ಸಾರಾಂಶ
: ತಾಲೂಕಿನ ಕೆಸ್ತೂರು ಗ್ರಾಮದ ಆದಿಜಾಂಬರವರ ಬಡಾವಣೆಯಲ್ಲಿ ಕುರುಬನ ಕಟ್ಟೆ ಕಂಡಾಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಎರಡು ವರುಷಕ್ಕೊಮ್ಮೆ ಆದಿಜಾಂಬವರ ಬಡಾವಣೆಯಲ್ಲಿ ಕುರುಬನ ಕಟ್ಟೆಯ ಚೆನ್ನಯ್ಯ, ಲಿಂಗಯ್ಯರವರ ಕಂಡಾಯವನ್ನು ತರಿಸಿ ಹಬ್ಬವನ್ನು ಆಚರಿಸಲಾಗುತ್ತದೆ.
ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದ ಆದಿಜಾಂಬರವರ ಬಡಾವಣೆಯಲ್ಲಿ ಕುರುಬನ ಕಟ್ಟೆ ಕಂಡಾಯ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಎರಡು ವರುಷಕ್ಕೊಮ್ಮೆ ಆದಿಜಾಂಬವರ ಬಡಾವಣೆಯಲ್ಲಿ ಕುರುಬನ ಕಟ್ಟೆಯ ಚೆನ್ನಯ್ಯ, ಲಿಂಗಯ್ಯರವರ ಕಂಡಾಯವನ್ನು ತರಿಸಿ ಹಬ್ಬವನ್ನು ಆಚರಿಸಲಾಗುತ್ತದೆ.
ಶನಿವಾರ ರಾತ್ರಿ ಗ್ರಾಮದ ಈಶ್ವರ ದೇವಾಲಯದಲ್ಲಿ ಕಂಡಾಯಗಳನ್ನು ಹೊಂಬಾಳೆ, ವಿವಿಧ ಬಗೆಯ ಹೂಗಳಿಂದ ಶೃಂಗಾರಗೊಳಿಸಿ ಧೂಪ, ದೀಪಗಳಿಂದ ಪೂಜೆ ಸಲ್ಲಿಸಿದರು.ನಂತರ ಮಾರಿಗುಡಿ, ಮಂಟೇಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಮುಖ್ಯ ರಸ್ತೆಯ ಮೂಲಕ ಅದಿಜಾಂಬವರ ಬಡಾವಣೆವರೆಗೆ ಮಂಟೇಸ್ವಾಮಿ ಕಂಡಾಯಗಳನ್ನು ಮಂಗಳವಾದ್ಯ ಮತ್ತು ತಮಟೆ ಸದ್ದಿನೊಂದಿಗೆ ಮೆರವಣಿಗೆ ಮಾಡಲಾಯಿತು.
ರಸ್ತೆ ಉದ್ದಕ್ಕೂ ಹೆಂಗಳೆಯರು ನೀರು ಹಾಕಿ ರಂಗೋಲಿಗಳನ್ನು ಬಿಡಿಸಿದರು. ಹೂ, ಹಣ್ಣು, ಕಾಯಿ ಪೂಜೆಗಳನ್ನು ಮಾಡಿ ದೇವರನ್ನು ಸ್ಮರಿಸಿದರು.ಗ್ರಾಮವು ಸಂಪೂರ್ಣ ವಿವಿಧ ಬಗೆಯ ವಿದ್ಯುತ್ ದೀಪಗಳಿಂದ ಹಾಗೂ ಬಾಳೆ, ಮಾವಿನ ತೋರಣಗಳಿಂದ ಸಿಂಗಾರಗೊಂಡಿತು.
ಸಮುದಾಯದ ಯಜಮಾನ ಮರಪ್ಪ ಮಾತನಾಡಿ, ಮಂಟೇಸ್ವಾಮಿ, ಸಿದ್ದಪ್ಪಾಜಿ, ರಾಚಪ್ಪಾಜಿ, ಚೆನ್ನಾಜಮ್ಮ, ದೊಡ್ಡಮ್ಮತಾಯಿರವರ ಪರಂಪರೆಯು 16 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮಾಡಿ ಸಮ ಸಮಾಜವನ್ನು ನಿರ್ಮಾಣ ಮಾಡಬೇಕೆಂದು ಹೋರಾಡಿದರು. ಇಂದಿಗೂ ಕೂಡ ನೀಲಗಾರರು ಈ ಸಿದ್ಧಾಂತವನ್ನು ಜನಪದದ ಮೂಲಕ ಜನರಿಗೆ ತಿಳಿಸಿದ್ದಾರೆ.ಮಂಟೇಸ್ವಾಮಿ ಮತ್ತು ಮಹದೇಶ್ವರ ಮಹಾ ಕಾವ್ಯವು ಉತ್ತಮವಾದದ್ದು ಎಂದರು.
ಆದಿಜಾಂಬವರ ಸಮುದಾಯದ ಯಜಮಾನರಾದ ಚಾಮರಾಜು, ಮಹೇಶ್,ಚಾಮರಾಜ್, ನಿಂಗರಾಜು,ಸೋಮರಾಜ್, ನಿಂಗಣ್ಣ, ಗವಿನಿಂಗಯ್ಯ, ನೀಲಗಾರರು ಹಾಗೂ ಎಲ್ಲಾ ಜನಾಂಗದ ಯಜಮಾನರು, ಮುಖಂಡರು ಹಾಜರಿದ್ದರು.