ಸಾರಾಂಶ
ಮುನಿಸನ್ನು ಬದಿಗಿರಿಸಿ ಒಂದಾದ ದಂಪತಿಗಳು
ಕನ್ನಡಪ್ರಭ ವಾರ್ತೆ ಚಾಮರಾಜನಗರಚಾಮರಾಜನಗರ, ಕೊಳ್ಳೇಗಾಲ, ಯಳಂದೂರು, ಗುಂಡ್ಲುಪೇಟೆ ನ್ಯಾಯಾಲಯಗಳಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಕಳೆದ ಹಲವು ವರ್ಷಗಳಿಂದಲೂ ನ್ಯಾಯಾಲಯದಲ್ಲಿದ್ದ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಕಕ್ಷಿದಾರರು ತಮ್ಮ ವಕೀಲರ ಜೊತೆಗೆ ನ್ಯಾಯಾಲಯಕ್ಕೆ ಆಗಮಿಸಿ ನ್ಯಾಯಾಧೀಶರ ಸಮ್ಮುಖದಲ್ಲಿ ರಾಜೀ ಸಂಧಾನ ಮಾಡಿಕೊಂಡು ತಮ್ಮ ಪ್ರಕರಣಗಳನ್ನು ಮುಕ್ತಾಯಗೊಳಿಸಿಕೊಂಡರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಎಸ್.ಭಾರತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಧರ್, ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಕೃಷ್ಣ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ದೊಡ್ಡಮೋಳೆ ರಂಗಸ್ವಾಮಿ ಸೇರಿದಂತೆ ಇತರರು ಜಿಲ್ಲಾ ನ್ಯಾಯಾಲಯದಲ್ಲಿರುವ ವಿವಿಧ ನ್ಯಾಯಾಲಯಗಳಿಗೆ ತೆರಳಿ ಇತ್ಯರ್ಥವಾಗಿರುವ ಪ್ರಕರಣಗಳ ಸಂಬಂಧ ಮಾಹಿತಿ ಪಡೆದುಕೊಂಡರು.ಒಂದಾದ ದಂಪತಿಗಳು:
ಕಳೆದ ಹಲವು ವರ್ಷಗಳಿಂದಲೂ ಜೀವನಾಂಶ, ವಿಚ್ಛೇದನಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದ ಮೂರು ದಂಪತಿಗಳು ರಾಜೀ ಸಂಧಾನದ ಮೂಲಕ ಒಂದಾದರು.ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಪ್ರಧಾನ ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿ ನ್ಯಾಯಾಲಯದಲ್ಲಿ ಮೂರು ದಂಪತಿಗಳು ತಮ್ಮ ಹಲವು ವರ್ಷಗಳ ಮುನಿಸನ್ನು ಬದಿಗಿರಿಸಿ ಒಂದಾದರು. ತಮ್ಮ ವಕೀಲರಗಳ ಮೂಲಕ ನ್ಯಾಯಾಲಯಕ್ಕೆ ಆಗಮಿಸಿದ ದಂಪತಿಗಳು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವೆಂಕಟೇಶ್ ಸಮ್ಮುಖದಲ್ಲಿ ರಾಜೀ ಸಂಧಾನದ ಮೂಲಕ ತಮ್ಮ ಹಲವು ವರ್ಷಗಳ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡರು.
ಚಾಮರಾಜನಗರದ ಗಾಳೀಪುರ ಬಡಾವಣೆಯ ನಿವಾಸಿಗಳಾದ ಸುಮೇರಬಾನು ಹಾಗೂ ಅಯಾಜ್ ಅಹಮ್ಮದ್ ದಂಪತಿ ಕಳೆದ ೬ ವರ್ಷಗಳ ಹಿಂದೆ ವಿಚ್ಛೇದನ ಹಾಗೂ ಜೀವನಾಂಶಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಸುಮೇರ ಬಾನು ಪರ ವಕೀಲರಾದ ಕೆ.ಎನ್.ಮಂಜುಳಾ ಹಾಗೂ ಅಯಾಜ್ ಅಹಮ್ಮದ್ ಪರ ವಕೀಲ ಪ್ರಸನ್ನಕುಮಾರ್ ರಾಜೀ ಸಂಧಾನ ಮಾಡುವ ಮೂಲಕ ದಂಪತಿಯನ್ನು ಒಂದುಗೂಡಿಸಿದರು. ಇಬ್ಬರು ಒಂದಾಗಿ ಜೀವನ ನಡೆಸುವುದಾಗಿ ತಿಳಿಸಿ ನ್ಯಾಯಾಧೀಶರ ಸಮ್ಮುಖದಲ್ಲಿ ೬ ವರ್ಷಗಳ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡರು.ಚಾಮರಾಜನಗರದ ಗಾಳೀಪುರ ಬಡಾವಣೆಯ ಮತ್ತೊಂದು ದಂಪತಿ ಕೂಡ ರಾಜೀ ಸಂಧಾನದ ಮೂಲಕ ಒಂದಾದರು. ಬಡಾವಣೆಯ ನಿವಾಸಿಗಳಾದ ಶಫೀ ಉಲ್ಲಾ ಹಾಗೂ ಶಿಫಾನಬಾನು ಎಂಬ ದಂಪತಿ ಕಳೆದ ಒಂದು ವರ್ಷಗಳಿಂದಲೂ ಬೇರೆ ಬೇರೆ ವಾಸ ಮಾಡುತ್ತಿದ್ದರು. ಕಳೆದ ಒಂದು ವರ್ಷದ ಹಿಂದೆ ಶಿಫಾನಬಾನು ಎಂಬುವವರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮೊರೆ ಹೋಗಿ ತನ್ನ ಗಂಡನಿಂದ ಜೀವನಾಂಶ ಕೊಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಪ್ರಾಧಿಕಾರದ ವತಿಯಿಂದ ಪ್ಯಾನಲ್ ವಕೀಲರಾದ ಪುಟ್ಟರಾಚಯ್ಯ ಅವರನ್ನು ನೇಮಕ ಮಾಡಲಾಗಿತ್ತು. ಶಫೀ ಉಲ್ಲಾ ಹಾಗೂ ಶಿಫಾನಬಾನು ಅವರ ನಡುವೆ ಮೂಡಿದ್ದ ಒಡಕನ್ನು ಬಗೆಹರಿಸುವ ಮೂಲಕ ರಾಜೀ ಮಾಡಿಸಿ ಮತ್ತೆ ದಂಪತಿ ಒಂದಾಗುವಂತೆ ನ್ಯಾಯಾಧೀಶರ ಸಮ್ಮುಖದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಲಾಯಿತು.
ಚಾಮರಾಜನಗರ ತಾಲೂಕಿನ ಬಸವಾಪುರ ಗ್ರಾಮದ ನಿವಾಸಿಗಳಾದ ನೇತ್ರಾವತಿ ಎಂಬುವವರು ಕಳೆದ ೨ ವರ್ಷಗಳ ಹಿಂದೆ ತಮ್ಮ ಗಂಡ ಚಂದ್ರಶೇಖರ್ ಅವರಿಂದ ಜೀವನಾಂಶ ಕೊಡಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದಲ್ಲಿದ್ದ ಪ್ರಕರಣವನ್ನು ದಂಪತಿ ಇತ್ಯರ್ಥಪಡಿಸಿಕೊಳ್ಳುವ ಮೂಲಕ ಮತ್ತೆ ಒಂದಾದರು.