ಸಾರಾಂಶ
ಶ್ರೀ ಮಂಟೇಸ್ಚಾಮಿ ಪರಂಪರೆಯು ಕಾಯಕ ಯೋಗಿಗಳ ಶಕ್ತಿಯಾಗಿದ್ದು, ಸಮಾಜದಲ್ಲಿ ಜನರು ಶಾಂತಿ, ಸಮಾನತೆ ಹಾಗೂ ಸಹಬಾಳ್ವೆಯಲ್ಲಿ ಬದುಕುವ ಸಂಕೇತವಾಗಿದೆ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ತಿಳಿಸಿದರು.
ಕರಿನಂಜನಪುರದಲ್ಲಿ ಮಂಟೇಸ್ವಾಮಿ ದೇಗುಲ ನಿರ್ಮಾಣಕ್ಕೆ ಭೂಮಿ ಪೂಜೆ ವೇಳೆ ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ
ಕನ್ನಡಪ್ರಭ ವಾರ್ತೆ, ಚಾಮರಾಜನಗರಶ್ರೀ ಮಂಟೇಸ್ಚಾಮಿ ಪರಂಪರೆಯು ಕಾಯಕ ಯೋಗಿಗಳ ಶಕ್ತಿಯಾಗಿದ್ದು, ಸಮಾಜದಲ್ಲಿ ಜನರು ಶಾಂತಿ, ಸಮಾನತೆ ಹಾಗೂ ಸಹಬಾಳ್ವೆಯಲ್ಲಿ ಬದುಕುವ ಸಂಕೇತವಾಗಿದೆ ಎಂದು ಹರವೆ ಮಠದ ಶ್ರೀ ಸರ್ಪಭೂಷಣ ಸ್ವಾಮೀಜಿ ತಿಳಿಸಿದರು.
ನಗರದ ಕರಿನಂಜನಪುರ ಬಡಾವಣೆಯಲ್ಲಿ ಸೋಮವಾರ ನಡೆದ ಶ್ರೀ ಮಂಟೇಸ್ಚಾಮಿ ದೇವರಗುಡ್ಡರ ದೇವಸ್ಧಾನ ಸೇವಾ ಟ್ರಸ್ಟಿನಿಂದ ಶ್ರೀ ಮಂಟೇಸ್ವಾಮಿ ದೇವಸ್ಥಾನದ ಭೂಮಿಪೂಜೆ ಕಾರ್ಯ ನೆರವೇರಿಸಿ ಅವರು ಮಾತನಾಡಿದರು.ಪ್ರಸ್ತುತ ಮಂಟೇಸ್ವಾಮಿ ಗುಡ್ಡರು ಮಂಟೇಸ್ಚಾಮಿ ಪರಂಪರೆಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವ ಸಾರ್ಥಕ ಕಾಯಕವನ್ನು ಮಾಡುತ್ತಿದ್ದಾರೆ. ಮಂಟೇಸ್ವಾಮಿ ಕಾಯಕ ಪರಂಪರೆಯನ್ನು ಅಪ್ಪಿಕೊಂಡಿರುವೆ. ರಾಚಪ್ಪಾಜಿ, ಸಿದ್ದಪ್ಪಾಜಿ ಮಂಟೇಸ್ವಾಮಿಯ ಶಿಷ್ಯರು. ಅವರು ಕಾಯಕ ಸಮಾಜದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕಾಯಕದ ಜೊತೆಗೆ ಧರ್ಮ ಧೀಕ್ಷೆ ಮತ್ತು ಬದುಕು ಶಕ್ತಿಯನ್ನು ನೀಡಿದ ದಾರ್ಶನಿಕರು. ಒಂದು ಶಕ್ತಿ ರೂಪವಾಗಿದ್ದರು ಎಂದು ಶ್ರೀಗಳು ಬಣ್ಣಿಸಿದರು.
ಇಂಥ ಪರಂಪರೆಯುಳ್ಳ ಮಂಟೇಸ್ವಾಮಿ ಗುಡ್ಡರು ಗ್ರಾಮದಲ್ಲಿ ಅವರ ಹೆಸರಿನ ದೇವಸ್ಥಾನ ನಿರ್ಮಾಣ ಮಾಡಲು ಸಂಕಲ್ಪ ಮಾಡಿರುವುದು ಸಂತಸ ತಂದಿದೆ. ಸಮಾಜದ ಎಲ್ಲಾ ವರ್ಗದ ಜನರು ಒಗ್ಗಟ್ಟಿನಿಂದ ಕಾಯಕ ನಿಷ್ಠೆಯಲ್ಲಿ ತೊಡಗುವಂತೆ ಆಶೀರ್ವದಿಸಿದರು.ಕಾರ್ಯಕ್ರಮದಲ್ಲಿ ಮಂಟೇಸ್ವಾಮಿ ದೇವಾಲಯಕ್ಕೆ ಸ್ಥಳ ದಾನ ಮಾಡಿದ ಶಿವಮಲ್ಲಪ್ಪ ಹಾಗೂ ಸುಬ್ರಹ್ಮಣ್ಯ ರವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೂಡ್ಲೂರು ಶ್ರೀ ಮಂಟೇಸ್ವಾಮಿ ದೇವಸ್ಥಾನದ ಆದಿ ಮಠದ ಸತ್ಯಪ್ಪ, ಜೆಎಸ್‌ಎಸ್ ನಿವೃತ್ತ ಅಧೀಕ್ಷಕ ಚಂದ್ರಶೇಖರ್, ನಗರಸಭಾ ಸದಸ್ಯ ಮನೋಜ್‌ಪಟೇಲ್, ಪ್ರೊ. ಮಲ್ಲೇಶಪ್ಪ, ಗೌಡಿಕೆ ಲಿಂಗಣ್ಣ, ಗೌಡಿಕೆ ಕುಮಾರಸ್ವಾಮಿ, ಶ್ರೀ ಮಂಟೇಸ್ವಾಮಿ ದೇವರಗುಡ್ಡರ ದೇವಸ್ಥಾನದ ಸೇವಾ ಟ್ರಸ್ಟ್ ನ ಗೌರವ ಅಧ್ಯಕ್ಷ ಕುಮಾರ್, ಅಧ್ಯಕ್ಷ ಕೆ.ವಿ. ನಾಗರಾಜು, ಷಡಕ್ಷರ ಸ್ವಾಮೀಜಿ, ಕಾರ್ಯದರ್ಶಿ ಚಿನ್ನಸ್ವಾಮಿ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.