ಹಲವರಿಗೆ ಸೂಕ್ತ ಸೌಲಭ್ಯ ದೊರೆಯದೆ ಮತ್ತೊಂದು ಹಾದಿಗೆ ಸಾಗುತ್ತಾರೆ: ಬಿ.ಎ.ಪಾಟೀಲ್

| Published : Apr 13 2025, 02:06 AM IST

ಹಲವರಿಗೆ ಸೂಕ್ತ ಸೌಲಭ್ಯ ದೊರೆಯದೆ ಮತ್ತೊಂದು ಹಾದಿಗೆ ಸಾಗುತ್ತಾರೆ: ಬಿ.ಎ.ಪಾಟೀಲ್
Share this Article
  • FB
  • TW
  • Linkdin
  • Email

ಸಾರಾಂಶ

ಎರಡನೇ ವಿಶ್ವ ಮಹಾಯುದ್ಧದ ನಂತರ ಮಾನವ ಹಕ್ಕುಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಯುತ್ತಿದೆ. 1948 ರಂದು ವಿಶ್ವ ಸಂಸ್ಥೆಯಿಂದ ಹಕ್ಕುಗಳ ಜಾರಿಗೆ ನಿರ್ಧರಿಸಲಾಯಿತು. ಭಾರತದ ಸಂವಿಧಾನವೂ ನೈಸರ್ಗಿಕ ಹಕ್ಕುಗಳಾಗಿ ವಾನವ ಹಕ್ಕುಗಳನ್ನು ಗುರುತಿಸಿ ನಮಗೆ ನೀಡಿದೆ. ಎಂತಹ ತುರ್ತು ಪರಿಸ್ಥಿತಿಯಲ್ಲೂ ಈ ಹಕ್ಕುಗಳನ್ನು ಮೊಟಕುಗೊಳಿಸಲಾಗಲಿ, ನಿಯಂತ್ರಣ ಹೇರುವುಕ್ಕೆ ಯಾರಿಂದಲೂ ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಸಮಾಜದಲ್ಲಿ ಸೂಕ್ತ ಉದ್ಯೋಗ, ಸೌಲಭ್ಯ ದೊರೆಯದ ಕಾರಣ ಮತ್ತೊಂದು ಹಾದಿಯತ್ತ ಸಾಗುತ್ತಾರೆ ಎಂದು ವಿಶೇಷ ನ್ಯಾಯಾಲಯಗಳ ಛೇರ್ಮನ್‌ ಹಾಗೂ ಹೈ ಕೋರ್ಟ್‌ ನ್ಯಾಯಮೂರ್ತಿ ಬಿ.ಎ. ಪಾಟೀಲ್‌ ಹೇಳಿದರು.

ನಗರದ ಜಯಲಕ್ಷ್ಮೀಪುರಂನ ಮಹಾಜನ ಕಾನೂನು ಕಾಲೇಜಿನಲ್ಲಿ ಆಯೋಜಿಸಿದ್ದ ಸಮಕಾಲೀನ ಯುಗದಲ್ಲಿ ಮಾನವ ಹಕ್ಕುಗಳ ಪ್ರಸ್ತುತತೆ ಮತ್ತು ಹೊಸ ಸವಾಲು ಕುರಿತ ಒಂದು ದಿನದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಎರಡನೇ ವಿಶ್ವ ಮಹಾಯುದ್ಧದ ನಂತರ ಮಾನವ ಹಕ್ಕುಗಳ ಬಗ್ಗೆ ಗಂಭೀರವಾದ ಚರ್ಚೆ ನಡೆಯುತ್ತಿದೆ. 1948 ರಂದು ವಿಶ್ವ ಸಂಸ್ಥೆಯಿಂದ ಹಕ್ಕುಗಳ ಜಾರಿಗೆ ನಿರ್ಧರಿಸಲಾಯಿತು. ಭಾರತದ ಸಂವಿಧಾನವೂ ನೈಸರ್ಗಿಕ ಹಕ್ಕುಗಳಾಗಿ ವಾನವ ಹಕ್ಕುಗಳನ್ನು ಗುರುತಿಸಿ ನಮಗೆ ನೀಡಿದೆ. ಎಂತಹ ತುರ್ತು ಪರಿಸ್ಥಿತಿಯಲ್ಲೂ ಈ ಹಕ್ಕುಗಳನ್ನು ಮೊಟಕುಗೊಳಿಸಲಾಗಲಿ, ನಿಯಂತ್ರಣ ಹೇರುವುಕ್ಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಭಯೋತ್ಪಾದನೆ ಇಂದು ಮಾನವ ಹಕ್ಕುಗಳ ರಕ್ಷಣೆಯಲ್ಲಿ ದೊಡ್ಡ ಸವಾಲಾಗಿದೆ. ನಕ್ಸಲಿಸಂ ನಲ್ಲಿ ತೊಡಗುವ ಅನೇಕರು, ಉತ್ತಮ ಶೈಕ್ಷಣಿಕ ಸಾಧನೆ ಮಾಡಿದರು. ಅವರಿಗೆ ಈ ದೃಷ್ಟಿಕೋನದಲ್ಲೂ ಸಮಸ್ಯೆ ಗಮನಿಸಬೇಕು. ಮೂಲಭೂತ ಹಕ್ಕುಗಳಿಗೆ ನಿಯಂತ್ರಣವಿದ್ದರೂ, ಮಾನವ ಹಕ್ಕುಗಳಿಗೆ ಭಿನ್ನವಾದ ಸ್ಥಾನವಿದೆ ಹಾಗೂ ಅವುಗಳಿಗೆ ಕಾನೂನಾತ್ಮಕವಾಗಿ ರಕ್ಷಣೆ ನೀಡಲಾಗಿದೆ ಎಂದರು.

