ಹೆಣ್ಣನ್ನು ಸುರಕ್ಷಿತವಾಗಿರಿಸಲು ಅನೇಕ ಕಾಯ್ದೆಗಳು ರಚನೆ: ನ್ಯಾ. ಹನುಮಂತಪ್ಪ

| Published : Oct 25 2025, 01:00 AM IST

ಹೆಣ್ಣನ್ನು ಸುರಕ್ಷಿತವಾಗಿರಿಸಲು ಅನೇಕ ಕಾಯ್ದೆಗಳು ರಚನೆ: ನ್ಯಾ. ಹನುಮಂತಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಹೆಣ್ಣು ಸಮಾಜದ ಕಣ್ಣು. ದೇಶದ ವಿವಿಧ ಸ್ಥರಗಳಲ್ಲಿ ಮಹಿಳೆಯರು ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಮಾದರಿಯಾಗಿದ್ದು, ಹೆಣ್ಣನ್ನು ತಿರಸ್ಕರಿಸುವ ಅಥವಾ ಅಸಡ್ಡೆ ತೋರುವ ಆಲೋಚನೆ ಪಾಲಕರು ಬಿಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ವಿ.ಹನುಮಂತಪ್ಪ ಹೇಳಿದರು.

- ಮೈಲಿಮನೆ ಗ್ರಾಮದಲ್ಲಿ ಕಾನೂನು ಅರಿವು ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಹೆಣ್ಣು ಸಮಾಜದ ಕಣ್ಣು. ದೇಶದ ವಿವಿಧ ಸ್ಥರಗಳಲ್ಲಿ ಮಹಿಳೆಯರು ಗೌರವಾನ್ವಿತ ಹುದ್ದೆಗಳನ್ನು ಅಲಂಕರಿಸಿ ಸಮಾಜಕ್ಕೆ ಮಾದರಿಯಾಗಿದ್ದು, ಹೆಣ್ಣನ್ನು ತಿರಸ್ಕರಿಸುವ ಅಥವಾ ಅಸಡ್ಡೆ ತೋರುವ ಆಲೋಚನೆ ಪಾಲಕರು ಬಿಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್‌ ನ್ಯಾಯಾಧೀಶ ವಿ.ಹನುಮಂತಪ್ಪ ಹೇಳಿದರು.

