ಹೊಳೆನರಸೀಪುರದ ಲಕ್ಷ್ಮಿನರಸಿಂಹನ ರಥೋತ್ಸವದಲ್ಲಿ ಕಾಲ್ತುಳಿತ, ಹಲವರಿಗೆ ಗಾಯ

| Published : Mar 25 2024, 12:50 AM IST

ಹೊಳೆನರಸೀಪುರದ ಲಕ್ಷ್ಮಿನರಸಿಂಹನ ರಥೋತ್ಸವದಲ್ಲಿ ಕಾಲ್ತುಳಿತ, ಹಲವರಿಗೆ ಗಾಯ
Share this Article
  • FB
  • TW
  • Linkdin
  • Email

ಸಾರಾಂಶ

ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮ ರಥೋತ್ಸವವು ಶೋಭಕೃತನಾಮ ಸಂವತ್ಸರ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷದ ಪೂರ್ಣಿಮೆ ಭಾನುವಾರ ಪುಬ್ಬ ನಕ್ಷತ್ರದಲ್ಲಿ ವಿಜೃಂಭಣೆಯಿಂದ ಜರುಗಿತು.

ಪುಬ್ಬ ನಕ್ಷತ್ರದಲ್ಲಿ ಸಂಪನ್ನಗೊಂಡ ಜಾತ್ರೆ । ಯಾವುದೇ ಅವಘಡ ಇಲ್ಲ । ಶಾಸಕ ಎಚ್‌.ಡಿ.ರೇವಣ್ಣ ಕುಟುಂಬ ಭಾಗಿ

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮ ರಥೋತ್ಸವವು ಶೋಭಕೃತನಾಮ ಸಂವತ್ಸರ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷದ ಪೂರ್ಣಿಮೆ ಭಾನುವಾರ ಪುಬ್ಬ ನಕ್ಷತ್ರದಲ್ಲಿ ವಿಜೃಂಭಣೆಯಿಂದ ಜರುಗಿತು. ಈ ವೇಳೆ ರಥ ಎಳೆಯುವ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಕಾಲುಜಾರಿ ಕೆಳಗೆ ಬಿದ್ದಾಗ, ಅವರಿಂದಾಗಿ ರಥ ಎಳೆಯುತ್ತಿದ್ದ ಮಹಿಳೆಯರು, ಮಕ್ಕಳು, ಪುರುಷರು ಬಿದ್ದರು, ಆದರೆ ಯಾವುದೇ ದುರ್ಘಟನೆ ಸಂಭವಿಸಲಿಲ್ಲ.

ಈ ವೇಳೆ ಭವಾನಿ ರೇವಣ್ಣ ಮಾತನಾಡಿ, ಹಿಂದಿನಂತೆ ಶ್ರೀ ಸ್ವಾಮಿಯ ಗುರ್ಭಗುಡಿ, ಪ್ರಾಂಗಣ ಹಾಗೂ ಹೊರಾಂಗಣದಲ್ಲಿ ಪುಷ್ಪಾಲಂಕಾರ ಮಾಡಿಸಿ, ಎಂದಿನಂತೆ ಮನ ಇಚ್ಛೆಯಂತೆ ಪೂಜೆ ಮಾಡಿಸಿದ್ದೇವೆ. ೨೦೨೩ನೇ ಮಾರ್ಚ್ ೭ರಂದು ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಬೇರೆ ಪಕ್ಷದ ಕಾರ್ಯಕರ್ತರು ಪ್ರಸಾದ ವ್ಯವಸ್ಥೆ ಕುರಿತು ಅಡಚಣೆ ಮಾಡಿದ್ದರು. ಇತ್ತೀಚೆಗೆ ನಡೆದ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ೨೦೨೪ರ ರಥೋತ್ಸವ ಸಂದರ್ಭದಲ್ಲಿ ಶಾಸಕರ ಮನೆಯಿಂದ ಪ್ರಸಾದದ ವ್ಯವಸ್ಥೆ ಮಾಡಬಾರದು ಎಂದು ಬೇರೆ ಪಕ್ಷದ ಕಾರ್ಯಕರ್ತರು ಒತ್ತಾಯಿಸಿದ್ದರು. ಇದು ನಮ್ಮ ಕುಟುಂಬದ ಜಾತ್ರೆಯಲ್ಲ, ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ಎಂದರು.

ಬ್ರಹ್ಮರಥೋತ್ಸವದ ಅಂಗವಾಗಿ ಬೆಳಗಿನ ಜಾವ ೩ ಗಂಟೆಗೆ ಶ್ರೀ ಸ್ವಾಮಿಯ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕ, ಅರ್ಚನೆ, ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಿ, ಶ್ರೀ ಉತ್ತಾರಾಧಿಮಠ ಸಮರ್ಪಿಸಿರುವ ವಜ್ರಾಭರಣಗಳಿಂದ ಅಲಂಕರಿಸಿ, ಪೂಜಿಸಲಾಯಿತು. ಸೂರ್ಯ ಮಂಡಲೋತ್ಸವ, ನಿತ್ಯಾರಾಧನೆ, ಬಲಿಪ್ರಧಾನ, ಕೃಷ್ಣ ಗಂಧೋತ್ಸವ ನಡೆಸಲಾಯಿತು. ವಿವಿಧ ಪುಷ್ಪಗಳಿಂದ ವಿಶೇಷವಾಗಿ ಅಲಂಕರಿಸಿದ್ದ ಶ್ರೀ ಸ್ವಾಮಿಯ ಉತ್ಸವ ಮೂರ್ತಿಗಳನ್ನು ರಥ ಬೀದಿಯಲ್ಲಿ ಉತ್ಸವ ನಡೆಸಲಾಯಿತು.

