ಶರಾವತಿ ನದಿಗೆ ಹಲವು ಯೋಜನೆ ಖಂಡನೀಯ

| Published : Mar 02 2025, 01:15 AM IST

ಸಾರಾಂಶ

ಸಾಗರ: ಪರಿಸರದ ಮೇಲಿನ ದೌರ್ಜನ್ಯ ದಿನೆ ದಿನೆ ಹೆಚ್ಚಾಗುತ್ತಿದ್ದು ಮನುಷ್ಯ ಕೇಂದ್ರಿತ ಅಭಿವೃದ್ಧಿಯ ಎದುರು ನಿಸರ್ಗ ಗೌಣ ಎನಿಸ ತೊಡಗಿದೆ ಎಂದು ಸಾಹಿತಿ ಅ.ರಾ.ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದರು.

ಸಾಗರ: ಪರಿಸರದ ಮೇಲಿನ ದೌರ್ಜನ್ಯ ದಿನೆ ದಿನೆ ಹೆಚ್ಚಾಗುತ್ತಿದ್ದು ಮನುಷ್ಯ ಕೇಂದ್ರಿತ ಅಭಿವೃದ್ಧಿಯ ಎದುರು ನಿಸರ್ಗ ಗೌಣ ಎನಿಸ ತೊಡಗಿದೆ ಎಂದು ಸಾಹಿತಿ ಅ.ರಾ.ಶ್ರೀನಿವಾಸ್ ಕಳವಳ ವ್ಯಕ್ತಪಡಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಆಯೋಜಿಸಿದ್ದ ೧೨ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಅವರು ಮಾತನಾಡಿದರು.

ಮಲೆನಾಡಿನ ಜೀವನದಿಯಾದ ಶರಾವತಿ ನದಿಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಯುತ್ತಿದೆ. ಶರಾವತಿ ಟೈಲರೀಸ್ ಯೋಜನೆ ಈಗ ಸದ್ದು ಮಾಡುತ್ತಿದ್ದು, ಪರಿಸರಾಸಕ್ತರು ವಿರೋಧಿಸಿದರೂ ಅದನ್ನು ನಿಲ್ಲಿಸುವ ವಾತಾವರಣ ಕಾಣಿಸುತ್ತಿಲ್ಲ. ಶರಾವತಿಯನ್ನು ತಣ್ಣಗೆ ಹರಿದು ಹೋಗಲು ಸರ್ಕಾರ ಬಿಡುತ್ತಿಲ್ಲ. ಬೆಂಗಳೂರಿನ ಜನರಿಗೆ ಕುಡಿಯುವ ನೀರು ಕೊಡುವ ಯೋಜನೆ, ಟೈಲರೀಸ್ ಯೋಜನೆ ಹೀಗೆ ಹಲವು ಯೋಜನೆಗಳನ್ನು ಶರಾವತಿ ನದಿಯ ಮೇಲೆ ಹೇರುತ್ತಿರುವುದು ಖಂಡನೀಯ ಎಂದರು.

ಈಚೆಗೆ ಶರಾವತಿ ಪಂಪ್ಡ್ ಸ್ಟೋರೇಜ್ ಹೆಸರಿನಲ್ಲಿ ಇನ್ನೊಂದು ಪರಿಸರ ವಿರೋಧಿ ಯೋಜನೆಗೆ ಸರ್ಕಾರ ಮುಂದಾಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅವೈಜ್ಞಾನಿಕ ಎಂದು ಪರಿಸರವಾದಿಗಳು ಹೇಳುತ್ತಿದ್ದಾರೆ. ಉತ್ಪಾದನೆ ಮಾಡುವ ವಿದ್ಯುತ್‌ಗಿಂತ ನೀರು ಮೇಲೆತ್ತಲು ಹೆಚ್ಚು ವಿದ್ಯುತ್ ಬೇಕೆಂದು ಹೇಳಲಾಗುತ್ತಿದೆ.

ಆದರೆ ಸರ್ಕಾರ ಇದಕ್ಕೆ ಕಿವಿಗೊಡುತ್ತಿಲ್ಲ. ಪರಿಸರವನ್ನು ರಕ್ಷಣೆ ಮಾಡಿಕೊಂಡೆ ಅಭಿವೃದ್ಧಿ ಸಾಧಿಸುವ ಹಲವು ಯೋಜನೆ ಇದ್ದಾಗ್ಯೂ ಸರ್ಕಾರ ಏಕೆ ಗಮನ ಹರಿಸುತ್ತಿಲ್ಲ ಎನ್ನುವುದು ಅರ್ಥವಾಗುತ್ತಿಲ್ಲ. ಅಭಿವೃದ್ಧಿ ಹುಚ್ಚು ಹತ್ತಿಸಿಕೊಂಡಿರುವ ಸರ್ಕಾರಕ್ಕೆ ಜನಪರ, ಜೀವಪರ, ಪರಿಸರಪರ ಕಾಳಜಿ ಇಲ್ಲ ಎನ್ನುವುದು ಇಂತಹ ಯೋಜನೆಗಳಿಂದ ಅರ್ಥವಾಗುತ್ತದೆ ಎಂದು ಹೇಳಿದರು.ಆಳುವವರು ಮಾಡುವ ತಪ್ಪುಗಳನ್ನು ಎತ್ತಿ ಹೇಳಿವವರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ಅವರನ್ನು ನಗರ ನಕ್ಸಲರೆಂಬ ಪಟ್ಟ ಕಟ್ಟಿ ಜೈಲಿಗೆ ಕಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಪ್ಪು ಎತ್ತಿ ಹೇಳಲು ಸಹ ಹಿಂದೇಟು ಹಾಕುವ ಸ್ಥಿತಿ ನಿರ್ಮಾಣವಾಗಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ಶಾಸಕ ಗೋಪಾಲಕೃಷ್ಣ ಬೇಳೂರು, ರಂಗಾಯಣ ನಿರ್ದೇಶಕ ಪ್ರಸನ್ನ.ಡಿ, ವಿ.ಗಣೇಶ್, ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಪ್ರಮುಖರಾದ ಬಿ.ಆರ್.ಜಯಂತ್, ಚಂದ್ರಶೇಖರ್ ನಾಯ್ಕ್, ಗಣಪತಿ ಮಂಡಗಳಲೆ, ಶ್ರೀನಿವಾಸ್‌.ಆರ್ ಮತ್ತಿತರರಿದ್ದರು.