ತಾಲೂಕಿನ ಮೈಲಿಮನೆ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಟಾಟಾ ಕಾಫಿ ಲಿಮಿಟೆಡ್ , ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ ಹಾಗೂ ವಕೀಲರ ಸಂಘದಿಂದ ಆಯೋಜಿಸಿದ್ಧ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹೆಣ್ಣು ಇಂದಿನ ಕಾಲಮಾನದಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಮುಂಚೂಣಿ ಕಂಡಿದ್ದಾರೆ. ರಾಷ್ಟ್ರಪತಿ, ಪ್ರಧಾನಿ, ಐಪಿಎಸ್ ಹಾಗೂ ಐಎಎಸ್‌ನಂಥ ಪ್ರಮುಖ ಸ್ಥಾನ ಅಲಂಕರಿಸಿದ್ದಾರೆ. ಹಾಗಾಗಿ ಹೆಣ್ಣು ಮಕ್ಕಳನ್ನು ಅಲ್ಲ ಗಳೆಯದೇ, ಗಂಡಿನಂತೆ ಸರಿಸಮಾನಾಗಿ ಗೌರವಿಸುವ ಪರಿಕಲ್ಪನೆ ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಇತ್ತೀಚೆಗೆ ಎಸ್ಟೇಟ್‌ನ ಕಾರ್ಮಿಕ ವಲಯದಲ್ಲಿ ಪೋಕ್ಸೋ, ಬಾಲ್ಯವಿವಾಹ ಪ್ರಕರಣಗಳು ದಾಖಲಾ ಗುತ್ತಿವೆ. ಹೆಣ್ಣು ಮಕ್ಕಳನ್ನು ಪ್ರೌಢಾವಸ್ಥೆಯ ಮುಂಚೆಯೇ ಮದುವೆ ಮಾಡಿಸುವುದು, ಹೆಣ್ಣು ಗಂಡೆಂದು ತಿಳಿಯಲು ಬ್ರೂಣಲಿಂಗ ಪತ್ತೆ ಪ್ರಕರಣಗಳು ಕಾನೂನು ಚೌಕಟ್ಟಿನಲ್ಲಿ ಶಿಕ್ಷಾರ್ಹ ಅಪರಾಧ ಜೊತೆಗೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು.ಬಾಲ್ಯವಸ್ಥೆಯ ಹೆಣ್ಣು ಮಕ್ಕಳಿಗೆ ಲೈಂಗಿಕ ದೌರ್ಜನ್ಯ, ಬಾಲಗರ್ಭೀಣಿ ಪ್ರಕರಣಕ್ಕೆ ಕಡಿವಾಣ ಹಾಕಲು ಪಾಲಕರು ನಿಗಾವಹಿಸಬೇಕು. ಮದುವೆ ವಯಸ್ಸಿಗಿಂತ ಮೊದಲೇ ಪ್ರೇಮವಿವಾಹಕ್ಕೆ ಮುಂದಾದರೆ ಎರಡು ಕಡೆಯ ಇಡೀ ಕುಟುಂಬ, ಮದುವೆಯಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರ ಮೇಲು ಪ್ರಕರಣ ದಾಖಲಾಗುತ್ತವೆ ಎಂಬುದು ಅರಿತುಕೊಳ್ಳಬೇಕು ಎಂದರು.ಹೆಣ್ಣು ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿರುವ ಕಾರಣ ದೇಶದಲ್ಲಿ ಪ್ರತಿ 8 ಗಂಟೆಗೊಮ್ಮೆ ಅತ್ಯಾಚಾರ ಪ್ರಕರಣ ದಾಖಲಾಗುತ್ತಿವೆ. ಸರ್ಕಾರಗಳು ಆ ನಿಟ್ಟಿನಲ್ಲಿ ಹೆಣ್ಣನು ಸುರಕ್ಷಿತವಾಗಿರಿಸಲು ಅನೇಕ ಕಾಯ್ದೆ ಗಳನ್ನು ರಚಿಸುವ ಮೂಲಕ ಮಹಿಳೆಯರಿಗೆ ಕಾನೂನಿನ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ಬಡ ವರ್ಗದ ಜನರು ಶೋಷಣೆ, ದೌರ್ಜನ್ಯ ಅಥವಾ ಅನ್ಯಾಯಕ್ಕೆ ಒಳಗಾಗಿ ಪ್ರಕರಣ ಎದುರಿಸಲು ಆರ್ಥಿಕ ಶಕ್ತಿಯಿಲ್ಲದವರಿಗೆ ನ್ಯಾಯ ಒದಗಿಸಲು ಕಾನೂನು ಸೇವೆಗಳ ಪ್ರಾಧಿಕಾರ ಉಚಿತವಾಗಿ ವಕೀಲರನ್ನು ನೇಮಿಸಿ ಪ್ರಕರಣ ಇತ್ಯರ್ಥಗೊಳ್ಳುವರೆಗೂ ಎಲ್ಲಾ ಸೌಲಭ್ಯ ಕಲ್ಪಿಸಿಕೊಡಲಿದೆ. ಹೆಣ್ಣಿಗೆ ಸಮಸ್ಯೆ ಕಂಡು ಬಂದಲ್ಲಿ ಮಹಿಳಾ ವಕೀಲರನ್ನು ನೇಮಿಸಲಾಗುವುದು ಎಂದು ಮನವರಿಕೆ ಮಾಡಿದರು.

