ಸಾರಾಂಶ
ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಆಹಾರದಿಂದಲೇ ಆರೋಗ್ಯ. ನಾವು ಆಯ್ಕೆ ಮಾಡಿಕೊಳ್ಳುವ ಆಹಾರ ಪದಾರ್ಥಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಸಿರಿಧಾನ್ಯಗಳಿಂದ ತಯಾರಾದ ಖಾದ್ಯಗಳನ್ನು ಹೆಚ್ಚು ಬಳಸುವುದರಿಂದ ಅನೇಕ ರೋಗಗಳನ್ನು ತಡೆಗಟ್ಟ ಬಹುದು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕೃಷಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಭಾನುವಾರ ನಗರದ ಮಹಾತ್ಮ ಗಾಂಧಿ ಉದ್ಯಾನವನದಲ್ಲಿ (ರತ್ನಗಿರಿ ಬೋರೆ) ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ನಮ್ಮ ಸಾಂಪ್ರದಾಯಿಕ ಆಹಾರ ಬೆಳೆಗಳಾದ ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಕೊರಲೆ, ಬರಗು ಇವುಗಳ ಬಳಕೆ ಮರೆತು ಪಾಶ್ಯಾತ್ಯ ಆಹಾರ ಪದ್ಧತಿಗೆ ಮಾರು ಹೋಗುತ್ತಿದ್ದೇವೆ. ಇಂತಹ ಆಹಾರ ಪದ್ಧತಿಗಳಿಂದ ನಮ್ಮ ಜೀವನಶೈಲಿ ಬದಲಾಗುವುದಲ್ಲದೆ ಅನಾರೋಗ್ಯಕ್ಕೆ ತುತ್ತಾಗುವ ಪರಿಸ್ಥಿತಿಗಳು ಉಂಟಾಗಿವೆ. ಆರೋಗ್ಯವನ್ನು ಉತ್ತಮವಾಗಿಟ್ಟುಕೊಳ್ಳಲು ಸಿರಿಧಾನ್ಯಗಳಿಂದ ತಯಾರಾಗುವ ಖಾದ್ಯಗಳನ್ನು ಸೇವಿಸಬೇಕು. ಇವುಗಳು ಮಧುಮೇಹ ಸೇರಿದಂತೆ ಇನ್ನಿತರ ರೋಗಗಳನ್ನು ನಿಯಂತ್ರಿಸಲು ಸಹಕಾರಿಯಾಗಿವೆ ಎಂದರು.
ಯುವಕರು ಮತ್ತು ಮಕ್ಕಳು ಸಿರಿಧಾನ್ಯಗಳನ್ನು ಹೆಚ್ಚಾಗಿ ಬಳಸುವುದರಿಂದ ದೇಹಕ್ಕೆ ಉತ್ತಮ ಪೌಷ್ಟಿಕಾಂಶ ದೊರಕು ವುದಲ್ಲದೆ ಮೆದುಳಿನ ಶಕ್ತಿಯನ್ನು ಹೆಚ್ಚಿಸಿ ದೇಹವನ್ನು ಸದೃಢವನ್ನಾಗಿರಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.ಸಿರಿಧಾನ್ಯಗಳನ್ನು ಹೆಚ್ಚು ಬಳಸುವುದರಿಂದ ರೈತರಿಗೆ ಹೆಚ್ಚಾಗಿ ಸಿರಿಧಾನ್ಯಗಳನ್ನು ಬೆಳೆಯಲು ಅನುಕೂಲವಾಗುತ್ತದೆ ಮತ್ತು ಸಿರಿಧಾನ್ಯಗಳಿಂದ ಖಾದ್ಯಗಳನ್ನು ತಯಾರಿಸುವವರಿಗೆ ಪ್ರೋತ್ಸಾಹಿಸಿ ವಿವಿಧ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದಾಗಿದೆ ಎಂದರು. ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮಾತನಾಡಿ, ಸಿರಿಧಾನ್ಯಗಳಿಂದ ಖಾದ್ಯಗಳನ್ನು ತಯಾರಿಸಿ ಸೇವಿಸುವುದರಿಂದ ಯಾವುದೇ ರೀತಿ ಕಾಯಿಲೆಗಳು ಬರುವುದಿಲ್ಲ. ಸಿರಿಧಾನ್ಯ ಖಾದ್ಯಗಳಿಂದ 3 ವಿಭಾಗಗಳಲ್ಲಿ ಪಾಕ ಸ್ಪರ್ಧೆಯಲ್ಲಿ ಮರೆತು ಹೋದ ಖಾದ್ಯಗಳು, ಸಿಹಿ ಮತ್ತು ಖಾರ ಖಾದ್ಯಗಳ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಯಲ್ಲಿ ಸುಮಾರು 60 ಮಹಿಳೆ ಯರು ಭಾಗವಹಿಸಿದ್ದು ನಮ್ಮ ಮಲೆನಾಡು ಭಾಗದ ವಿವಿಧ ತಿಂಡಿಗಳು ಪೌಷ್ಟಿಕ ಆಹಾರಗಳು ತಯಾರಿಸಿ ಪ್ರದರ್ಶಿಸ ಲಾಗಿದೆ. ಇಂತಹ ಆಹಾರ ಪದಾರ್ಥಗಳನ್ನು ನಮ್ಮ ದಿನ ನಿತ್ಯದ ಆಹಾರ ಪದ್ಧತಿಯಲ್ಲಿ ಬಳಸುವುದರಿಂದ ದೇಹಕ್ಕೆ ಉತ್ತಮ ಪೌಷ್ಟಿಕಾಂಶಗಳನ್ನು ನೀಡುವ ಮೂಲಕ ವಿವಿಧ ಅನಾರೋಗ್ಯಗಳಿಂದ ಸುಧಾರಿಸಿಕೊಳ್ಳಬಹುದು ಜೊತೆಗೆ ಮಧುಮೇಹ ದಂತಹ ರೋಗಗಳಿಂದ ಶೀಘ್ರವಾಗಿ ಮುಕ್ತರಾಗಬಹುದು ಎಂದರು.
ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಹೆಚ್ಚಾಗಿ ಇರುವುದರಿಂದ ಅವರಿಗೆ ಸಿರಿಧಾನ್ಯಗಳಿಂದ ತಯಾರಾಗುವ ಆಹಾರ ನೀಡುವುದರಿಂದ ಅವರಲ್ಲಿ ಯಾವುದೇ ರೀತಿ ಅಪೌಷ್ಟಿಕತೆ ಕಂಡು ಬರುವುದಿಲ್ಲ. ಜೊತೆಗೆ ವೃದ್ಧರೂ ಸಹ ಈ ಖಾದ್ಯಗಳನ್ನು ಸೇವಿಸುವುದರಿಂದ ತಮ್ಮ ಆರೋಗ್ಯ ಕಾಪಾಡಿಕೊಂಡು ಹೆಚ್ಚು ಕಾಲ ಬದುಕಬಹುದು. ಅಂತಹ ವಿವಿಧ ಆರೋಗ್ಯಯುತ ಅಂಶಗಳನ್ನು ಈ ಸಿರಿಧಾನ್ಯಗಳು ಹೊಂದಿದೆ. ಸಿರಿಧಾನ್ಯಗಳನ್ನು ಸೇವಿಸುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಹೆಚ್ಚು ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದರು.ಮುಂದಿನ ದಿನಗಳಲ್ಲಿ ಮಾರುಕಟ್ಟೆಗಳಲ್ಲಿ ಸಿರಿಧಾನ್ಯಗಳ ಮಾರಾಟ ಹೆಚ್ಚಿಸುವಂತೆ ಮತ್ತು ಹೋಟೆಲ್, ರೆಸಾರ್ಟ್‌ಗಳಲ್ಲಿ ಸಿರಿಧಾನ್ಯಗಳ ಬಳಕೆ ಮತ್ತು ಅವುಗಳಿಂದ ತಯಾರಾಗುವ ಖಾದ್ಯಗಳನ್ನು ಬೆಳಗಿನ ಉಪಹಾರವಾಗಿ ನೀಡುವಂತೆ ನಿಗಾವಹಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ, ಅಪರ ಜಿಲ್ಲಾಧಿಕಾರಿ ನಾರಾಯಣ ರಡ್ಡಿ ಕನಕರಡ್ಡಿ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತಾ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.8 ಕೆಸಿಕೆಎಂ 5ಚಿಕ್ಕಮಗಳೂರಿನ ರತ್ನಗಿರಿ ಬೋರೆಯಲ್ಲಿ ಭಾನುವಾರ ಜಿಲ್ಲಾ ಮಟ್ಟದ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆ ನಡೆಯಿತು. ಶಾಸಕ ಎಚ್.ಡಿ. ತಮ್ಮಯ್ಯ, ಡಿಸಿ ಮೀನಾ ನಾಗರಾಜ್, ಜಿಪಂ ಸಿಇಒ ಕೀರ್ತನಾ, ಜಂಟಿ ಕೃಷಿ ನಿರ್ದೇಶಕಿ ಸುಜಾತ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಪೂರ್ಣಿಮಾ ಇದ್ದರು.