ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ ಹಲವು ಯೋಜನೆ: ಜಿಲ್ಲಾ ಪಂಚಾಯಿತಿ ಸಿಇಒ

| Published : Feb 02 2025, 01:01 AM IST

ಸಾರಾಂಶ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶನಿವಾರ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದಿಂದ ಶೈಕ್ಷಣಿಕ ಶಾಲಾ ಯೋಜನೆ, ಗಂಗಾ ಕಲ್ಯಾಣ, ಸ್ವಾವಲಂಬಿ ಸಾರಥಿ(ಟ್ಯಾಕ್ಸಿ), ಸ್ವಯಂ ಉದ್ಯೋಗ ಸಾಲ ಯೋಜನೆ(ವಾಣಿಜ್ಯ ಬ್ಯಾಂಕ್‌ಗಳ ಸಹಯೋಗದಲ್ಲಿ), ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ವ್ಯಾಸಂಗಕ್ಕೆ ಸಾಲ ಯೋಜನೆ ಹೀಗೆ ಹಲವು ಯೋಜನೆಗಳಿವೆ. ಇವುಗಳನ್ನು ಬಳಸಿಕೊಂಡು ಸಾಮಾಜಿಕ ಹಾಗೂ ಆರ್ಥಿಕವಾಗಿ ಪ್ರಗತಿ ಸಾಧಿಸುವಂತೆ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಕರೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸರ್ಕಾರದ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯಬೇಕು. ಮಡಿವಾಳ ಮಾಚಿದೇವರ ಆದರ್ಶಗಳನ್ನು ತಿಳಿದುಕೊಳ್ಳುವಂತಾಗಬೇಕು ಎಂದು ಅವರು ತಿಳಿಸಿದರು.

ನಿವೃತ್ತ ಶಿಕ್ಷಕ ಬಿ.ಸಿ.ಶಂಕರಯ್ಯ ಮಾತನಾಡಿ, ಮಡಿವಾಳ ಮಾಚಿದೇವರು 12 ನೇ ಶತಮಾನದಲ್ಲಿ ನಾಡಿನಲ್ಲಿ ತಮ್ಮದೇ ಆದ ಕ್ರಾಂತಿ ಉಂಟು ಮಾಡಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರ ಜೊತೆ ಮಡಿವಾಳ ಮಾಚಿದೇವರು ತಮ್ಮ ವೃತ್ತಿ ಗೌರವಿಸಿ ಸಮಾಜದಲ್ಲಿ ಎಲ್ಲರೂ ಸಮಾನರೂ ಎಂಬ ಸಂದೇಶ ಸಾರಿದ್ದಾರೆ ಎಂದರು.

ಮಡಿವಾಳ ಮಾಚಿದೇವರ ವೈಚಾರಿಕತೆ, ವೈಜ್ಞಾನಿಕತೆ ಮೆಚ್ಚುವಂತದ್ದು, ಮಡಿವಾಳ ಮಾಚಿದೇವರ ವಚನಗಳು ಶ್ರೇಷ್ಠವಾಗಿದ್ದು, ಪ್ರತಿಯೊಂದು ವಚನಗಳು ಅರ್ಥಪೂರ್ಣವಾಗಿವೆ. ಮಡಿವಾಳ ಮಾಚಿದೇವರು 12 ನೇ ಶತಮಾನದಲ್ಲಿ ವಚನಗಳನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸಮಾಜದಲ್ಲಿ ಸಮಾನತೆ ತರಲು ಶ್ರಮಿಸಿದ್ದಾರೆ ಎಂದು ನುಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ದೊಡ್ಡೇಗೌಡ ಮಾತನಾಡಿ, ಮಡಿವಾಳ ಮಾಚಿದೇವರ ಜೀವನ ಮೌಲ್ಯ ತಿಳಿದುಕೊಳ್ಳಬೇಕು. ಕಾಯಕವೇ ಕೈಲಾಸವೆಂಬಂತೆ ವೃತ್ತಿಯಿಂದ ದೇವರನ್ನು ಕಾಣಬೇಕು ಎಂದು ಶರಣರು ಹೇಳಿದ್ದಾರೆ. ಆ ನಿಟ್ಟಿನಲ್ಲಿ ಪ್ರತಿಯೊಂದು ವೃತ್ತಿಯನ್ನು ಗೌರವಿಸಬೇಕು ಎಂದರು.

ಮಡಿವಾಳರ ಅಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಜಿ.ಸುಕುಮಾರ್ ಮಾತನಾಡಿ, ಸರ್ಕಾರದ ವತಿಯಿಂದ ಫೆ.1 ರಂದು ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಗುತ್ತದೆ. ಮಡಿವಾಳರ ಅಭಿವೃದ್ಧಿ ಸಂಘದಿಂದ 16ರಂದು ಮಡಿವಾಳ ಮಾಚಿದೇವರ ಜಯಂತಿ ಆಚರಿಸಲಾಗುತ್ತಿದೆ ಎಂದರು.

ಬ್ಲಾಸಂ ಶಾಲೆಯ ಮುಖ್ಯೋಪಾಧ್ಯಾಯ ಅನಸೂಯ ಮಾತನಾಡಿ, 12ನೇ ಶತಮಾನದಲ್ಲಿ ವಚನಗಳ ಮೂಲಕ ಶರಣರು ಜಾಗೃತಿ ಮೂಡಿಸಿದ್ದಾರೆ. ಆ ನಿಟ್ಟಿನಲ್ಲಿ ಮಡಿವಾಳ ಮಾಚಿದೇವರು ಬಸವಣ್ಣ ಅವರ ಜತೆಗೂಡಿ ಸಮ ಸಮಾಜ ನಿರ್ಮಾಣಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದರು.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಪಿ.ಪಿ.ಕವಿತ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಮಹಾದೇವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ಶಿವಶಂಕರ, ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇದ್ದರು.