ಸಾರಾಂಶ
ಹುಬ್ಬಳ್ಳಿ:
ಮನುವಾದ, ಜಾತಿವಾದ ಮತ್ತು ಮೌಢ್ಯಗಳ ವಿರುದ್ಧ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಐತಿಹಾಸಿಕ ಹೋರಾಟದ ಮನುಸ್ಮೃತಿ ದಹನದ ಅಂಗವಾಗಿ ಬುಧವಾರ ಮನುಸ್ಮೃತಿ ಪುಸ್ತಕವನ್ನು ದಹಿಸುವ ಮೂಲಕ ಪ್ರತಿಭಟಿಸಲಾಯಿತು.ಇಲ್ಲಿನ ದುರ್ಗದಬೈಲ್ ವೃತ್ತದಲ್ಲಿ ಸಮತಾ ಸೇನಾ ಕರ್ನಾಟಕ, ಬೀದಿಬದಿ ವ್ಯಾಪಾರಸ್ಥರ ಸಂಘ, ಚರ್ಮಕಾರರ ಸಂಘ, ಮಹಿಳಾ ಸಂಘ, ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಈ ಕಾರ್ಯಕ್ರಮ ಜರುಗಿತು.ಮನುಸ್ಮೃತಿಯು ಜನರಲ್ಲಿ ಮನುವಾದ, ಜಾತಿವಾದ, ಮೌಢ್ಯಗಳನ್ನು ಬಿತ್ತುವುದಾಗಿದೆ. ಇದರ ವಿರುದ್ಧ ಅಂಬೇಡ್ಕರ್ ಹೋರಾಡಿದ್ದಾರೆ. ದೇಶದ ಎಲ್ಲ ವರ್ಗದ, ಜಾತಿ, ಧರ್ಮದ ಜನರಿಗೆ ನ್ಯಾಯ, ಸಮರ್ಪಕವಾಗಿ ಸರ್ಕಾರದ ಸೌಲಭ್ಯಗಳು ದೊರೆಯಬೇಕು ಎಂಬ ಸದುದ್ದೇಶದಿಂದ ದೇಶಕ್ಕೆ ಅತ್ಯುತ್ತಮವಾಗಿರುವ ಸಂವಿಧಾನ ರಚಿಸಿ ಕೊಟ್ಟಿದ್ದಾರೆ. ನಾವೆಲ್ಲರೂ ಸಂವಿಧಾನದ ಅಂಶ ಪಾಲಿಸುವುದರೊಂದಿಗೆ ಜಾತಿ, ಮತ, ಪಂಥವೆನ್ನದೇ ಸಮಬಾಳು ನಡೆಸಬೇಕು. ಅಂದಾಗ ಮಾತ್ರ ಅಂಬೇಡ್ಕರ್ ಕನಸು ನನಸಾಗಲು ಸಾಧ್ಯವಾಗಲಿದೆ. ಇದಾಗಬೇಕಾದಲ್ಲಿ ಮನುಸ್ಮೃತಿಯಲ್ಲಿನ ಅಂಶಗಳನ್ನು ಪ್ರತಿಯೊಬ್ಬರೂ ಧಿಕ್ಕರಿಸಬೇಕು ಎಂದು ಸಂಘಟನೆಗಳ ಮುಖಂಡರು ಕರೆ ನೀಡಿದರು. ನಂತರ ಮನುಸ್ಮೃತಿ ಪುಸ್ತಕವನ್ನು ದಹಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಸಮತಾ ಸೇನಾ ಕರ್ನಾಟಕದ ಗುರುನಾಥ ಉಳ್ಳಿಕಾಶಿ, ಬಲ್ಲಾ ಶೇಟ್, ಸುವರ್ಣಾ ಕಲ್ಲಕುಂಟ್ಲ, ಬಸವರಾಜ ತೇರದಾಳ, ಮಂಜಣ್ಣ ಉಳ್ಳಿಕಾಶಿ, ರವಿ ಕದಂ, ಪ್ರವೀಣ ನಡಕಟ್ಟಿ, ರಾಜು ಮರಗುದ್ದಿ, ಬಸವರಾಜ ಕಲಾದಗಿ, ಬಾಬರ ಖೋಜೆ, ಶಂಕರ ಕುದುರಿ, ಇಮ್ತಯಾಜ ಬಿಜಾಪುರ, ಅಶೋಕ ಕಾಶೇನವರ, ವಿನಾಯಕ ಅಮರಗೋಳ, ಫಾರೂಖ ಶೇಖ, ವಾಸೀಮಅಕ್ರಮ ಪಾನವಾಲೆ, ಬಾಷಾ ಸಾಹೇಬ್, ಶಫಿ ಯಾದಗಿರಿ, ಇಝಾಝ ಉಪ್ಪಿನ ಸೇರಿದಂತೆ ಹಲವರಿದ್ದರು.