ಸಾರಾಂಶ
ಹೊಸಪೇಟೆ: ಹಂಪಿಯ ತುಂಗಭದ್ರಾ ನದಿ ತೀರದಲ್ಲಿನ ಶ್ರೀ ನರಹರಿ ತೀರ್ಥರ ಬೃಂದಾವನ ಸನ್ನಿಧಿಯಲ್ಲಿ ಪೂಜಾ ಕೈಂಕರ್ಯಗಳಿಗೆ ಕೆಳಹಂತದ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನು ಕರ್ನಾಟಕ ಉಚ್ಚ ನ್ಯಾಯಾಲಯ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಸಮರ್ಪಣೋತ್ಸವ ನೆರವೇರಿಸಿದರು.
ಹಂಪಿ ಶ್ರೀ ನರಹರಿ ತೀರ್ಥರ ಸನ್ನಿಧಿಯಲ್ಲಿ ಚತುರ್ಯುಗಮೂರ್ತಿ- ಬ್ರಹ್ಮಕರಾರ್ಚಿತ ಶ್ರೀಮನ್ ಮೂಲರಾಮಚಂದ್ರಾದಿ ಸಂಸ್ಥಾನ ದೇವರುಗಳ ಪೂಜೆಯನ್ನು ಭಾನುವಾರ ನೆರವೇರಿಸಿ ಭಕ್ತರನ್ನುದ್ದೇಶಿ ಆಶೀರ್ವಚನ ನೀಡಿದರು. ಪ್ರತಿಬಂಧಕಾಜ್ಞೆ ತೆರವು ನಿಮಿತ್ತ ಶ್ರೀಮಠದ ಪೂರ್ವಿಕ ಗುರುಗಳಾದ ಶ್ರೀ ನರಹರಿ ತೀರ್ಥರ ಸನ್ನಿಧಿಯಲ್ಲಿ ಸಮರ್ಪಣೆ ಮಾಡಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಶ್ರೀ ನರಹರಿತೀರ್ಥರ ಬೃಂದಾವನಕ್ಕೆ ವಿಶೇಷವಾಗಿ ಫಲ ಪಂಚಾಮೃತಾಭಿಷೇಕ ನೆರವೇರಿಸಿದರು. ಬಳಿಕ ಬೃಂದಾವನದ ಮುಂಭಾಗದಲ್ಲಿ ಬಂಗಾರದ ಪೀಠದಲ್ಲಿ ಶ್ರೀಮೂಲರಾಮ ದೇವರ ಸಂಸ್ಥಾನ ಪೂಜೆ ನೆರವೇರಿಸಿದರು. ಇದಕ್ಕೂ ಮೊದಲು ಸನ್ನಿಧಿಯಲ್ಲಿ ಶ್ರೀಮಠದ ಪಂಡಿತರು, ಪುರೋಹಿತರಿಂದ ಹೋಮ, ಹವನ ಹಾಗೂ ಕುಂಬಾಭಿಷೇಕ ನಡೆಸಲಾಯಿತು. ಶ್ರೀಗಳವರು ಆಗಮಿಸಿದ ಭಕ್ತರಿಗೆ, ಶಿಷ್ಯರಿಗೆ ಮುದ್ರಾಧಾರಣೆ, ಫಲ ಮಂತ್ರಾಕ್ಷತೆ ನೀಡಿದರು.
ಈ ಸಂದರ್ಭದಲ್ಲಿ ಪಂಡಿತರಿಂದ ವಿಶೇಷ ಉಪನ್ಯಾಸ -ವಿದ್ಯಾರ್ಥಿಗಳಿಂದ ಗ್ರಂಥಗಳ ಅನುವಾದ, ಭಜನೆ, ಪಾರಾಯಣ ನಡೆಯಿತು. ಶ್ರೀಮಠದ ಪ್ರಮುಖರಾದ ಡಾ. ವಾದಿರಾಜಾಚಾರ್ಯ, ಬಂಡಿ ಶ್ಯಾಮಾಚಾರ್ಯ, ಕನಕಾಚಾಲಾರ್ಯ, ದ್ವಾರಕನಾಥ ಆಚಾರ್ಯ, ಅಪ್ರಮೇಯಾಚಾರ್ಯ, ವೆಂಕಟೇಶ್ ಆಚಾರ್ಯ, ಪ್ರಸನ್ನಾಚಾರ್ಯ, ಮಠಾಧಿಕಾರಿಗಳಾದ ಭೀಮಸೇನಾಚಾರ್ಯ, ಪವನಾಚಾರ್ಯ, ಸುಮಂತ ಕುಲಕರ್ಣಿ, ಡಾಣಾಪುರ ಶ್ರೀನಿವಾಸ್, ಡಾಣಾಪುರ ವಿಜಯ್, ಗುರುರಾಜ್ ದಿಗ್ಗಾವಿ, ಗುರುರಾಜ್ ಶಿರೇಕೊಳ್ಳ, ಗುಂಜಳ್ಳಿ ಟೀಕಾಚಾರ್ಯ ಇತರರಿದ್ದರು.ಹಂಪಿಯ ತುಂಗಭದ್ರಾ ನದಿ ತೀರದಲ್ಲಿನ ಶ್ರೀ ನರಹರಿ ತೀರ್ಥರ ಬೃಂದಾವನ ಸನ್ನಿಧಿಯಲ್ಲಿ ಭಾನುವಾರ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀಸುಬುಧೇಂದ್ರ ತೀರ್ಥ ಸ್ವಾಮೀಜಿ ಸಮರ್ಪಣೋತ್ಸವ ನೆರವೇರಿಸಿದರು.