ಸಾರಾಂಶ
ವಿಘ್ನೇಶ್ ಎಂ. ಭೂತನಕಾಡು
ಕನ್ನಡಪ್ರಭ ವಾರ್ತೆ ಮಡಿಕೇರಿಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ತಮ್ಮ 16ನೇ ಬಜೆಟ್ ಅನ್ನು ಮಂಡನೆ ಮಾಡಲಿದ್ದು, ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಹಲವು ಪ್ರಮುಖ ಯೋಜನೆಗಳು ಘೋಷಣೆಯಾಗುವ ನಿರೀಕ್ಷೆಯಿದೆ.
ಭಾಗಮಂಡಲದ ಮೇಲು ಸೇತುವೆ ಕಾಮಗಾರಿ ಉದ್ಘಾಟನೆ ಸಂದರ್ಭ ಆಗಮಿಸಿದ್ದ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಗೆ ವಿಶೇಷವಾದ ಅನುದಾನವನ್ನು ನೀಡುವುದಾಗಿ ಹೇಳಿದ್ದರು. ಇದು ಬಜೆಟ್ ನಲ್ಲಿ ಅಧಿಕೃತವಾಗಿ ಘೋಷಣೆಯಾಗುವ ಸಾಧ್ಯತೆಯಿದೆ.ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕರಾದ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರು ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಹಲವು ಯೋಜನೆ ಹಾಗೂ ಅಭಿವೃದ್ಧಿಯ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಎಷ್ಟು ಬೇಡಿಕೆಗಳು ಈಡೇರಲಿದೆ ಎಂಬುದಕ್ಕೆ ಸಿದ್ದರಾಮಯ್ಯ ಅವರ ಬಜೆಟ್ ನಲ್ಲಿ ಉತ್ತರ ದೊರಕಲಿದೆ.
ಕೊಡಗು ಜಿಲ್ಲೆಯಲ್ಲಿ ಬಹುಮುಖ್ಯವಾಗಿ ಗ್ರಾಮೀಣ ಭಾಗದ ರಸ್ತೆಗಳು ಹಾಗೂ ಲೋಕೋಪಯೋಗಿ ಇಲಾಖೆ ಸೇರಿದ ರಸ್ತೆಗಳು ತೀರಾ ಹದಗೆಟ್ಟಿದೆ. ಇದಕ್ಕೆ ವಿಶೇಷ ಪ್ಯಾಕೇಜ್ ನಿರೀಕ್ಷೆ ಜಿಲ್ಲೆಯ ಜನರದ್ದಾಗಿದೆ. ಜಿಲ್ಲೆಯ ಹಲವು ಸಂಪರ್ಕ ರಸ್ತೆಗಳು ವಾಹನ ಸಂಚಾರಕ್ಕೆ ಆಗದ ಸ್ಥಿತಿಯಲ್ಲಿದೆ. ಇದರಿಂದ ಜನ ಸಾಮಾನ್ಯರು ಈಗಾಗಲೇ ರೋಸಿ ಹೋಗಿದ್ದಾರೆ.ಕಾಡಾನೆ-ಮಾನವ ಸಂಘರ್ಷದಿಂದ ಜಿಲ್ಲೆಯಲ್ಲಿ ಅಪಾರ ಸಾವು ನೋವು ಸಂಭವಿಸುತ್ತಿದೆ. ಅಲ್ಲದೆ ಕಾಡಿನಿಂದ ನಾಡಿಗೆ ನಿರಂತರವಾಗಿ ಕಾಡು ಪ್ರಾಣಿಗಳು ಬರುತ್ತಿದ್ದು, ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ. ಕಾಡು ಪ್ರಾಣಿಗಳ ಉಪಟಳವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಇದಕ್ಕೆ ಶಾಶ್ವತ ಯೋಜನೆಯನ್ನು ರೂಪಿಸುವುದು ಅವಶ್ಯಕವಾಗಿದೆ. ಈ ಬಜೆಟ್ ನಲ್ಲಿ ಇದಕ್ಕೆ ಪರಿಹಾರ ದೊರಕಲಿದೆಯಾ ಎಂಬುದು ಕಾದು ನೋಡಬೇಕಿದೆ.