ಮಾನವ ಹಕ್ಕುಗಳ ರಕ್ಷಣೆಗೆ ಹಲವು ಕಾನೂನುಗಳು, ವ್ಯಾಖ್ಯಾನಗಳು ರೂಪುಗೊಂಡಿವೆ. ಮಹಿಳೆಯರ ರಕ್ಷಣೆಗೆ ತ್ವರಿತವಾಗಿ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ. ಅದನ್ನು ನಿಯಂತ್ರಿಸಲು ಯೋಜನೆಗಳನ್ನು ರೂಪಿಸಬೇಕು. ಪ್ರಾದೇಶಿಕ ಕಾನೂನುಗಳಿದ್ದರೂ ರಕ್ಷಣೆಯ ಕೊರತೆ ಇದೆ. ಈ ವಿಚಾರದಲ್ಲಿ ನಾವೆಲ್ಲರೂ ಗಮನಹರಿಸಬೇಕು ಎಂದರು.

ಬಹಳಷ್ಟು ಜನ ಬಡತನದಲ್ಲಿದ್ದು, ಶಿಕ್ಷಣದ ಕೊರತೆಯಿಂದಾಗಿ ಕಾನೂನಿನ ಅರಿವು ಇಲ್ಲದಂತಾಗಿದೆ. ಉತ್ತಮ ಶಿಕ್ಷಣ ನೀಡುವ ಮೂಲಕ ಹಕ್ಕುಗಳ ರಕ್ಷಣೆ, ನ್ಯಾಯ ಪಡೆಯುವಲ್ಲಿ, ಸವಾಲನ್ನು ಎದುರಿಸುವ ಅಗತ್ಯವಿದೆ. ಮಾನವ ಹಕ್ಕುಗಳ ರಕ್ಷಣೆಗೆ ಸಮುದಾಯದ ಚೌಕಟ್ಟಿನಲ್ಲಿ ನ್ಯಾಯ ಒದಗಿಸುವುದು ಕಷ್ಟವಾಗುತ್ತಿದೆ. ಇದಕ್ಕೆ ಎಲ್ಲರೂ ಹೊಣೆಗಾರರಾಗಿದ್ದಾರೆ. ಪ್ರತಿಯೊಬ್ಬರೂ ತಮ್ಮ ತಪ್ಪು ಅರಿತುಕೊಳ್ಳುವುದು ಅಗತ್ಯ ಎಂದು ಅವರು ಹೇಳಿದರು.

