ಜ್ಯೋತಿಷ್ಯಕ್ಕೆ ಅನೇಕ ಆಯಾಮ: ರಾಘವೇಶ್ವರ ಶ್ರೀ

| Published : Sep 06 2024, 01:05 AM IST

ಸಾರಾಂಶ

ಭಾರತೀಯ ಕಾಲಗಣನೆಯ ಅಂಶಗಳಾದ ತಿಥಿ, ವಾರ, ನಕ್ಷತ್ರ, ಯೋಗ, ಕರಣ ಹೀಗೆ ಪ್ರತಿಯೊಂದೂ ನಮ್ಮ ಜೀವನಕ್ಕೆ ಹತ್ತಿರವಾದವುಗಳು ಎಂದು ರಾಘವೇಶ್ವರ ಶ್ರೀಗಳು ತಿಳಿಸಿದರು.

ಗೋಕರ್ಣ: ಜ್ಯೋತಿಷ್ಯಕ್ಕೆ ಹಲವು ಆಯಾಮಗಳಿವೆ. ಖಗೋಳವನ್ನು ವಿಶ್ಲೇಷಿಸುವ ವಿವಿಧ ವಿಧಗಳನ್ನು ನಮ್ಮ ಪೂರ್ವಜರು ಕಂಡುಕೊಂಡಿದ್ದರು. ಅಂಥ ಅಪೂರ್ವ ವಿಜ್ಞಾನವನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳುವುದು ಅಗತ್ಯ ಎಂದು ರಾಘವೇಶ್ವರ ಸ್ವಾಮೀಜಿ ನುಡಿದರು.ಅಶೋಕೆಯ ಗುರುದೃಷ್ಟಿಯಲ್ಲಿ ಚಾತುರ್ಮಾಸ ವ್ರತ ಕೈಗೊಂಡಿರುವ ಶ್ರೀಗಳು 46ನೇ ದಿನವಾದ ಬುಧವಾರ ಉಪ್ಪಿನಂಗಡಿ ಮಂಡಲದ ಬೆಳ್ಳಾರೆ, ಪಂಜ, ಚೊಕ್ಕಾಡಿ, ಪುತ್ತೂರು, ದರ್ಬೆ, ಬೆಟ್ಟಂಪಾಡಿ ವಲಯಗಳ ಭಕ್ತರ ಸರ್ವಸೇವೆ ಸ್ವೀಕರಿಸಿ, ಕಾಲ ಸರಣಿಯ ಪ್ರವಚನ ಮುಂದುವರಿಸಿದರು.ಭಾರತೀಯ ಕಾಲಗಣನೆಯ ಅಂಶಗಳಾದ ತಿಥಿ, ವಾರ, ನಕ್ಷತ್ರ, ಯೋಗ, ಕರಣ ಹೀಗೆ ಪ್ರತಿಯೊಂದೂ ನಮ್ಮ ಜೀವನಕ್ಕೆ ಹತ್ತಿರವಾದವುಗಳು. ಪಂಚಾಂಗದ ತಿಥಿ ನಮ್ಮ ಸಂಪತ್ತು, ವಾರ ಆಯಸ್ಸು, ನಕ್ಷತ್ರ ನಮ್ಮ ಶುದ್ಧತೆಯನ್ನು, ಯೋಗ ಆರೋಗ್ಯವನ್ನು ಹಾಗೂ ಕರಣ ಕಾರ್ಯಸಿದ್ಧಿಯನ್ನು ತಿಳಿಸುತ್ತದೆ ಎಂದರು.ಭಾರತೀಯರಾಗಿ ಪಂಚಾಂಗದ ಐದು ಅಂಶಗಳ ಕನಿಷ್ಠ ಪರಿಜ್ಞಾನ ಎಲ್ಲರಿಗೂ ಬೇಕು. ತಿಥಿಯ ನಿತ್ಯಾನುಸಂಧಾನ ಇದ್ದರೆ ಐಶ್ವರ್ಯ ಪ್ರಾಪ್ತವಾಗುತ್ತದೆ. ಆಯಸ್ಸು, ಪಾಪ ಪರಿಹಾರ, ಆರೋಗ್ಯ ಮತ್ತು ಕಾರ್ಯಸಿದ್ಧಿ ಇವು ಕ್ರಮವಾಗಿ ವಾರ, ನಕ್ಷತ್ರ, ಯೋಗ, ಕರಣಗಳ ಕಾಲಾನುಸಂಧಾನ ಮಾತ್ರದಿಂದಲೇ ಕಾಲ ನಮ್ಮನ್ನು ಅನುಗ್ರಹಿಸುತ್ತಾನೆ. ಈ ಅಂಶಗಳು ಜೀವನಕ್ಕೆ ಮುಖ್ಯ ಎಂದು ವಿವರಿಸಿದರು.

