ಸಾರಾಂಶ
ಶಿರಸಿ: ಚುನಾವಣೆಯು ಪಾರದರ್ಶಕ ಮತ್ತು ಉತ್ತಮ ರೀತಿಯಲ್ಲಿ ನಡೆಯುವ ಉದ್ದೇಶದಿಂದ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಹಾಯಕ ಆಯುಕ್ತೆ ಅಪರ್ಣ ರಮೇಶ ತಿಳಿಸಿದರು.
ಸೋಮವಾರ ಮಾಧ್ಯಮದವರ ಜತೆ ಮಾತನಾಡಿ, ಶಿರಸಿ ತಾಲೂಕಿನಲ್ಲಿ 148 ಹಾಗೂ ಸಿದ್ದಾಪುರ ತಾಲೂಕಿನಲ್ಲಿ 118 ಮತಗಟ್ಟೆಗಳು ಸೇರಿದಂತೆ ಒಟ್ಟೂ 266 ಮತಗಟ್ಟೆಗಳಿವೆ. 101484 ಪುರುಷ, 101163 ಮಹಿಳಾ, 1 ಇತರೆ, 139 ಸೇವಾ ಮತದಾರರು ಸೇರಿದಂತೆ ಒಟ್ಟೂ 202648 ಮತದಾರರಿದ್ದಾರೆ ಎಂದರು.ಶಿರಸಿ ವಿಧಾನಸಭಾ ಕ್ಷೇತ್ರದಲ್ಲಿ 85 ವರ್ಷ ಮೇಲ್ಪಟ್ಟ 2178 ಮತದಾರರಿದ್ದು, 2263 ಮತದಾರರಿದ್ದಾರೆ. ಅಂಚೆ ಮತ ಪತ್ರದ ಮೂಲಕ ಮತದಾನದ ಅವಕಾಶ ಚುನಾವಣಾ ಆಯೋಗ ನೀಡಿದ್ದು, ಅಂಗವಿಕಲರಿಗೆ, 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, ಕೋವಿಡ್ ರೋಗಿಗಳಿಗೆ ಅಂಚೆ ಪತ್ರದ ಮೂಲಕ ಮತದಾನ ಮಾಡಲು ವ್ಯವಸ್ಥೆ ಮಾಡಲಾಗುವುದು. ಸೇವಾ ಮತದಾರರಿಗೆ ಅಂಚೆ ಪತ್ರದ ಮೂಲಕ ಮತದಾನ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ಚುನಾವಣಾ ಕಾರ್ಯ ಸುಗಮವಾಗಿ ನಿರ್ವಹಿಸಲು ವಿವಿಧ ತಂಡಗಳನ್ನು ರಚಿಸಲಾಗಿದೆ. ಶಿರಸಿಯಲ್ಲಿ 14, ಸಿದ್ದಾಪುರದಲ್ಲಿ 12 ಸೇರಿದಂತೆ ಒಟ್ಟೂ 26 ಸೆಕ್ಟರ್ ಆಫೀಸರ್, ಅಕೌಂಟಿಂಗ್ ಟೀಮ್ ೧, ವಿವಿಟಿ ೧, ಶಿರಸಿ 6, ಸಿದ್ದಾಪುರ 3 ಒಟ್ಟೂ ೯ ವಿಎಸ್.ಟಿ, ಶಿರಸಿಯಲ್ಲಿ ೧ ಮತ್ತು ಸಿದ್ದಾಪುರದಲ್ಲಿ ೨ ತನಿಖಾ ಠಾಣೆ ತೆರೆಯಲಾಗಿದೆ ಎಂದರು.ಮಾದರಿ ನೀತಿ ಸಂಹಿತೆ ಜೂ. 6ರ ವರೆಗೆ ಜಾರಿಯಲ್ಲಿದ್ದು, ರಾಜಕೀಯ ಸಂಬಂಧಿಸಿದ ಬ್ಯಾನರ್, ಬಂಟಿಂಗ್, ಪೋಸ್ಟರ್‌ಗಳನ್ನು ತೆಗೆಯಲು ವ್ಯವಸ್ಥೆ ಮಾಡಲಾಗಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಎಫ್ಎಸ್‌ಟಿ, ಎಸ್ಎಸ್‌ಟಿ, ವಿಎಸ್‌ಟಿ ಹಾಗೂ ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಶಿರಳಗಿ, ಚೂರಿಕಟ್ಟೆ, ಚಿಪಗಿಯಲ್ಲಿ ತನಿಖಾ ಠಾಣೆ ಬಿಗಿಗೊಳಿಸಲಾಗಿದೆ.