ಇಂದು ಬಹಳಷ್ಟು ಜನ ಸೂಕ್ತ ಕಾನೂನು ಸಹಕಾರ ಸಿಗದೆ ಜೈಲಿನಲ್ಲಿಯೇ ಇದ್ದಾರ. ವಕೀಲರು, ನ್ಯಾಯಾಧೀಶರು ತಮ್ಮ ಕರ್ತವ್ಯದಲ್ಲಿ ಸ್ವಲ್ಪ ಜಾಣ್ಮೆ ತೋರಿದರೂ ಹಲವು ಸಮಸ್ಯೆಗಳು ನಿವಾರಣೆ ಆಗುತ್ತದೆ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಕಾನೂನು ವಿವಿ ಕುಲಪತಿ ಡಾ.ಸಿ. ಬಸವರಾಜು ಮಾತನಾಡಿ ಮಾನವ ಹಕ್ಕುಗಳು ನಮ್ಮ ದೇಶಕ್ಕಲ್ಲದೆ, ಇಡೀ ವಿಶ್ವಕ್ಕೆ ಅನ್ವಯಿಸುವಂತಹ ಹಕ್ಕುಗಳು. ಈ ಎಲ್ಲಾ ಹಕ್ಕುಗಳು ಮಾನವನಿಗೆ ಪ್ರಕೃತಿದತ್ತವಾಗಿ ಬಂದಿವೆ. ಮನುಷ್ಯನ ಅಸ್ತಿತ್ವಕ್ಕೆ, ವ್ಯಕ್ತಿತ್ವ ರೂಪಿಸಿಕೊಳ್ಳಲು ಮಾನವ ಹಕ್ಕುಗಳ ಅತ್ಯಂತ ಅವಶ್ಯಕ. ಮಾನವ ಹಕ್ಕುಗಳ ಉಲ್ಲೇಖವು ವೇದ, ಪುರಾಣಗಳಲ್ಲೇ ತಿಳಿಸಲಾಗಿದೆ ಎಂದರು.

ಇಂದು ಸಮಾಜದಲ್ಲಿ ಅನಾಚಾರ ಹೆಚ್ಚಾಗುತ್ತಿದ್ದು, ಪೊಲೀಸ್ ಠಾಣೆ ಮತ್ತು ಕಾರಾಗೃಹಗಳಲ್ಲಿಯೇ ಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿದೆ. ನ್ಯಾಯ ಪಡೆಯುಲು ಧಾವಿಸಿ, ರಕ್ಷಣೆ ಮತ್ತು ನ್ಯಾಯ ಪಡೆಯಬೇಕಾದ ಜಾಗವೇ ಜನಸ್ನೇಹಿಯಾಗದೆ ಜನ ವಿರೋಧಿಯಾಗಿ ಬದಲಾಗುತ್ತಿದೆ. ಇಂತಹ ಅಮಾನವೀಯ, ಅನಾಚಾರದ ಸ್ಥಿತಿ ಬದಲಾಗಬೇಕು. ಮನುಷ್ಯ ಪ್ರಾಣಿಯಂತೆ ಬದುಕುವುದಕ್ಕಾಗಲೀ, ವರ್ತಿಸುವುದಕ್ಕಾಗಲಿ ಮಾನವ ಹಕ್ಕುಗಳನ್ನು ಸಂವಿಧಾನ ನೀಡಿಲ್ಲ. ಬದಲಾಗಿ ಮಾನವೀಯತೆಯಿಂದ ಮನುಷ್ಯನಾಗಿ ಬದುಕಲು ಮತ್ತು ಮಾನವ ಸರ್ವತೋಮುಖ ಅಭಿವೃದ್ಧಿ ಹೊಂದುವುದೇ ಮಾನವ ಹಕ್ಕಿನ ಮೂಲ ತತ್ವ ಮತ್ತು ಗುರಿ ಎಂದು ಅವರು ಬಣ್ಣಿಸಿದರು.

ಮಹಾಜನ ಶಿಕ್ಷಣ ಸಮಾಜ ಕಾರ್ಯದರ್ಶಿ ಡಾ.ಟಿ. ವಿಜಯಲಕ್ಷಿ ಮುರಳೀಧರ್, ಆಡಳಿತಾಧಿಕಾರಿ ಪ್ರೊ.ಪಿ. ಸರೋಜಮ್ಮ, ಮಹಾಜನ ಕಾನೂನು ಕಾಲೇಜು ಪ್ರಾಂಶುಪಾಲೆ ಕೆ. ಸೌಮ್ಯಾ ಇದ್ದರು.