ಸಾರಾಂಶ
ಭೂಗತ ಪಾತಕಿ ರವಿ ಪೂಜಾರಿ ಖುಲಾಸೆಗೊಳಿಸಿ ನ್ಯಾಯಾಲಯ ತೀರ್ಪು
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನಲ್ಲಿ ಭೂಗತ ಪಾತಕಿ ರವಿ ಪೂಜಾರಿಯ ವಿರುದ್ದ ದಾಖಲಾಗಿದ್ದ ಬಿಜೈ ರಾಜಾ ಕೊಲೆ ಪ್ರಕರಣದಲ್ಲಿ ರವಿ ಪೂಜಾರಿಯನ್ನು ಖುಲಾಸೆಗೊಳಿಸಿ ಮಂಗಳೂರಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.2012 ನೇ ಇಸವಿಯಲ್ಲಿ ನಗರದ ಫಳ್ನೀರ್ ನ ಕಾಯಿನ್ ಬೂತ್ ಬಳಿ ರವಿ ಪೂಜಾರಿಯು ಒಳಸಂಚು ನಡೆಸಿ ಶೈಲೇಶ್ ರಾಜಾ ಅಲಿಯಾಸ್ ಬಿಜೈ ರಾಜಾನನ್ನು ತಲವಾರಿನಿಂದ ಕಡಿದು ಗಂಭೀರವಾಗಿ ಗಾಯಗೊಳಿಸಿ ಕೊಲೆ ನಡೆದಿತ್ತು. ಈ ಬಗ್ಗೆ ರವಿ ಪೂಜಾರಿ ಮತ್ತು ಆತನ ಸಹಚರರ ವಿರುದ್ಧ ಮಂಗಳೂರಿನ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಿ ರವಿ ಪೂಜಾರಿ ಮತ್ತು ಆತನ ಸಹಚರರ ಮೇಲೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ರವಿ ಪೂಜಾರಿಯನ್ನು 2021ರಲ್ಲಿ ಸೆನೆಗಲ್‌ನಲ್ಲಿ ಬಂಧಿಸಿದ್ದು, ನಂತರ ಭಾರತಕ್ಕೆ ಹಸ್ತಾಂತರಿಸಲಾಗಿತ್ತು. ಬಳಿಕ ಆತನ ವಿರುದ್ಧ ದಾಖಲಾದ ಎಲ್ಲ ಪ್ರಕರಣಗಳಲ್ಲಿ ಪೊಲೀಸರು ಹೆಚ್ಚುವರಿ ತನಿಖೆ ನಡೆಸಿ ಹೆಚ್ಚುವರಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ರವಿಪೂಜಾರಿ ವಿರುದ್ಧ ದಾಖಲಾದ ಎರಡು ಪ್ರಕರಣಗಳಲ್ಲಿ ಮಂಗಳೂರಿನ ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ಜಡ್ಜ್ ಹಾಗೂ ಒಂದು ಪ್ರಕರಣದಲ್ಲಿ ಜೆ.ಎಂ.ಎಫ್.ಸಿ. ನ್ಯಾಯಾಲಯ ಸೇರಿ ಒಟ್ಟು 4 ಪ್ರಕರಣಗಳಲ್ಲಿ ರವಿ ಪೂಜಾರಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ. ಬಿಜೈ ರಾಜಾ ಕೊಲೆ ಪ್ರಕರಣಗಳಲ್ಲಿ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಅವರು ರವಿ ಪೂಜಾರಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿರುತ್ತಾರೆ.ರವಿ ಪೂಜಾರಿ ವಿರುದ್ಧ ಹಲವು ಪ್ರಕರಣಗಳು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ತನಿಖೆಗೆ ಬಾಕಿ ಇರುತ್ತದೆ. ರವಿ ಪೂಜಾರಿ ಪರವಾಗಿ ಮಂಗಳೂರಿನ ಖ್ಯಾತ ವಕೀಲರಾದ ಅರುಣ್ ಬಂಗೇರ ಮತ್ತು ರಿಹಾನಾ ಪರ್ವೀನ್ ವಾದಿಸಿದ್ದರು.