ಚುನಾವಣೆ ನೀತಿ ಸಂಹಿತಿ ಜಾರಿ ಇದ್ದ ಕಾರಣದಿಂದ ತಾಲೂಕು ಆಡಳಿತದಲ್ಲಿ ಶ್ರೀ ಸ್ವಾಮಿಯ ಜಾತ್ರಾ ಮಹೋತ್ಸವ ಸುಸೂತ್ರವಾಗಿ ಜರುಗಿತು. ತಹಸೀಲ್ದಾರ್ ಪಿ.ಸಿ.ಪ್ರವೀಣ್ ಕುಮಾರ್, ಡಿವೈಎಸ್ಪಿ ಅಶೋಕ್, ವೃತ್ತ ನಿರೀಕ್ಷಕ ಸುರೇಶ್ ಕುಮಾರ್, ಇಒ ಕುಸುಮಾಧರ್, ಸಬ್ ಇನ್‌ಸ್ಪೆಕ್ಟರ್ ಅಜಯ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಮಹೇಂದ್ರ, ಉಪ ತಹಸೀಲ್ದಾರ್ ರೂಪೇಶ್, ಆರ್‌ಐ ಸತೀಶ್, ಲೆಕ್ಕಾಧಿಕಾರಿ ಹರೀಶ್ ಬಣಕರ್, ಕಂದಾಯ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಹಾಗೂ ಇತರರು ತೋರಿದ ಕಾರ್ಯದಕ್ಷತೆಯಿಂದಾಗಿ ಜಾತ್ರಾ ಮಹೋತ್ಸವ ನಿರ್ವಿಘ್ನವಾಗಿ ನಡೆಯಿತು.

ಹಿರಿಯ ಅರ್ಚಕರಾದ ರಾಮಸ್ವಾಮಿಭಟ್ಟರ ಮಾರ್ಗದರ್ಶನದಲ್ಲಿ ಆಗಮಿಕ ಶ್ರೀಧರ ಭಟ್ಟರು, ವೆಂಕಟನರಸಿಂಹನ್, ನಾರಾಯಣ, ರಾಮ ಪ್ರಸಾದ್, ಕಿಕ್ಕೇರಿ ಶ್ರೀನಿಧಿ, ಆನೆಕನ್ನಂಬಾಡಿ ರವಿ, ಶ್ರೀನಿಧಿನರಸಿಂಹನ್, ಮಾವಿನಕೆರೆ ಜನಾರ್ಧನ ಭಟ್ಟರು, ವಲ್ಲಭ, ಸಿಂಹಾದ್ರಿ ಪೂಜಾ ಕೈಂಕರ್ಯ ನೆರವೇರಿಸಿದರು.

ರಥೋತ್ಸವದಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಎಚ್.ಡಿ.ರೇವಣ್ಣ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಭವಾನಿ ರೇವಣ್ಣ, ಉದ್ಯಮಿ ಟಿ.ಶಿವಕುಮಾರ್, ಪುರಸಭೆ ಮಾಜಿ ಅಧ್ಯಕ್ಷೆ ಸುಧಾ, ನಳಿನಿ, ದೊಡ್ಡಮಲ್ಲೇಗೌಡ ಹಾಗೂ ಜ್ಯೋತಿ ಮಂಜುನಾಥ್, ಮಾಜಿ ಉಪಾಧ್ಯಕ್ಷೆ ತ್ರಿಲೋಚನಾ, ಪುರಸಭಾ ಸದಸ್ಯರು ಇದ್ದರು.

ಪ್ರಸಾದದ ವ್ಯವಸ್ಥೆ

ಶ್ರೀ ಲಕ್ಷ್ಮೀನರಸಿಂಹಸ್ವಾಮಿಯ ದರ್ಶನದ ವ್ಯವಸ್ಥೆ ಮತ್ತು ದೇವಾಲಯದ ಪ್ರಾಂಗಣದಲ್ಲಿ ಪ್ರಸಾದ ರೂಪದಲ್ಲಿ ಪೊಂಗಲ್, ಪುಳಿಯೊಗರೆ ಹಾಗೂ ಮೊಸರನ್ನದ ವ್ಯವಸ್ಥೆ ಮತ್ತು ವಿತರಣೆ ಕಾರ್ಯವು ಸುಸೂತ್ರವಾಗಿ ಜರುಗಿತು. ಸ್ಕೌಟ್ಸ್‌ನ ರೇಂಜರ್ಸ್ ಅಂಡ್ ರೋವರ್ಸ್ಸ್ ವಿದ್ಯಾರ್ಥಿಗಳು ಸೇವೆ ಸಲ್ಲಿಸಿದರು.

ಹೊಳೆನರಸೀಪುರದ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವದ ಸಂದರ್ಭದಲ್ಲಿ ಒಬ್ಬರು ಕಾಲು ಜಾರಿ ಬಿದ್ದ ಕಾರಣ ರಥ ಎಳೆಯುತ್ತಿದ್ದ ಇತರರು ಬಿದ್ದರು.