ಕಾರ್ಮಿಕ ಇಲಾಖೆ ಚಿಕ್ಕಮಗಳೂರು ಉಪ ವಿಭಾಗದ ಸಹಾಯಕ ಆಯುಕ್ತ ಸುಭಾಷ್ ಎಂ. ಆಲದಕಟ್ಟಿ ಮಾತನಾಡಿ, ಕಾರ್ಮಿಕರ ಬದುಕಿಗೆ ಕೇಂದ್ರ ಸರ್ಕಾರ 21 ಹಾಗೂ ರಾಜ್ಯ ಸರ್ಕಾರ 4 ಪ್ರಮುಖ ಕಾರ್ಮಿಕ ಕಾಯ್ದೆಗಳನ್ನು ರೂಪಿಸಿ ಅನುಷ್ಟಾನಗೊಳಿಸುವ ಮೂಲಕ ಕಾರ್ಮಿಕ ಶ್ರೇಯೋಭಿವೃದ್ದಿಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಹೇಳಿದರು.ಕಾರ್ಮಿಕ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರಿಗೆ ಮಾಲೀಕರು ಕನಿಷ್ಠ ವೇತನ, ವೈದ್ಯಕೀಯ ಸೌಲಭ್ಯ, ನಿವಾಸದ ವ್ಯವಸ್ಥೆ ಕಲ್ಪಿಸಿಕೊಡಬೇಕು. ಪ್ರತಿ ದಿನ 8 ಗಂಟೆಗಳ ಕಾಲ ಮಾತ್ರ ಕೆಲಸ ಮಾಡ ಬೇಕು. ಹೆಚ್ಚು ಕೆಲಸ ನಿರ್ವಹಿಸಿದರೆ ಹೆಚ್ಚುವರಿ ವೇತನ ನಿಗಧಿಗೊಳಿಸುವುದು ಕಾನೂನಿನ ನಿಯಮ ಎಂದು ತಿಳಿಸಿದರು.ಮಲ್ಲಂದೂರು ಠಾಣೆ ಸಬ್‌ಇನ್ಸ್‌ಪೆಕ್ಟರ್ ಗುರು ಸಜ್ಜನ್ ಮಾತನಾಡಿ, ಮಲ್ಲಂದೂರು ವ್ಯಾಪ್ತಿಯಲ್ಲಿ ಹೆಚ್ಚು ಪೋಕ್ಸೋ ಪ್ರಕರಣ ಕಂಡುಬರುತ್ತಿದೆ. ಹೆಣ್ಣು ಮಕ್ಕಳನ್ನು ಜೋಪಾನವಾಗಿರಿಸುವ ಜವಾಬ್ದಾರಿ ಪಾಲಕರು ಹೊರ ಬೇಕು. ಮಕ್ಕಳು ಶಿಕ್ಷಣವಂತರಾದರೆ ಮಾತ್ರ ಕಾನೂನು ತಿಳುವಳಿಕೆ ಬರಲಿದೆ. ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಹಾಯಕ ಕಾನೂನು ಅಭಿರಕ್ಷಕ ಜಿ.ಆರ್. ರಮೇಶ್, ಕಾರ್ಮಿಕ ಇಲಾಖೆ ಚಿಕ್ಕಮಗಳೂರು ವಿಭಾಗದ ಅಧಿಕಾರಿ ಬಿ.ಸಿ.ಸುರೇಶ್, ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಚ್.ಕೆ.ಪ್ರಭಾಕರ್, ಪ್ರವೀಣ್‌ಕುಮಾರ್, ಮೈಲಿಮನೆ ಎಸ್ಟೇಟ್‌ನ ಜನರಲ್ ಮ್ಯಾನೇಜರ್ ರೋಷನ್, ಕಟ್ಟಡ ಕಾರ್ಮಿಕ ಮಂಡಳಿ ಕಾರ್ಯನಿರ್ವಾಹಕ ಮಹಮ್ಮದ್ ಹ್ಯಾರಿಸ್ ಉಪಸ್ಥಿತರಿದ್ದರು. 24 ಕೆಸಿಕೆಎಂ 1ಚಿಕ್ಕಮಗಳೂರು ತಾಲೂಕಿನ ಮೈಲಿಮನೆ ಗ್ರಾಮದಲ್ಲಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮ ವನ್ನು ನ್ಯಾ. ಹನುಮಂತಪ್ಪ ಉದ್ಘಾಟಿಸಿದರು. ಸುಭಾಷ್ ಎಂ. ಆಲದಕಟ್ಟಿ, ಜಿ.ಆರ್. ರಮೇಶ್ ಇದ್ದರು.