Manual scavengers warn of strike if demand not met

ದಾವಣಗೆರೆ: ಜಿಲ್ಲೆಯಲ್ಲಿ ಗುರುತಿಸಲಾಗಿರುವ 402 ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಿಗೆ ಕೇಂದ್ರ ಸರ್ಕಾರದ ಆದೇಶದಂತೆ ಹಾಗೂ 2013ರ ಕಾಯ್ದೆಯನ್ವಯ ಮೂಲ ಸೌಲಭ್ಯಗಳನ್ನು ಒದಗಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಅಥವಾ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಹೋರಾಟ ನಡೆಸುವುದಾಗಿ ಜಿಲ್ಲಾ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಕ್ಷೇಮಾಭಿವೃದ್ಧಿ ಸಂಘ ಮತ್ತು ಜಿಲ್ಲಾ ಸಫಾಯಿ ಕರ್ಮಚಾರಿ ಕಾವಲು ಸಮಿತಿ ಎಚ್ಚರಿಸಿದೆ.ಕಾಯ್ದೆಯ ಪ್ರಕಾರ ಗುರುತಿಸಲಾದ ಕಾರ್ಮಿಕರಿಗೆ ಜಾಗ ಖರೀದಿ ಮಾಡಿ 20 -30 ಅಳತೆಯ ಮನೆಗಳನ್ನು ನಿರ್ಮಿಸಿ ಕೊಡಬೇಕು ಹಾಗೂ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂಬ ಆದೇಶವಿದ್ದರೂ ಜಿಲ್ಲೆಯಲ್ಲಿ ಇದುವರೆಗೆ ಜಾರಿಯಾಗಿಲ್ಲ. ಈ ಹಿನ್ನೆಲೆಯಲ್ಲಿ ಆ. 24ರಂದು ದಾವಣಗೆರೆ ಜಿಲ್ಲೆಗೆ ಆಗಮಿಸುತ್ತಿರುವ ರಾಜ್ಯ ಮಟ್ಟದ ಜನ ಜಾಗೃತಿ ಜಾಥಾದ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ. 10 ದಿನಗಳಲ್ಲಿ ನಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಠಿಣ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಮಿತಿಯ ಜಿಲ್ಲಾ ಸಂಚಾಲಕ ಎನ್. ಹುಚ್ಚಂಗಪ್ಪ, ಎನ್.ವಾಸುದೇವ್, ಎನ್.ಮಂಜುನಾಥ್, ಎಚ್.ಮಂಜಮ್ಮ, ಭಾಗ್ಯಮ್ಮ, ವೈ. ರಘುಪತಿ, ರಾಮಪ್ಪ, ಶ್ರೀನಿವಾಸ್, ರಾಜು, ರಮೇಶ್, ಅಭಿ, ಚೇತನ್, ಹನುಮಕ್ಕ, ಓಬಳಮ್ಮ ಮತ್ತು ಜ್ಯೋತಿ ಎಚ್ಚರಿಕೆ ರವಾನಿಸಿದ್ದಾರೆ.