ಅಪಾರ ಪ್ರವಾಸಿ ತಾಣಗಳಿರುವ ಜಿಲ್ಲೆಯಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯದ ಕೊರತೆ ತೀರಾ ಕಾಡುತ್ತಿದೆ. ಅಲ್ಲದೆ ಸಾಕಷ್ಟು ಪ್ರವಾಸಿ ತಾಣಗಳು ಇನ್ನಷ್ಟು ಅಭಿವೃದ್ಧಿ ಆಗಬೇಕಿದೆ. ಇದರಿಂದ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲು ಈ ಬಜೆಟ್ ನಲ್ಲಿ ಅನುದಾನ ಮೀಸಲಿರಿಸಬೇಕೆಂಬ ಒತ್ತಾಯವೂ ಇದೆ. ಮಲ್ಲಳ್ಳಿ ಜಲಪಾತದಲ್ಲಿ ಕೇಬಲ್ ಕಾರ್ ಯೋಜನೆ ಆಗಲಿದೆ ಎಂಬ ನಿರೀಕ್ಷೆ ಮೂಡಿದೆ.ಕೊಡವ ಹೆರಿಟೇಜ್ ಸೆಂಟರ್, ಕನ್ನಡ ಭವನ, ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಸೇರಿದಂತೆ ಹಲವು ಸರ್ಕಾರಿ ಕಟ್ಟಡಗಳ ಕಾಮಗಾರಿಗಳು ಹಲವು ವರ್ಷವಾದರೂ ಇನ್ನೂ ಪೂರ್ಣಗೊಂಡಿಲ್ಲ. ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ನೆಪವನ್ನು ಹೇಳಿಕೊಂಡು ಬರಲಾಗುತ್ತದೆ. ಈ ಕಾಮಗಾರಿಗಳ ಪೂರ್ಣಗೊಳಿಸಲು ಸರ್ಕಾರ ಅನುದಾನ ನೀಡಲಿದೆಯೇ ಎಂಬುದು ಪ್ರಶ್ನೆಯಾಗಿದೆ.
ಕಾಂಗ್ರೆಸ್ ಸರ್ಕಾರಕ್ಕೆ ತಮ್ಮ ಗ್ಯಾರಂಟಿಗೆ ಹಣ ಸಾಲುತ್ತಿಲ್ಲ. ಇದರಿಂದ ಅಭಿವೃದ್ದಿ ಯೋಜನೆಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂಬುವುದು ಬಿಜೆಪಿಯ ಪ್ರಮುಖರ ಹೇಳಿಕೆಯಾಗಿದೆ. ಕೊಡಗು ವಿವಿ ಉಳಿಯುತ್ತಾ, ವಿಲೀನವಾಗುತ್ತಾ?ಕೊಡಗಿನಲ್ಲಿ ಸದ್ಯಕ್ಕೆ ಚರ್ಚೆಗೆ ಗ್ರಾಸವಾಗಿರುವ ಕೊಡಗು ವಿಶ್ವ ವಿದ್ಯಾಲಯ ಉಳಿಯುತ್ತಾ ಅಥವಾ ಮತ್ತೆ ಪುನಃ ಮಂಗಳೂರು ವಿಶ್ವ ವಿದ್ಯಾಲಯದೊಂದಿಗೆ ವಿಲೀನವಾಗುತ್ತದೆಯೇ ಎಂಬುದು ಈ ಬಜೆಟ್ ನಲ್ಲಿ ಸ್ಪಷ್ಟಪಡಿಸಬೇಕಾಗಿದೆ. ಕೊಡಗು ವಿವಿ ಮುಚ್ಚಲಿದೆ ಎಂಬ ಆತಂಕ ವಿದ್ಯಾರ್ಥಿಗಳನ್ನು ಹಾಗೂ ಇಲ್ಲಿನ ಜನರನ್ನು ಕಾಡುತ್ತಿದೆ. ಅಲ್ಲದೆ ಕೊಡಗು ವಿವಿ ಯಥಾಸ್ಥಿತಿಯಲ್ಲಿ ಮುಂದುವರೆಯುವಂತೆ ಒತ್ತಾಯ ಜಿಲ್ಲೆಯಲ್ಲಿ ಹೆಚ್ಚಿದೆ. ಇದಕ್ಕಾಗಿ ಪ್ರತಿಭಟನೆಗಳು ನಡೆದಿದೆ. ಈ ಬಗ್ಗೆ ಸರ್ಕಾರ ಬಜೆಟ್ ನಲ್ಲಿ ತನ್ನ ಸ್ಪಷ್ಟ ನಿರ್ಧಾರವನ್ನು ಪ್ರಕಟಿಸಬೇಕಾಗಿದೆ ಎನ್ನುವುದು ಹಲವರ ಒತ್ತಾಯವಾಗಿದೆ. ಕಳೆದ ವರ್ಷದ ಘೋಷಣೆಗಳು
