ಗ್ಯಾರಂಟಿಗಳಿಂದ ಅನೇಕ ಕುಟುಂಬಗಳು ಅಭಿವೃದ್ಧಿ: ಮೆಹರೋಜ್ ಖಾನ್

| Published : Feb 06 2025, 12:17 AM IST

ಸಾರಾಂಶ

ಗ್ಯಾರಂಟಿ ಯೋಜನೆಯಿಂದ ಅನೇಕ ಕುಟುಂಬಗಳು ಅಭಿವೃದ್ಧಿ ಹೊಂದಿವೆ. ಅನೇಕರು ಸ್ವಯಂ ಉದ್ಯೋಗ ನಡೆಸುತ್ತಿದ್ದಾರೆ.

ಹಂಚಿನಾಳದಲ್ಲಿ ಸ್ವಯಂ ಉದ್ಯೋಗ ನಡೆಸುತ್ತಿರುವ ಮಹಿಳೆಯರಿಗೆ ಸನ್ಮಾನ

ಕನ್ನಡಪ್ರಭ ವಾರ್ತೆ ಕುಷ್ಟಗಿ

ಗ್ಯಾರಂಟಿ ಯೋಜನೆಯಿಂದ ಅನೇಕ ಕುಟುಂಬಗಳು ಅಭಿವೃದ್ಧಿ ಹೊಂದಿವೆ. ಅನೇಕರು ಸ್ವಯಂ ಉದ್ಯೋಗ ನಡೆಸುತ್ತಿದ್ದಾರೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಮೆಹರೋಜ್ ಖಾನ್ ಹೇಳಿದರು.

ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಗೃಹಲಕ್ಷೀ ಯೋಜನೆ ಲಾಭ ಪಡೆದುಕೊಂಡು ಸ್ವಯಂ ಉದ್ಯೋಗ ಮಾಡುತ್ತಿರುವ ಮಹಿಳೆಯರನ್ನು ಸನ್ಮಾನಿಸಿ, ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅನೇಕರು ಬಟ್ಟೆ ಅಂಗಡಿ ಆರಂಭಿಸಿದ್ದಾರೆ. ಹಸು ಸಾಕಾಣಿಕೆ, ಕುರಿ ಸಾಕಾಣಿಕೆ, ಟೇಲರಿಂಗ್ ಮಿಷಿನ್ ಖರೀದಿಸಿದ್ದಾರೆ. ಸ್ವಯಂ ಉದ್ಯೋಗ ನಡೆಸಿ ಅನೇಕ ಮಹಿಳೆಯರು ಕುಟುಂಬ ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗೆ ಹಣ ವಿನಿಯೋಗಿಸುತ್ತಿರುವುದರಿಂದ ರಾಜ್ಯದ ಅಭಿವೃದ್ಧಿಗೆ ಹಣವಿಲ್ಲ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಅದೆಲ್ಲ ಸುಳ್ಳು, ಜನರು ಅಂತಹ ಮಾತನ್ನು ನಂಬಬಾರದು. ರಾಜ್ಯ ಸರ್ಕಾರ ಅಭಿವೃದ್ಧಿ ಕಾರ್ಯಗಳಿಗೆ ಹಣ ವಿನಿಯೋಗಿಸುತ್ತಿದೆ ಎಂದರು.

ಫಲಾನುಭವಿ ಮಹಿಳೆಯರು ಅಭಿಪ್ರಾಯ ಹಂಚಿಕೊಂಡರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಆಸಕ್ತಿ ವಹಿಸಿ:

ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಮಾಡುವಲ್ಲಿ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಗ್ಯಾರಂಟಿ ಯೋಜನೆ ಸಮಿತಿಯ ಯಲಬುರ್ಗಾ ತಾಲೂಕಾ ಅಧ್ಯಕ್ಷ ಸುಧೀರ್ ಕೊರ್ಲಳ್ಳಿ ಹೇಳಿದರು.ಯಲಬುರ್ಗಾ ಪಟ್ಟಣದ ತಾಪಂ ಸಭಾಂಗಣದಲ್ಲಿ ನಡೆದ ಕುಕನೂರು-ಯಲಬುರ್ಗಾ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.ಸರ್ಕಾರದ ಐದು ಗ್ಯಾರಂಟಿ ಕಾರ್ಯಕ್ರಮದ ಬಗ್ಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಶ್ರಮಿಸಬೇಕು ಎಂದರು.

ಕುಕನೂರು ಗ್ಯಾರಂಟಿ ಯೋಜನೆ ಸಮಿತಿಯ ಅಧ್ಯಕ್ಷ ಸಂಗಮೇಶ ಗುತ್ತಿ ಮಾತನಾಡಿ, ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ನೂರಕ್ಕೂ ಅಧಿಕ ಮಹಿಳೆಯರಿಗೆ ಹಣ ಬಂದಿಲ್ಲ ಎನ್ನುತ್ತಾರೆ. ಕೂಡಲೇ ಈ ಸಮಸ್ಯೆ ಸರಿಪಡಿಸಬೇಕು. ಜತೆಗೆ ಶಿರೂರು ಗ್ರಾಮದಲ್ಲೂ ಸಮಸ್ಯೆಯಿದ್ದು, ಆದಷ್ಟು ತ್ವರಿತಗತಿಯಲ್ಲಿ ಪರಿಹರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕು. ತಾಲೂಕಿನ ಜನತೆಗೆ ಹೆಚ್ಚು ಯೋಜನೆ ಕುರಿತು ಪ್ರಚಾರ ಮಾಡಬೇಕೆಂದು ಹೇಳಿದರು.ಬಳಿಕ ಸಿಡಿಪಿಒ ಬೆಟದಪ್ಪ ಮಾಳೆಕೊಪ್ಪ ಮಾತನಾಡಿ, ಎಲ್ಲರಿಗೂ ಶೀಘ್ರದಲ್ಲೇ ಹಣ ಬರಲಿದೆ. ಈ ಕುರಿತು ನಮ್ಮ ಅಂಗನವಾಡಿ ಕಾರ್ಯಕರ್ತೆಯರನ್ನು ಆಯಾ ಗ್ರಾಮಗಳಿಗೆ ನಿಯುಕ್ತಿಗೊಳಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭ ತಾಪಂ ಇಒ ಸಂತೋಷ ಪಾಟೀಲ್, ಕುಕನೂರು, ಯಲಬುರ್ಗಾ ತಾಲೂಕು ಗ್ಯಾರಂಟಿ ಯೋಜನೆ ಸಮಿತಿಯ ಸರ್ವ ಸದಸ್ಯರು, ಐದು ಇಲಾಖೆಗಳ ಅಧಿಕಾರಿಗಳು ಇದ್ದರು.