ಸಾರಾಂಶ
ಹುಬ್ಬಳ್ಳಿ: ವಿದೇಶಗಳಲ್ಲಿ ಭಾರತೀಯ ಆಹಾರ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ಸ್ಥಳೀಯ ಉತ್ಪಾದಕರು ತಮ್ಮ ಉತ್ಪನ್ನಗಳ ಪ್ಯಾಕಿಂಗ್ ವ್ಯವಸ್ಥೆ ಅಳವಡಿಸಿಕೊಳ್ಳುವ ಜತೆಗೆ ರಫ್ತು ಮಾಡುವ ತಂತ್ರ ಅಳವಡಿಸಿಕೊಳ್ಳಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ವತಿಯಿಂದ ಇಲ್ಲಿನ ಹೊಸ ನ್ಯಾಯಾಲಯ ಸಂಕೀರ್ಣ ಕಟ್ಟಡ ಹಿಂಭಾಗದ ಕಲ್ಲೂರ ಬಡಾವಣೆ ಮೈದಾನದಲ್ಲಿ 5 ದಿನ ಹಮ್ಮಿಕೊಂಡಿದ್ದ ಸ್ವದೇಶಿ ಮೇಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಗತ್ತಿನಲ್ಲಿಯೇ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ದೇಶ ಭಾರತ. ಆದರೆ, ಜಗತ್ತಿನ ವಿದೇಶಿ ಕಂಪನಿಗಳು ಇಲ್ಲಿನ ಗ್ರಾಹಕರನ್ನು ಕೇವಲ ಲಾಭಕ್ಕಾಗಿ ಎದುರು ನೋಡುತ್ತದೆ ಮತ್ತು ನಮ್ಮ ಸ್ಥಳೀಯ ಉತ್ಪನ್ನಗಳನ್ನು ಕೊನೆಗಾಣಿಸಲು ಯತ್ನಿಸುತ್ತವೆ. ಈ ನಿಟ್ಟಿನಲ್ಲಿ ನಮ್ಮ ಜನರು ಸ್ಥಳೀಯ ಉತ್ಪನ್ನ ಬಳಕೆಗೆ ಆದ್ಯತೆ ನೀಡಿ, ಸ್ಥಳೀಯ ಉತ್ಪಾದಕರನ್ನು ಪ್ರೋತ್ಸಾಹಿಸಬೇಕು ಎಂದರು.
ಮೇಕ್ ಇನ್ ಇಂಡಿಯಾ, ವಿದೇಶಿ ನೇರ ಹೂಡಿಕೆಯ ಪ್ರಯೋಜನ ಪಡೆದು ಉತ್ಪಾದಕರು ಉತ್ಪನ್ನಗಳನ್ನು ತಯಾರಿಸಬೇಕು. ಉತ್ಪಾದನೆಯ ತಂತ್ರಜ್ಞಾನವನ್ನು ಇತರರಿಗೆ ತಿಳಿಸಬೇಕು. ಕೆಲ ವರ್ಷಗಳ ಹಿಂದೆ ಭಾರತದ 4000 ಉತ್ಪನ್ನಗಳಿಗೆ ಮಾತ್ರ ಪೇಟೆಂಟ್‌ಗಳಿದ್ದವು. ಇದೀಗ 1 ಲಕ್ಷಕ್ಕೂ ಅಧಿಕ ಉತ್ಪನ್ನಗಳು ಪೇಟೆಂಟ್ ಹೊಂದಿವೆ ಎಂದು ಜೋಶಿ ತಿಳಿಸಿದರು.
ವಿಶ್ವದಲ್ಲಿ ವಾಣಿಜ್ಯ ಯುದ್ಧ ನಡೆಯುತ್ತಿದೆ. ಯಾವುದೇ ಉತ್ಪನ್ನಕ್ಕಾಗಲಿ ಮುಂದುವರಿದ ದೇಶಗಳು ಗುಣಮಟ್ಟ ನಿರ್ಧರಿಸುತ್ತಿದ್ದವು. ಇದೀಗ ಭಾರತದ ನೇತೃತ್ವದಲ್ಲಿ ಗುಣಮಟ್ಟ ನಿರ್ಧರಿಸಬೇಕಿರುವುದು ಹೆಮ್ಮೆಯ ವಿಷಯ. ಅಸಂಘಟಿತ ಉತ್ಪಾದಕರಿಗೆ ಪ್ರೋತ್ಸಾಹ ನೀಡಲು ಸ್ವದೇಶಿ ಜಾಗರಣ ಮಂಚ್ ಸ್ವದೇಶಿ ಮೇಳ ಆಯೋಜಿಸಿದ್ದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಸಂಸದ ಜಗದೀಶ ಶೆಟ್ಟರ್ ಮಾತನಾಡಿ, ಸ್ವದೇಶಿ ಮೇಳಗಳ ಮೂಲಕ ಸ್ಥಳೀಯ ಜನರಿಂದಲೇ ವಸ್ತುಗಳನ್ನು ಖರೀದಿಸಬೇಕೆನ್ನುವ ಜಾಗೃತಿ ಮೂಡುತ್ತದೆ. ಭಾರತದಲ್ಲಿ ತಯಾರಿಸುವ ವಸ್ತುಗಳು ಗುಣಮಟ್ಟ ಕಾಯ್ದುಕೊಂಡಿದ್ದರೂ ವಿದೇಶಿ ವಸ್ತುಗಳ ಮೇಲಿನ ವ್ಯಾಮೋಹ ನಮ್ಮಿಂದ ದೂರವಾಗುತ್ತಿಲ್ಲ. ಜಾಗತಿಕ ತೆರೆದ ಮಾರುಕಟ್ಟೆಯಿಂದಾಗಿ ಸ್ವದೇಶಿ ಉತ್ಪನ್ನ ತಯಾರಿಕರಿಗೆ ಹೊಡೆತ ಬಿದ್ದಿತು. ಕಳೆದ ಹತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳೀಯವಾಗಿಯೇ ಉತ್ಪನ್ನಗಳನ್ನು ತಯಾರಿಸಲು ಹೆಚ್ಚಿನ ಒತ್ತು ನೀಡಿದ್ದು, ಇದಕ್ಕಾಗಿಯೇ ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.ವಿಭವ ಇಂಡಸ್ಟ್ರೀಸ್ ಮುಖ್ಯಸ್ಥ ನಂದಕುಮಾರ ಮಾತನಾಡಿದರು.
ಕಲಬುರಗಿ ಕೇಂದ್ರೀಯ ವಿವಿ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಸತು ಲಿಂಗಮೂರ್ತಿ ಸಮಾರೋಪ ನುಡಿಗಳನ್ನಾಡಿದರು. ಶಾಸಕ ಎಂ.ಆರ್. ಪಾಟೀಲ, ಸ್ವದೇಶಿ ಮೇಳ ಸಂಯೋಜಕ ಜಯತೀರ್ಥ ಕಟ್ಟಿ, ಸಂಘಟಕ ಸಂದೀಪ ಬೂದಿಹಾಳ, ಸಂಚಾಲಕಿ ರಚಿತಾ ಆಕಳವಾಡಿ, ಸುಭಾಷಸಿಂಗ್ ಜಮಾದಾರ ಸೇರಿದಂತೆ ಹಲವರಿದ್ದರು.