ಕಳೆದ ವರ್ಷ ಸಿದ್ದರಾಮಯ್ಯ ಅವರು ಕೊಡಗಿಗೆ ಘೋಷಿಸಿದ್ದ ಹಲವು ಯೋಜನೆಗಳು ಹಾಗೆಯೇ ಉಳಿದಿದೆ. ಪೊನ್ನಂಪೇಟೆಯಲ್ಲಿ ಕ್ರೀಡಾ ವಸತಿ ನಿಲಯಕ್ಕೆ ರು.5 ಕೋಟಿ, ವಿರಾಜಪೇಟೆಯಲ್ಲಿ ಹೊಸ ನ್ಯಾಯಾಲಯ ಸಂಕೀರ್ಣಕ್ಕೆ ರು.12 ಕೋಟಿ, ಮಡಿಕೇರಿ ಪ್ರಾದೇಶಿಕ ಸಾರಿಗೆ ಕೇಂದ್ರದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ, ವಿಜ್ಞಾನ ಕೇಂದ್ರ ಹಾಗೂ ತಾರಾಲಯ ನಿರ್ಮಿಸುವ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪ ಮಾಡಲಾಗಿತ್ತು. ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಪಾಯಕಾರಿ ಸಾಂಕ್ರಮಿಕ ರೋಗಗಳು ಮತ್ತು ವೈರಲ್ ಸೋಂಕುಗಳನ್ನು ಪತ್ತೆಹಚ್ಚಲು ವೈರಲ್ ರಿಸರ್ಚ್ ಮತ್ತು ಡಯಾಗ್ನಾಸ್ಟಿಕ್ ಲ್ಯಾಬೋರೋಟರಿಗಳನ್ನು ಘೋಷಣೆ ಮಾಡಲಾಗಿತ್ತು. ಇದರಲ್ಲಿ ಬಹುತೇಕವು ಘೋಷಣೆಯಾಗಿ ಮಾತ್ರ ಉಳಿದಿದೆ. ಇನ್ನೂ ಪೂರ್ಣ ಕೆಲಸ ಆರಂಭವಾಗಿಲ್ಲ. ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸುತ್ತಿದ್ದು, ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ ಕೊಡಗು ವಿಶ್ವ ವಿದ್ಯಾಲಯವನ್ನು ಉಳಿಸುವ ನಿಟ್ಟಿನಲ್ಲಿ ಸರ್ಕಾರದಿಂದ ಅನುದಾನ ಘೋಷಣೆಯನ್ನು ಈ ಬಜೆಟ್ ನಲ್ಲಿ ಮಾಡಬೇಕು. ಅಲ್ಲದೆ ಕೊಡಗು ವಿವಿಯನ್ನು ಯಥಾ ಸ್ಥಿತಿಯಲ್ಲಿ ಮುಂದುವರೆಸಬೇಕು. ವಿಶ್ವ ವಿದ್ಯಾಲಯ ಬಗ್ಗೆ ಸ್ಪಷ್ಟಪಡಿಸಬೇಕು. ಇಲ್ಲದಿದ್ದರೆ ಮಾ.11ರಂದು ಕೊಡಗು ಬಂದ್ ಮಾಡುತ್ತೇವೆ.-ಅಪ್ಪಚ್ಚು ರಂಜನ್, ಮಾಜಿ ಸಚಿವರು