್ವಿ ಸಿದ್ದಲಿಂಗರಾಜೇಅರಸ್ ಅವರ ದಿವ್ಯ ಸಾನಿಧ್ಯದಲ್ಲಿ ವಿಶ್ವಕರ್ಮ ಸಮುದಾಯದವರಿಂದ ನಡೆದ ದೀಪಾವಳಿ ಜಾತ್ರೆಯ ವಿಶೇಷವಾಗಿ ಮಂಟೇಸ್ವಾಮಿ, ಸಿದ್ದಪ್ಪಾಜಿ, ಬಸಪ್ಪ ದೇವರಿಗೆ ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳು ಮುಂಜಾನೆಯಿಂದಲೇ ಜರುಗಿತು.

ಗ್ರಾಮದ ಹೊರವಲಯದ ದೊಡ್ಡಕೆರೆ ಸಮೀಪ ಮಂಟೇಸ್ವಾಮಿ ಬಸಪ್ಪ, ಕಂಡಾಯ, ಬಿರುದು ದೇರಿದಂತೆ ವಿವಿಧ ದೇವತೆಗಳ ಹೂವು ಹೊಂಬಾಳೆ ಕಾರ್ಯಕ್ರಮವು ಭಕ್ತಿ ಪ್ರಧಾನವಾಗಿ ನೆರವೇರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಕಂಡಾಯ ಹಾಗೂ ಬಸವಪ್ಪ ಮೆರವಣಿಗೆ ರಾತ್ರಿಯಿಡಿ ನಡೆಯಿತು.

ದೀಪಾವಳಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಮಠದಿಂದ ನಿರಂತರವಾಗಿ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು. ಮಠಕ್ಕೆ ಬರುವ ಭಕ್ತರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮೂಲಭೂತ ಸೌಲಭ್ಯ ಕಲ್ಪಿಸಲಾಗಿತ್ತು. ಮಠದ ಆಡಳಿತ ಮಂಡಳಿಯಿಂದ ದೇವರ ಪ್ರಸಾದವನ್ನು ಮಠಾಧೀಪತಿ ವರ್ಚಸ್ವಿ ಸಿದ್ದಲಿಂಗರಾಜೇ ಅರಸು ವಿತರಿಸಿದರು. ಜಾತ್ರೆ ಯಶಸ್ವಿಗೆ ಶ್ರಮಿಸಿದ ದೇವಸ್ಥಾನದ ಸಿಬ್ಬಂದಿ ಗ್ರಾಮದ ಮುಖಂಡರು ಹಾಗೂ ಮಂಟೇಸ್ವಾಮಿ ದೇವರ ಕುಲಬಾಂದವರಿಗೆ ಅಭಿನಂದನೆ ಸಲ್ಲಿಸಲಾಯಿತು.

ವಿವಿಧ ಜಿಲ್ಲೆಗಳಿಂದ ನೀಲಗಾರರು, ವಿಶ್ವಕರ್ಮ ಸಮುದಾಯ ಸೇರಿದಂತೆ ಸಹಸ್ರರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಜಾತ್ರೆಯ ವೈಭವವನ್ನು ಕಣ್ತುಂಬಿಕೊಂಡರು. ಬಸವಪ್ಪ ಹಾಗೂ ಶ್ರೀಗಳ ಆರ್ಶಿವಾದ ಪಡೆದು ಧನ್ಯತೆ ಮೆರೆದರು.

ದೀಪಾವಳಿ ಹಬ್ಬದ ಅಂಗವಾಗಿ ಗ್ರಾಮದ ಉದ್ದಕ್ಕೂ ಹಸಿರು ತಳಿರು ತೋರಣದ ಜೊತೆಗೆ ಜಗಜಗಿಸುವ ವಿವಿಧ ಬಣ್ಣದ ವಿದ್ಯುತ್ ದೀಪಾಲಾಂಕಾರ ಮಾಡಲಾಗಿತ್ತು. ದೇವಸ್ಥಾನವನ್ನು ವಿವಿಧ ಹೂವುಗಳಿಂದ ಆಲಂಕರಿಸಲಾಗಿತ್ತು.