ಗ್ರಹಸ್ಥಿತಿಯ ನೆರವು ಇಲ್ಲದೆಯೂ ಜ್ಯೋತಿಷ್ಯದಲ್ಲಿ ಹಲವು ವಿಷಯಗಳನ್ನು ತಿಳಿದುಕೊಳ್ಳಬಹುದು. ಕಾಲ- ದೇಶ ತಿಳಿದುಕೊಂಡರೆ ಬಹುತೇಕ ಅಂಶಗಳು ತಿಳಿಯುತ್ತವೆ. ಯಾವುದೇ ಪ್ರಶ್ನೆ ಅಥವಾ ವಿಷಯಕ್ಕೆ ದೈವಾನುಗ್ರಹ ಇದೆಯೇ ಎಂದು ತಿಳಿದುಕೊಳ್ಳುವುದು ಪ್ರಾಥಮಿಕ ಹಂತ. ಗುರು ಅನುಕೂಲ/ ಪ್ರತಿಕೂಲ ಸ್ಥಿತಿಯಲ್ಲಿದೆಯೇ ಎಂದು ತಿಳಿದುಕೊಳ್ಳುವ ಮೂಲಕ ಇದನ್ನು ಕಂಡುಹಿಡಿಯಬಹುದು. ಗ್ರಹಗತಿಯನ್ನು ನಿಖರವಾಗಿ ಅಧ್ಯಯನ ಮಾಡಬೇಕು ಎಂದರು.ಪ್ರಶ್ನೆ ಕೇಳುವ ವ್ಯಕ್ತಿ ಯಾವ ದಿಕ್ಕಿನಲ್ಲಿ ನಿಂತಿದ್ದಾನೆ ಎನ್ನುವುದರ ಆಧಾರದಲ್ಲಿ ಭವಿಷ್ಯ ಹೇಳಬಹುದು. ದಿಕ್ಕಿನಲ್ಲಿ ನಿಂತು ಪ್ರಶ್ನೆ ಕೇಳಿದರೆ ಪುರುಷರಿಗೆ ಶುಭ, ಮಹಿಳೆಯರಿಗ ಅಶುಭ. ವಿದಿಕ್ಕಿನಲ್ಲಿ ಕೇಳಿದರೆ ಪುರುಷರಿಗೆ ಅಶುಭ ಹಾಗೂ ಸ್ತ್ರೀಯರಿಗೆ ಶುಭ ಎಂದರು.

ಗುರುವಾರ ಅಪರೂಪದ ಮಳೆತಜ್ಞರೊಬ್ಬರ ಸಾಧನೆಗಳ ಅನಾವರಣ ನಡೆದಿದೆ. ಅವರ ಪ್ರಕೃತಿ ವೀಕ್ಷಣೆಯ ಪರಿ ಅನನ್ಯ. ಸೂಕ್ಷ್ಮ ವಿಷಯವನ್ನು ಗಮನಿಸುವುದು ಅಗತ್ಯ. ಪ್ರಕೃತಿ ನಮ್ಮ ಮುಂದೆ ತೆರೆದಿಡುವ ಸತ್ಯವನ್ನು ನೋಡುವ ಕಣ್ಣುಗಳು ನಮ್ಮದಾಗಬೇಕು ಎಂದರು.

18 ಸಾವಿರ ದಿನಗಳ ಮಳೆಯ ಅಂಕಿ- ಅಂಶಗಳನ್ನು ಸಂಗ್ರಹಿಸಿ ಇಟ್ಟಿರುವ ಸತ್ಯನಾರಾಯಣ ಪ್ರಸಾದ್ ಅವರ ಸಾಧನೆ ಅಮೋಘ. ಇಂಥ ಅನಾವರಣ ಅತ್ಯಂತ ಅರ್ಥಪೂರ್ಣ ಎಂದರು.18 ಸಾವಿರ ದಿನಗಳಿಂದ ಮಳೆ ಅಂಕಿ ಅಂಶಗಳ ದಾಖಲಾತಿ ಮಾಡುತ್ತಾ ಬಂದಿರುವ ಮಳೆತಜ್ಞ ಸತ್ಯನಾರಾಯಣ ಪ್ರಸಾದ್ ಅವರ ಸಾಧನೆಯ ಅನಾವರಣವನ್ನು ಸಮಾಜದ ಹಿರಿಯರಾದ ಆನೇಕಾರ್ ಗಣಪಯ್ಯ ಅನಾವರಣಗೊಳಿಸಿದರು. ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಯುವ ಪ್ರಧಾನ ಕೇಶವಪ್ರಕಾಶ್ ಎಂ., ಉಪ್ಪಿನಂಗಡಿ ಮಂಡಲ ಅಧ್ಯಕ್ಷ ಈಶ್ವರ ಪ್ರಸನ್ನ ಪೆರ್ನೆಕೋಡಿ, ಕಾರ್ಯದರ್ಶಿ ಮಹೇಶ್ ಕುದುಪುಲ, ಚಾತುಮಾಸ್ಯ ಸೇವಾ ಸಮಿತಿ ಅಧ್ಯಕ್ಷ ಮಂಜುನಾಥ ಸುವರ್ಣಗದ್ದೆ, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಪಂಡಿತ್, ಕೋಶಾಧ್ಯಕ್ಷ ಸುಧಾಕರ ಬಡಗಣಿ, ವಿವಿವಿ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪೆದಮಲೆ, ವಿವಿವಿ ಹಿರಿಯ ಲೋಕ ಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಜಿ.ವಿ. ಹೆಗಡೆ, ಕಾರ್ಯದರ್ಶಿ ಜಿ.ಕೆ. ಮಧು, ಸುಬ್ರಾಯ ಅಗ್ನಿಹೋತ್ರಿ, ಮತ್ತಿತರರು ಉಪಸ್ಥಿತರಿದ್ದರು. ಲೋಹಿತ್ ಹೆಬ್ಬಾರ್ ನಿರೂಪಿಸಿದರು.