₹50 ಸಾವಿರಕ್ಕಿಂತ ಹೆಚ್ಚಿನ ಹಣ ಸಾಗಿಸುವಾಗ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ರಾತ್ರಿ ೧೦ ಗಂಟೆಯಿಂದ ಬೆಳಗ್ಗೆ ೬ ಗಂಟೆಯವರೆಗೆ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂದು ಧ್ವನಿವರ್ಧಕ ಬಳಕೆ, ಚುನಾವಣೆಗೆ ಸಂಬಂಧಿಸಿದ ಸಭೆ- ಸಮಾರಂಭಗಳಿಗೆ ಅವಕಾಶವಿಲ್ಲ. ಅಭ್ಯರ್ಥಿಗಳು, ರಾಜಕೀಯ ಪಕ್ಷದವರು ಮಾದರಿ ನೀತಿ ಸಂಹಿತೆ ಉಲ್ಲಂಘನೆ ಮಾಡಬಾರದು. ಚುನಾವಣೆಗೆ ಸಂಬಂಧಿಸಿ ಕಂಟ್ರೋಲ್ ರೂಮ್ ತೆರೆಯಲಾಗಿದ್ದು, ದೂರುಗಳಿದ್ದರೆ ದೂ. 08384 -226382 ಸಂಪರ್ಕಿಸಬಹುದು. ಮತದಾರರ ಮಾಹಿತಿ, ಅಭ್ಯರ್ಥಿಗಳ ಮಾಹಿತಿ, ಮತಗಟ್ಟೆಗಳ ಮಾಹಿತಿ, ಮತದಾರರ ಗುರುತಿನ ಚೀಟಿಗೆ ಸಂಬಂಧಿಸಿದ ಸೇರ್ಪಡೆ, ತಿದ್ದುಪಡಿಗೆ ಅವಕಾಶವಿದೆ. ಸುವಿಧಾ ಪೋರ್ಟಲ್ ಮೂಲಕ ನಾಮಪತ್ರ ಸಲ್ಲಿಕೆ, ರಾಜಕೀಯ ಪಕ್ಷದ ಕಾರ್ಯಕ್ರಮಕ್ಕೆ ಅನುಮತಿ ಪಡೆಯಬೇಕು ಎಂದರು.ಮಾರಿಕಾಂಬಾ ಜಾತ್ರೆಗೆ ವೈಯಕ್ತಿಕವಾಗಿ ಶುಭ ಕೋರುವ ಜಾಹೀರಾತು, ಬ್ಯಾನರ್ ಮಾತ್ರ ಬಳಸಬೇಕು. ಪಕ್ಷದ ಚಿಹ್ನೆ, ಹೆಸರು ಕಂಡುಬಂದಲ್ಲಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳಿಗೆ ತಹಸೀಲ್ದಾರ್ ಕಚೇರಿ ಅಥವಾ ಸಹಾಯಕ ಆಯುಕ್ತರ ಕಚೇರಿಯಲ್ಲಿ ಪರವಾನಗಿ ಪಡೆಯಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ್ ಶ್ರೀಕೃಷ್ಣ ಕಾಮಕರ ಇದ್ದರು.